ಕಾರಟಗಿ: ಬೇಸಿಗೆಯಲ್ಲಿನ ಎರಡನೇ ಬೆಳೆಗೆ ಕಾಲುವೆಗಳಿಗೆ ನೀರು ಲಭ್ಯವಿಲ್ಲ, ಹೀಗಾಗಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ‍್ಯಾರೂ ಸಸಿ ನಾಟಿ ಮಾಡಬೇಡಿ, ಅಪಪ್ರಚಾರಕ್ಕೆ ಕಿವಿಕೊಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ರೈತರಿಗೆ ಕಿವಿಮಾತು ಹೇಳಿದರು.
ತಾಲೂಕಿನ ತಿಮ್ಮಾಪುರ ಗ್ರಾಮದ ಹೊರವಲಯದ ಲಕ್ಷ್ಮೀಗುಡ್ಡ ದೇವಸ್ಥಾನದ ಆವರಣದಲ್ಲಿ ರೈತ ಸಮೂಹ ಭತ್ತ ಕೊಯ್ಲಿ ಮಾಡಿ ರಾಶಿ ಹಾಕಿದ ಸ್ಥಳಕ್ಕೆ ತೆರಳಿ ಭತ್ತ ಪರೀಕ್ಷಿಸಿ ರೈತರೊಂದಿಗೆ ಅವರು ಸಮಾಲೋಚನೆ ನಡೆಸಿದರು.ಮುಂಗಾರು ಬೆಳೆ ಕೈಗೆ ಸೇರಿ ಎಷ್ಟು ದಿನಗಳಾಯಿತು? ಎಕರೆಗೆ ಇಳುವರಿ ಎಷ್ಟು ಬಂದಿದೆ? ಎಡದಂಡೆ ನಾಲೆ 31ನೇ ಕಾಲುವೆ ಕೊನೆಭಾಗದಲ್ಲಿ ಎಷ್ಟು ಪ್ರಮಾಣದಲ್ಲಿ ರೈತರು ಬತ್ತ ಬೆಳೆದಿದ್ದಾರೆ? ಎನ್ನುವ ಮಾಹಿತಿಯನ್ನು ರೈತರಿಂದ ಸಚಿವರು ಕೇಳಿ ತಿಳಿದುಕೊಂಡರು.
ಭತ್ತದ ರಾಶಿಗೆ ಕೈಹಾಕಿ ಇಳುವರಿ, ಭತ್ತದ ನಮೂನೆಗಳ ಮಾಹಿತಿ ಪಡೆದ ಸಚಿವರು, ಈ ಬಾರಿ ರೋಗ ಬಾಧಿಸಿದ್ದು, ಸತತ ಮಳೆ ಕಾಟದ ನಡುವೆಯೂ ಇಳುವರಿ ಉತ್ತಮವಾಗಿದೆ. ಉತ್ತಮ ಫಸಲು ಬಂದಿರುವುದು ಸಮಾಧಾನದ ಸಂಗತಿ ಎಂದು ರೈತರು ಸಚಿವರ ಬಳಿ ಹಂಚಿಕೊಂಡರು.ಕೆಲವು ರೈತರು ತಮ್ಮ ರಾಶಿಯನ್ನು ನೋಡಿ ಎಂದು ಸಚಿವರಿಗೆ ದುಂಬಾಲು ಬಿದ್ದರು. ಕೆಲವರು ಎರಡನೇ ಬೆಳೆಗೆ ನೀರಿನ ಕುರಿತು ಸಚಿವರ ಗಮನಕ್ಕೆ ತಂದ ವೇಳೆ, ಮುಖ್ಯವಾಗಿ ಅಣೆಕಟ್ಟೆ ಕಾಪಾಡಬೇಕಾಗಿದೆ. ಅಣೆಕಟ್ಟೆಯ ಕ್ರಸ್ಟ್‌ಗೇಟ್ ಅಳವಡಿಸಲು ತಜ್ಞರು ಕಾಲವಕಾಶ ಕೇಳಿದ್ದಾರೆ. ಹೀಗಿ ಎಲ್ಲ ತಜ್ಞರ, ಅನುಭವಿ ರೈತರ ಅಭಿಪ್ರಾಯ ಪಡೆದು ಕ್ರಸ್ಟ್‌ಗೇಟ್ ಅಳವಡಿಸುತ್ತೇವೆ. ಹೀಗಾಗಿ ಎರಡನೇ ಬೆಳೆಗೆ ನೀರು ಕೊಡಲು ಆಗುತ್ತಿಲ್ಲ. ಅಷ್ಟೇ ಕೆಲವರು ಉದ್ದೇಶಪೂರ್ವಕವಾಗಿ ರೈತರಿಗೆ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇಂಥ ನಕಲಿ ರೈತ ಮುಖಂಡರ ಮಾತು ಕೇಳಬೇಡಿ. ಅಂಥವರಿಗೆ ಬೆಲೆ ನೀಡದೆ ಸ್ವಲ್ಪ ಕಾಯಿರಿ ಎಂದು ಸಚಿವ ಶಿವರಾಜ್ ತಂಗಡಗಿ ರೈತರಿಗೆ ಸ್ಪಷ್ಟವಾಗಿ ಹೇಳಿದರು. ಬೆಳೆಯನ್ನು ಸ್ವಲ್ಪದಿನ ಇಟ್ಟುಕೊಂಡು ಉತ್ತಮ ಬೆಲೆ ಬಂದಾಗ ಮಾರಾಟ ಮಾಡವ ಸಲಹೆಯನ್ನು ಸಹ ಸಚಿವರು ಈ ಸಮಯದಲ್ಲಿ ನೀಡಿದರು.
ಈ ವೇಳೆ ಬಸವರಾಜ ಕಡೇಮನಿ, ಸುರೇಶ ಬೆಳ್ಳಿಕಟ್ಟಿ, ವಿಜಯಕುಮಾರ ಕೋಲ್ಕಾರ್, ಶರಣೇಗೌಡ ಮಾಲಿ ಪಾಟೀಲ್, ಶರಣೇಗೌಡ ಕೊಂತನೂರು, ಶಿವಕುಮಾರ ಗೋನಾಳ, ಶಿವಕುಮಾರ ಬಜಾರ್ ಇದ್ದರು.ಸಹಿ ಸಂಗ್ರಹದಂಥ ಬೆಳವಣಿಗೆ ನಡೆದಿಲ್ಲ: ಸಚಿವ ತಂಗಡಗಿ
ರಾಜ್ಯ ಕಾಂಗ್ರೆಸ್ಸಿನಲ್ಲಿ ಸಹಿ ಸಂಗ್ರಹಣೆಯಂಥ ಯಾವುದೇ ಬೆಳವಣಿಗೆಗಳು ನಡೆಯುತ್ತಿಲ್ಲ, ಇದೆಲ್ಲ ಬಿಜೆಪಿಯವರು ಸೃಷ್ಟಿಸಿದ ಕಥೆಗಳು. ಬಿಜೆಪಿಯವರು ಹಸಿದು ಕೂತಿದ್ದು, ಅವರ ಬಗ್ಗೆ ಹೇಳಿಕೆ ಕೊಡುವ ಅವಶ್ಯಕತೆ ಇಲ್ಲ. ಅವರ ಜತೆಗೂ ಕೈಜೋಡಿಸುತ್ತೇವೆಂದು ಕಾಲುತಿಕ್ಕಿ ಅಳುತ್ತಿಲ್ಲ, ನಾವ್ಯಾರೂ ಯಾರೊಂದಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ. ಹೈಕಮಾಂಡ್ ಹೇಳಿದಂತೆ ಪಕ್ಷದ ಎಲ್ಲ ಮುಖಂಡರು ಕೇಳುತ್ತಿದ್ದಾರೆ. ಹೈಕಮಾಂಡ್ ಕೈಗೊಂಡ ನಿರ್ಧಾರಕ್ಕೆ ಎಲ್ಲ ನಾಯಕರು ಬದ್ಧರಾಗಿದ್ದಾರೆ ಎಂದರು.ಹೈಕಮಾಂಡ್ ಏನೂ ಹೇಳುತ್ತದೆಯೋ ಅದನ್ನೇ ಕೇಳುತ್ತೇವೆ ಎಂದು ಸಿಎಂ, ಡಿಸಿಎಂ ಹೇಳಿದ್ದಾರೆ. ಮುಖ್ಯಮಂತ್ರಿ ಈ ಮಾತನ್ನು ಹೇಳಿದ ಮೇಲೆ ನಾವೆಲ್ಲರೂ ಅವರ ಮಾತನ್ನೇ ಕೇಳುತ್ತೇವೆ ಎಂದು ಸ್ಪಷ್ಟಪಡಿಸಿದರು.ಕಾಂಗ್ರೆಸ್ ವ್ಯವಸ್ಥೆಯಲ್ಲಿ ಹೈಕಮಾಂಡ್, ಎಐಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಬಹಳ ಸಮರ್ಥರಾಗಿದ್ದಾರೆ. ಸದ್ಯ ಬಿಜೆಪಿಯವರ ಅವಶ್ಯಕತೆ ನಮ್ಮ ಪಕ್ಷಕ್ಕೆ ಇಲ್ಲ. ಬಿಜೆಪಿ ಆಡಳಿತಾವಧಿಯಲ್ಲಿ ಹಲವಾರು ಘಟನಾವಳಿಗಳು ನಡೆದವು. ಅವುಗಳು ಬಗ್ಗೆ ರಾಜ್ಯದ ಜನತೆಗೆ ಗೊತ್ತಿಲ್ಲವೇ? ಅವರ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿದೆ, ಅದನ್ನು ನೋಡದೆ ನಮ್ಮ ಪಕ್ಷದೊಳಗೆ ಕಾಣಲಾರದ್ದನ್ನು ಹೇಳುತ್ತಿದ್ದಾರೆ ಎಂದರು.ಪಕ್ಷದಲ್ಲಿನ ಸಣ್ಣ ಪುಟ್ಟ ಸಮಸ್ಯೆಗಳ ಬಗ್ಗೆ ಹೇಳಿರಬಹುದು, ಕೇಳಿರಬಹುದು. ಆದರೆ, ಯಾರ ಸಂಪರ್ಕಕ್ಕೂ ಯಾರೂ ಹೋಗಿಲ್ಲ. ನಮ್ಮದೇನೂ ದೊಡ್ಡ ಸಮಸ್ಯೆಯಲ್ಲ. ನಮ್ಮ ಪಕ್ಷದ ಸಮಸ್ಯೆಗಿಂತ ನೂರುಪಟ್ಟು ಸಮಸ್ಯೆಗಳು ಬಿಜೆಪಿ ಆಡಳಿತಾವಧಿಯಲ್ಲಿ ಇದ್ದವು. ಅವುಗಳನ್ನೆಲ್ಲ ಬಿಟ್ಟು ಬಾಯಿಚಟಕ್ಕೆ ಏನೇನೋ ಹೇಳಿಕೆ ನೀಡುವುದು ಸರಿಯಲ್ಲ ಎಂದು ಬಿಜೆಪಿ ವಿರುದ್ಧ ತಂಗಡಗಿ ಹರಿಹಾಯ್ದರು.ಕೊಪ್ಪಳ ಜಿಲ್ಲೆಯ ಮೂವರು ಶಾಸಕರಿಗೆ ಸಚಿವ ಸ್ಥಾನ ಸಿಕ್ಕರೆ ಸಂತೋಷ ಎಂದರು.