ಗೋವಿನ ಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ವಿವಿಧ ರೈತಪರ ಹೋರಾಟಗಾರರು ನಡೆಸುತ್ತಿರುವ ಹೋರಾಟ ಸೋಮವಾರ 10ನೇ ದಿನಕ್ಕೆ ಕಾಲಿಟ್ಟಿದೆ.
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಗೋವಿನ ಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ವಿವಿಧ ರೈತಪರ ಹೋರಾಟಗಾರರು ನಡೆಸುತ್ತಿರುವ ಹೋರಾಟ ಸೋಮವಾರ 10ನೇ ದಿನಕ್ಕೆ ಕಾಲಿಟ್ಟಿದೆ.
ಪಟ್ಟಣದ ಹಾವಳಿ ಹನಮಪ್ಪನ ದೇವಸ್ಥಾನದಿಂದ ಸೋಮವಾರ ರೈತಪರ ಹೋರಾಟಗಾರರು ದೀಡ್ ನಮಸ್ಕಾರ ಹಾಕುತ್ತ ಬಜಾರ್ ರಸ್ತೆಯ ಮೇಲೆ ಸಾಗಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ವಿಶೇಷ ಸಂದರ್ಭಗಳಲ್ಲಿ ದೇವರಿಗೆ ಭಕ್ತರು ದೀಡ್ ನಮಸ್ಕಾರ ಹಾಕುವುದು ವಾಡಿಕೆ. ಆದರೆ ಲಕ್ಷ್ಮೇಶ್ವರ ರೈತಪರ ಹೋರಾಟಗಾರರು ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎನ್ನುವ ಆಗ್ರಹದೊಂದಿಗೆ ದೀಡ್ ನಮಸ್ಕಾರ ಹಾಕಿ ತಮ್ಮ ಆಕ್ರೋಶ ಹೊರಹಾಕಿದರು.
ಈ ವೇಳೆ ಹೋರಾಟಗಾರರನ್ನು ಆದರಳ್ಳಿಯ ಗವಿಮಠದ ಡಾ. ಕುಮಾರ ಮಹಾರಾಜರು ಸತ್ಕರಿಸಿ ಮಾತನಾಡಿ, ಸರ್ಕಾರ ರೈತರ ಸಹನೆ ಪರೀಕ್ಷೆ ಮಾಡುವ ಕಾರ್ಯ ಮಾಡಬಾರದು. ರೈತರು ತಾವು ಬೆಳೆದ ಬೆಳೆಗೆ ಯೋಗ್ಯ ಬೆಲೆ ಕೇಳುವುದು ಅನ್ಯಾಯವಾ? ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿ ರೈತರ ಹಿತ ಕಾಪಾಡಬೇಕಾದ ಸರ್ಕಾರಗಳು ರೈತರ ಮಾರಕ ನೀತಿ ಅನುಸರಿಸುತ್ತಿರುವುದು ನೋವಿನ ಸಂಗತಿಯಾಗಿದೆ. ಬೇಡಿಕೆ ಈಡೇರುವುವರೆಗೆ ಸತ್ಯಾಗ್ರಹದಿಂದ ಹಿಂದೆ ಸರಿಯುವುದಿಲ್ಲ. ಹಲವರು ನನಗೆ ಬೆದರಿಕೆ ಹಾಕುತ್ತಿರುವುದು ರೈತರ ಪರವಾಗಿ ಕೆಲಸ ಮಾಡಿದವರಿಗೆ ಕೊಡುವ ಗೌರವವಾಗಿದೆ. ಇದಕ್ಕೆ ನಾವು ಹೆದರುವುದಿಲ್ಲ. ಪ್ರಾಣ ಹೋದರೂ ನಾನು ಅಂಜುವುದಿಲ್ಲ. ರೈತರ ಸಹನೆಯ ಕಟ್ಟೆಯೊಡೆಯುವ ಮೊದಲೇ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಎಚ್ಚರಿಸಿದರು.
ಈ ವೇಳೆ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ, ಎಂ.ಎಸ್. ದೊಡ್ಡಗೌಡರ, ನಾಗರಾಜ ಚಿಂಚಲಿ, ನೀಲಪ್ಪ ಶರೆಸೂರಿ ಮಾತನಾಡಿ ರೈತರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ರೈತರ ಹೋರಾಟ ಇನ್ನಷ್ಟು ಉಗ್ರ ಸ್ವರೂಪ ತಾಳುವ ಮೊದಲು ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಗೊಜನೂರು ಗ್ರಾಮದ ರೈತರು 10 ಚಕ್ಕಡಿಗಳಲ್ಲಿ ಆಗಮಿಸಿ ರೈತರಿಗೆ ಬೆಂಬಲ ಸೂಚಿಸಿದರು. ಗೊಜನೂರಿನ ರೈತರು ರೊಟ್ಟಿ, ಹೆಸರಕಾಳು ಪಲ್ಯ, ಶೇಂಗಾ ಚಟ್ನಿ, ಮೊಸರು, ಚಿತ್ರಾನ್ನ ತಂದು ಹೋರಾಟಗಾರರಿಗೆ ಉಣಬಡಿಸಿ ಬೆಂಬಲ ಸೂಚಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.