ಹುಬ್ಬಳ್ಳಿ:
ಬೆಂಗಳೂರಲ್ಲಿ ಇತ್ತೀಚಿಗೆ ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ₹ 7 ಕೋಟಿಗೂ ಅಧಿಕ ನಗದು ದರೋಡೆಯಾದ ಬೆನ್ನಲ್ಲೆ ಹುಬ್ಬಳ್ಳಿಯಲ್ಲೂ ₹ 3 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಇಡಿ ಅಧಿಕಾರಿಗಳ ಹೆಸರಿನಲ್ಲಿ ದರೋಡೆ ನಡೆದಿದ್ದು, ಪೊಲೀಸರ ನಿದ್ದೆಗೆಡಿಸಿದೆ. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಎರಡು ಪ್ರತ್ಯೇಕ ತಂಡ ರಚಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.ನಗರದ ಚೆನ್ನಮ್ಮ ವೃತ್ತದ ಬಳಿಯ ನೀಲಿಜಿನ್ ರಸ್ತೆಯಲ್ಲಿ ಗುರುವಾರವೇ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳೆಂದು ಹೇಳಿಕೊಂಡ ಐವರ ತಂಡ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದೆ. ಕೇರಳ ಮೂಲದ ವ್ಯಾಪಾರಿ ಸುದೀನ್ ಎಂ.ಆರ್. ಎಂಬಾತನನ್ನು ವಿಚಾರಣೆ ನಡೆಸುವ ನೆಪದಲ್ಲಿ 2 ಕೆಜಿ 942 ಗ್ರಾಂ ಚಿನ್ನಾಭರಣ ಹಾಗೂ ₹ 2 ಲಕ್ಷ ನಗದು ದೋಚಿಕೊಂಡು ತಂಡ ಕಾಲ್ಕಿತ್ತಿದೆ.
ಏನಿದು ಪ್ರಕರಣ:ವ್ಯಾಪಾರಿ ಸುದೀನ್ ಎಂ.ಆರ್ ಅವರು ಚಿನ್ನಾಭರಣ ಅಂಗಡಿಗಳಿಗೆ ಆಭರಣ ಪೂರೈಸುವ ವ್ಯವಹಾರ ಮಾಡುತ್ತಿದ್ದರು. ನ. 15ರಂದು ಮಂಗಳೂರಿನಿಂದ ಬೆಳಗಾವಿಗೆ ಕೆಲಸಗಾರ ವಿವೇಕ ಅವರ ಜತೆ ಬರುವಾಗ ಚೈನ್, ಬ್ರೆಸ್ಲೆಟ್, ಉಂಗುರ, ಕಿವಿಯೋಲೆ, ನೆಕ್ಲೆಸ್, ಲಾಕೆಟ್, ಬಳೆ ಸೇರಿ ಒಟ್ಟು ₹3.2 ಕೋಟಿ ಮೌಲ್ಯದ ಆಭರಣ ತಂದಿದ್ದರು. ಬೆಳಗಾವಿ, ಧಾರವಾಡ, ಹುಬ್ಬಳ್ಳಿಯಲ್ಲಿರುವ ವಿವಿಧ ಆಭರಣ ಮಳಿಗೆಗಳಿಗೆ ತೆರಳಿ, ಆರ್ಡರ್ ಪಡೆದಿದ್ದರು. ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದ ಎದುರಿನ ಹೋಟೆಲ್‌ನಲ್ಲಿ ವಾಸ್ತವ್ಯ ಮಾಡಿದ್ದರು. ನ. 20ರಂದು ಧಾರವಾಡಕ್ಕೆ ಹೋಗಿ ಹೋಟೆಲ್‌ಗೆ ವಾಪಸ್ ಬರುವಾಗ ನೀಲಿಜಿನ್ ರಸ್ತೆಯಲ್ಲಿ ಅವರನ್ನು ತಡೆದ ಐವರ ತಂಡ, ತಾವು ಇಡಿ ಅಧಿಕಾರಿಗಳು ಎಂದು ಹಿಂದಿಯಲ್ಲಿ ಮಾತನಾಡಿ, ಗುರುತಿನ ಪತ್ರ ತೋರಿಸಿದ್ದಾರೆ. ವಿಚಾರಣೆಗೆ ಕಚೇರಿಗೆ ಬನ್ನಿ ಎಂದು ಕಾರಿನಲ್ಲಿ ಕರೆದುಕೊಂಡು ಹೋಗಿದೆ. ಆ ವೇಳೆ ಚಿನ್ನಾಭರಣಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ತಿಳಿದು ಬಂದಿದೆ ಎಂದು ಹೆದರಿಸಿದ್ದಾರೆ. ಅಲ್ಲದೇ ಸುದೀನ್ ಅವರನ್ನು ಬೆದರಿಸಿ, ಅವರ ಮೊಬೈಲ್ ಫೋನ್ ಪಡೆದು ಸಿಮ್ ತೆಗೆದಿದ್ದಾರೆ. ನಂತರ ಅವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣವಿದ್ದ ಬ್ಯಾಗ್ ಕಿತ್ತುಕೊಂಡಿದ್ದಾರೆ.
ಆರೋಪಿಗಳು ಬೆಳಗಾವಿಯ ಕಿತ್ತೂರು ಸಮೀಪ ಕೆಲಸಗಾರ ವಿವೇಕ ಅವರನ್ನು ಇಳಿಸಿದ್ದಾರೆ. ನಂತರ, ಸುದೀನ ಅವರನ್ನು ಎಂ.ಕೆ. ಹುಬ್ಬಳ್ಳಿ ರಸ್ತೆಗೆ ಕರೆದೊಯ್ದು ಮಾರ್ಗ ಮಧ್ಯೆ ಬಿಟ್ಟು ನಗದು ಹಾಗೂ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಪೊಲೀಸ್ ತನಿಖೆ ಚುರುಕು:
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತನಿಖೆಗಾಗಿ ಎರಡು ಪ್ರತ್ಯೇಕ ತಂಡ ರಚಿಸಿರುವ ಪೊಲೀಸ್ ಕಮಿಷನರೇಟ್, ತಾಂತ್ರಿಕ ಸಾಕ್ಷ್ಯಾಧಾರದ ಮೇಲೆ ಕಾರುಚಾಲಕ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದು, ವಿಚಾರಣೆಯನ್ನೂ ನಡೆಸಿದೆ ಎಂದು ಹೇಳಲಾಗಿದೆ. ಪ್ರಕರಣ ನಡೆದ ಸ್ಥಳ ಹಾಗೂ ಕಾರು ಸಂಚರಿಸಿದ್ದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲನೆ ಕಾರ್ಯವೂ ನಡೆದಿದೆ. ಅಲ್ಲದೇ, ಮೊಬೈಲ್ ಸಿಡಿಆರ್‌ನಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಮಾಹಿತಿ ದೊರೆತಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ.ಈ ಕುರಿತು ಉಪನಗರ ಠಾಣೆಯಲ್ಲಿ ಅಧಿಕಾರಿಗಳ ಹೆಸರಲ್ಲಿ ತಮಗೆ ಮೋಸ ಮಾಡಲಾಗಿದೆ ಎಂದು ಪ್ರಕರಣ ದಾಖಲಾಗಿದ್ದು, ಸದ್ಯ ಸಿಸಿಬಿಗೆ ಕೇಸ್ ವರ್ಗಾವಣೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಧಿಕಾರಿಗಳ ಹೆಸರು ಹೇಳಿಕೊಂಡು ಚಿನ್ನದ ವ್ಯಾಪಾರಿಯನ್ನು ಆರೋಪಿಗಳು ಬೆದರಿಸಿ ಚಿನ್ನಾಭರಣ ಕಿತ್ತುಕೊಂಡು ಹೋಗಿದ್ದಾರೆ ಎಂದು ದೂರು ದಾಖಲಾಗಿದೆ. ಇದಕ್ಕಾಗಿ ಎರಡು ಪ್ರತ್ಯೇಕ ತಂಡ ರಚಿಸಿ ತನಿಖೆ ನಡೆಸಲಾಗುತ್ತಿದೆ.ಮಹಾನಿಂಗ ನಂದಗಾವಿ, ಡಿಸಿಪಿ, ಹು-ಧಾ ಪೊಲೀಸ್ ಕಮಿಷನರೇಟ್