ಜಿಲ್ಲಾಡಳಿತ, ಶಾಸಕರ ಭರವಸೆ: ಆಮರಣ ಉಪವಾಸ ಅಂತ್ಯ

KannadaprabhaNewsNetwork |  
Published : Nov 25, 2025, 02:30 AM IST
ಮದಮದಮದಮ | Kannada Prabha

ಸಾರಾಂಶ

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಯಡಿ ಖರೀದಿಸಬೇಕೆಂದು ಆಗ್ರಹಿಸಿ ಕರ್ನಾಟಕ ರೈತ ಸೇನೆ ಸಂಘಟನೆಯ ನೇತೃತ್ವದಲ್ಲಿ ರೈತರು ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಸೋಮವಾರ ಶಾಸಕ ಎನ್.ಎಚ್. ಕೋನರಡ್ಡಿ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಭೇಟಿ ನೀಡಿ ಒಂದು ವಾರದಲ್ಲಿ ಖರೀದಿ ಕೇಂದ್ರ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ನವಲಗುಂದ:

ಗೋವಿನಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸಬೇಕೆಂದು ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ರೈತರು ನಡೆಸುತ್ತಿದ್ದ ಆಮರಣ ಉಪವಾಸ ಸತ್ಯಾಗ್ರಹವನ್ನು ಜಿಲ್ಲಾಡಳಿತ ಹಾಗೂ ಶಾಸಕರು ನೀಡಿದ ಭರವಸೆ ಮೇರೆಗೆ ಅಂತ್ಯಗೊಳಿಸಲಾಗಿದೆ.

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಯಡಿ ಖರೀದಿಸಬೇಕೆಂದು ಆಗ್ರಹಿಸಿ ಕರ್ನಾಟಕ ರೈತ ಸೇನೆ ಸಂಘಟನೆಯ ನೇತೃತ್ವದಲ್ಲಿ ರೈತರು ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಸೋಮವಾರ ಶಾಸಕ ಎನ್.ಎಚ್. ಕೋನರಡ್ಡಿ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಭೇಟಿ ನೀಡಿ ಒಂದು ವಾರದಲ್ಲಿ ಖರೀದಿ ಕೇಂದ್ರ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ಜತೆಗೆ ರೈತ ಸೇನೆ ಅಧ್ಯಕ್ಷ ಶಂಕರಪ್ಪ ಅಂಬಲಿ ಅವರಿಗೆ ಎಳನೀರು ಕುಡಿಸುವ ಮೂಲಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು.

ಈ ವೇಳೆ ಶಾಸಕ ಎನ್‌.ಎಚ್‌. ಕೋನರಡ್ಡಿ ಮಾತನಾಡಿ, ಮೆಕ್ಕೆಜೋಳ ಬೆಂಬಲ ಬೆಲೆಯಡಿ ಖರೀದಿ ಮಾಡಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ರಾಜ್ಯ ಸಚಿವ ಸಂಪುಟ ಉಪ ಸಮಿತಿಯೂ ಬೆಂಬಲ ಬೆಲೆಯಡಿ ಗೋವಿನಜೋಳ ಖರೀದಿಗೆ ಶಿಫಾರಸು ಮಾಡಿದೆ. ಒಂದು ವಾರದಲ್ಲಿ ಖರೀದಿ ಕೇಂದ್ರವನ್ನು ತೆರೆಯುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಗೋವಿನಜೋಳ ಖರೀದಿ ಕುರಿತಾಗಿ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆ ಚುರುಕುಗೊಂಡಿದೆ. ಈ ಕುರಿತಾಗಿ ರಾಜ್ಯ ಮುಖ್ಯಕಾರ್ಯದರ್ಶಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರೈತರ ಸಂಕಷ್ಟ ಕುರಿತಾಗಿ ಸರ್ಕಾರದ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಗೋವಿನಜೋಳ ಖರೀದಿ ಕೇಂದ್ರ ಆರಂಭಿಸಲಾಗುವುದು ಎಂದು ತಿಳಿಸಿದರು.

ಹೋರಾಟಗಾರ ಶಂಕರಪ್ಪ ಅಂಬಲಿ ಮಾತನಾಡಿ, ಒಂದು ವಾರದಲ್ಲಿ ಖರೀದಿ ಪ್ರಕ್ರಿಯೆ ಆರಂಭಿಸದಿದ್ದರೆ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ತಹಸೀಲ್ದಾರ್‌ ಸುಧೀರ ಸಾಹುಕಾರ, ಎಸ್ಪಿ ಗುಂಜನ್ ಆರ್ಯ, ರೈತ ಮುಖಂಡರಾದ ಲೋಕನಾಥ ಹೆಬಸೂರ, ಎಸ್‌.ಆರ್‌. ಪಾಟೀಲ್, ಎಸ್.ಎಸ್. ಪಾಟೀಲ್, ಶಿವಾನಂದ ಕರಿಗಾರ, ಪ್ರವೀಣ ಯರಗಟ್ಟಿ, ಡಿಎಚ್‌ಒ ಡಾ. ಎಸ್.ಎಂ. ಹೊನಕೇರಿ, ವೈದ್ಯಾಧಿಕಾರಿ ರೂಪಾ ಕಿಣಗಿ ಮತ್ತಿತರರಿದ್ದರು.ಎಬಿಸಿ ಮಾದರಿ ಖರೀದಿಗೆ ಚಿಂತನೆ:

ಹೆಸರು ಕಾಳು ಖರೀದಿ ಕೇಂದ್ರದಲ್ಲಿ 9 ಸಾವಿರ ರೈತರು ನೋಂದಣಿ ಮಾಡಿಸಿದ್ದಾರೆ. ಹೆಚ್ಚಿನ ಮಳೆಯಿಂದಾಗಿ ಹೆಸರು ಕಾಳು ಎಫ್‍ಕ್ಯೂ ಗುಣಮಟ್ಟದ್ದನ್ನು ಮಾತ್ರ ಖರೀದಿಲಾಗುತ್ತಿದೆ. ಈ ಕುರಿತು ನಾಫೆಡ್ ಸಂಸ್ಥೆಯ ಜತೆ ಮಾತನಾಡಿದ್ದು ಹೆಸರು ಕಾಳನ್ನು ಎಬಿಸಿ ಮಾದರಿಯಲ್ಲಿ ವರ್ಗೀಕರಣ ಮಾಡಿ ಖರೀದಿ ಮಾಡುವಂತೆ ಪ್ರಯತ್ನ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಇದೇ ವೇಳೆ ತಿಳಿಸಿದರು. ಮುಂಗಾರು ಹಂಗಾಮಿನಲ್ಲಿ ಹಾನಿಗೊಳಗಾದ ಬೆಳೆಗಳಿಗೆ ಈಗಾಗಲೇ ಶೇ. 50ರಷ್ಟು ಪರಿಹಾರ ನೀಡಲಾಗಿದೆ, ಇನ್ನುಳಿದ ಶೇ. 50ರಷ್ಟು ಪರಿಹಾರವನ್ನು ಕೂಡಲೇ ರೈತ ಖಾತೆಗೆ ಜಮೆ ಮಾಡಲಾಗುವುದು. ಜತೆಗೆ ಒಟ್ಟು ಪರಿಹಾರ ವಿತರಣೆಯಲ್ಲಿ ಬಿಟ್ಟು ಹೋದ ರೈತರ ಪಟ್ಟಿ ಸಿದ್ದಪಡಿಸಿ ಕಾರಣಗಳನ್ನು ಗುರುತಿಸಿ ಅವರಿಗೂ ಪರಿಹಾರ ವಿತರಿಸಲಾಗುವುದು ಎಂದು ವಿವರಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಶವ ಬಗ್ಗೆ ಬುರುಡೆ ಬಿಟ್ಟ ಚಿನ್ನಯ್ಯಗೆ ಬೇಲ್
ಕೈ ರೆಬೆಲ್ಸ್‌ ಜತೆ ಸೇರಿ ನಾವು ಸರ್ಕಾರ ಮಾಡಲ್ಲ : ಅಶೋಕ್‌