ಹಸಿ ಮೆಣಸಿನಕಾಯಿ ದರ ಕುಸಿತ, ರೈತನಿಂದ ಬೆಳೆ ನಾಶ

KannadaprabhaNewsNetwork |  
Published : Jul 23, 2026, 02:00 AM IST
ದರ ಕುಸಿತದಿಂದ ಬೇಸತ್ತು ಧಾರವಾಡ ತಾಲೂಕಿನ ಗೋವನಕೊಪ್ಪದ ರೈತ ಶಿವಪ್ಪ ಮೆಣಸಿನಕಾಯಿ ಬೆಳೆ ನಾಶಪಡಿಸಿದರು. | Kannada Prabha

ಸಾರಾಂಶ

ಧಾರವಾಡ ತಾಲೂಕಿನ ಗೋವನಕೊಪ್ಪದ ಶಿವಪ್ಪ ಚೌಡಪ್ಪನವರ ಎಕರೆಗೆ ₹ 60 ಸಾವಿರ ವೆಚ್ಚದಲ್ಲಿ ಮೂರು ಎಕರೆ ಮೆಣಸಿನಕಾಯಿ ಬೆಳೆದಿದ್ದರು. ಆದರೆ, ಏಕಾಏಕಿ ದರ ಕುಸಿತದಿಂದ ಬೇಸತ್ತು ಹಚ್ಚು ಹಸಿರಿನ ಮೆಣಸಿನಕಾಯಿ ಗಿಡಗಳನ್ನು ಟ್ರ್ಯಾಕ್ಟರ್‌ನಿಂದ ನಾಶಪಡಿಸಿದ್ದಾರೆ.

ಧಾರವಾಡ:

ಈ ಬಾರಿ ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಅರೆಮಲೆನಾಡು ಧಾರವಾಡ ಸಹ ಬರಗಾಲಕ್ಕೆ ಹೊರತಾಗಿಲ್ಲ. ಸಾಕಷ್ಟು ಮಳೆಯ ಕೊರತೆಯ ಮಧ್ಯೆಯೂ ಕೆಲವು ರೈತರು ಕೆರೆ-ಕಟ್ಟೆ, ಹಳ್ಳ-ಕೊಳ್ಳಗಳಿಂದ ನೀರು ಹಾಯಿಸಿ ತಮ್ಮ ಬೆಳೆ ಉಳಿಸಿಕೊಂಡಿದ್ದಾರೆ. ಇನ್ನೇನು ಬೆಳೆ ಕೈಗೆ ಬಂತು ಎನ್ನುವಷ್ಟರಲ್ಲಿ ದರ ಕುಸಿತದಿಂದ ಬೇಸತ್ತ ರೈತನೋರ್ವ ತಾನು ಬೆಳೆದ ಹಸಿ ಮೆಣಸಿನಕಾಯಿ ಬೆಳೆಯನ್ನು ಹರಗಿದ್ದಾನೆ.

ತಾಲೂಕಿನ ಗೋವನಕೊಪ್ಪದ ಶಿವಪ್ಪ ಚೌಡಪ್ಪನವರ ಎಕರೆಗೆ ₹ 60 ಸಾವಿರ ವೆಚ್ಚದಲ್ಲಿ ಮೂರು ಎಕರೆ ಮೆಣಸಿನಕಾಯಿ ಬೆಳೆದಿದ್ದರು. ಆದರೆ, ಏಕಾಏಕಿ ದರ ಕುಸಿತದಿಂದ ಬೇಸತ್ತು ಹಚ್ಚು ಹಸಿರಿನ ಮೆಣಸಿನಕಾಯಿ ಗಿಡಗಳನ್ನು ಟ್ರ್ಯಾಕ್ಟರ್‌ನಿಂದ ನಾಶಪಡಿಸಿದ್ದಾರೆ. ಗಿಡಗಳ ತುಂಬ ಮೆಣಸಿನಕಾಯಿ ಇದ್ದರೂ ಅನಿವಾರ್ಯವಾಗಿ ಬೆಲೆ ಇಲ್ಲದೇ ಮೆಣಸಿನಕಾಯಿ ಭೂಮಿ ಪಾಲಾಗಬೇಕಾಯಿತು ಎಂದು ಉಳಿದ ರೈತರು ಮಮ್ಮಲ ಮರುಗಿದರು.

ಒಂದೊಂದು ಗಿಡಗಳು ಮೈತುಂಬಾ ಕಾಯಿ ಹೊತ್ತುಕೊಂಡು ನಿಂತಿವೆ. ಇದೀಗ ಮೆಣಸಿನಕಾಯಿ ಕಿತ್ತು, ಮಾರುಕಟ್ಟೆಗೆ ಕಳಿಸುವ ಸಮಯ. ಈ ಹೊತ್ತಿಗೆ ಮಾರುಕಟ್ಟೆಯಲ್ಲಿ ದರ ತೀವ್ರವಾಗಿ ಕುಸಿದು ಹೋಗಿದೆ. ಹತ್ತು ಕೆಜಿ ಕಾಯಿಗೆ ಬರೀ ₹ 60ಕ್ಕೆ ದಲ್ಲಾಳಿಗಳು ಕೇಳುತ್ತಿದ್ದಾರೆ. ಆದ್ದರಿಂದ ನೊಂದು ಬೆಳೆಯನ್ನು ನಾಶ ಮಾಡಿ ಮತ್ತೆನಾದರೂ ಬಿತ್ತಲು ಚಿಂತಿಸಿದ್ದೇವೆ ಎಂದು ರೈತ ಶಿವಪ್ಪ ಕಣ್ಣೀರು ಹಾಕಿದರು.

ಈ ಬಾರಿ ಜಿಲ್ಲೆಯಲ್ಲಿ ಮಳೆ ಇರದಿದ್ದರೂ ರೈತರು ಬೋರ್‌ವೆಲ್ ಮೂಲಕ ನೀರು ಹಾಯಿಸಿ, ಬೆಳೆಗಳನ್ನು ಉಳಿಸಿಕೊಳ್ಳುತ್ತಿದ್ದಾರೆ. ಶಿವಪ್ಪ ಸಹ ಮೆಣಸಿನಕಾಯಿಯನ್ನು ಬೋರ್‌ವೆಲ್ ಮೂಲಕ ತುಂತುರು ಹನಿ ನೀರಾವರಿ ಅಳವಡಿಕೊಂಡು ಉಳಿಸಿಕೊಂಡಿದ್ದರು. ಬೀಜ, ಗೊಬ್ಬರ, ನೀರು, ಕಳೆ ಸೇರಿದಂತೆ ಎಕರೆಯೊಂದಕ್ಕೆ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ತೀರಾ ಕಡಿಮೆ ದರದಲ್ಲಿ ಮೆಣಸಿನಕಾಯಿ ಕೇಳುತ್ತಿದ್ದು, ಮೆಣಸಿನಕಾಯಿ ಕೀಳಲು ಕೊಡುವ ಕೂಲಿ ಸಹ ಈ ಬೆಲೆಯಲ್ಲಿ ಬರುವುದಿಲ್ಲ. ಹೀಗಾಗಿ ಅದನ್ನು ಕಿತ್ತು, ಮಾರುಕಟ್ಟೆಗೆ ಒಯ್ಯುವ ಬದಲು ನಾಶ ಮಾಡಲಾಗಿದೆ ಎಂದು ಗೋವನಕೊಪ್ಪದ ಇನ್ನೋರ್ವ ರೈತ ಲೋಕನಾಥ ಕಲಬಾವಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಚಾರ ನಿಯಮ ಉಲ್ಲಂಘನೆ ಪತ್ತೆಗೆ ಪೊಲೀಸ್‌ ಇಲಾಖೆ ಹದ್ದಿನಕಣ್ಣು
ಗೃಹಜ್ಯೋತಿ ಫಲಾನುಭವಿಗಳ ಪರಿಷ್ಕರಣೆಗೆ ಸರ್ವರ್‌ ಕಿರಿಕಿರಿ!