ಬ್ಯಾಡಗಿ: ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಶಿಕ್ಷಣವು ಪ್ರತಿಯೊಬ್ಬರ ಕೈಗೆಟುವಂತೆ ಮಾಡುವುದೇ ಸರ್ಕಾರದ ಉದ್ದೇಶವಾಗಿದ್ದು, ತಾಲೂಕು ಕೇಂದ್ರದಲ್ಲೊಂದು ಡಿಪ್ಲೊಮಾ ಸೇರಿದಂತೆ ತಾಂತ್ರಿಕ ಮಹಾವಿದ್ಯಾಲಯಗಳ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಉತ್ಸುಕತೆ ತೋರಿದ್ದು, ರಾಜ್ಯದೆಲ್ಲೆಡೆ ಈಗಾಗಲೇ 107 ಸರ್ಕಾರಿ ಸ್ವಾಮ್ಯದ ಪಾಲಿಟೆಕ್ನಿಕ್ ಕಾಲೇಜು ಸ್ಥಾಪಿಸಲಾಗಿದೆ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು. ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ತಾಂತ್ರಿಕ ಶಿಕ್ಷಣದತ್ತ ಮುಖ ಮಾಡುತ್ತಿದ್ದಾರೆ: ಶೈಕ್ಷಣಿಕ ಸ್ಪರ್ಧಾತ್ಮಕ ಯುಗದಲ್ಲಿ ನಾವಿದ್ದೇವೆ, ಬಹುಬೇಗನೆ ಬದುಕನ್ನು ಕಟ್ಟಿಕೊಳ್ಳುವ ಆಸೆಯೊಂದಿಗೆ ಮಕ್ಕಳು ತಾಂತ್ರಿಕ ಶಿಕ್ಷಣದತ್ತ ಮುಖ ಮಾಡುತ್ತಿದ್ದಾರೆ, ಪಟ್ಟಣದಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಅಕಾಡೆಮಿಕ್ ಡೆವಲೆಪಮೆಂಟ್ ಅನಿವಾರ್ಯ ಎಂದರು. ಕಥೆಕಟ್ಟಲು ಸಾಧ್ಯವಿಲ್ಲ: ಪಾಲಿಟೆಕ್ನಿಕ್ ಕಾಲೇಜು ಶೈಕ್ಷಣಿಕ ವ್ಯವಸ್ಥೆ ಬಹಳಷ್ಟು ಭಿನ್ನವಾಗಿದೆ. ಉಳಿದ ಕಾಲೇಜಿನಂತೆ ಕಥೆಕಟ್ಟಲು ಸಾಧ್ಯವಿಲ್ಲ ಎಲ್ಲವೂ ನಿದರ್ಶನ ಮಾಡಿಯೇ ಕೊಡಬೇಕು, ವಿದ್ಯಾರ್ಥಿಯನ್ನು ಶೈಕ್ಷಣಿಕವಾಗಿ ಗಟ್ಟಿಗೊಳಿಸಬೇಕಾದಲ್ಲಿ ಶಿಕ್ಷಕರ ಕೊರತೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ ಅಲ್ಲದೇ ಅವರೆಲ್ಲರಿಗೂ ಅವಶ್ಯವಿರುವ ಸುಸಜ್ಜಿತ ಲ್ಯಾಬ್ ಅವಶ್ಯವಿದ್ದು ಅದನ್ನು ಪೂರೈಸಲು ಬದ್ಧವಾಗಿದ್ದೇನೆ ಎಂದರು. ಈ ವೇಳೆ ಗ್ಯಾರಂಟಿ ಯೋಜನೆಗಳ ತಾಲೂಕಾಧ್ಯಕ್ಷ ಶಂಭನಗೌಡ ಪಾಟೀಲ, ಮುಖಂಡರಾದ ದಾನಪ್ಪ ಚೂರಿ, ಚಿಕ್ಕಪ್ಪ ಹಾದೀಮನಿ, ಬೀರಪ್ಪ ಬಣಕಾರ, ಡಿ.ಎಚ್. ಬುಡ್ಡನಗೌಡ್ರ, ಮಂಜನಗೌಡ ಲಿಂಗನಗೌಡ್ರ, ಗುಡ್ಡಪ್ಪ ಹಾದಿಮನಿ, ಜಗದೀಶ ಪೂಜಾರ, ರಮೇಶ ಸುತ್ತಕೋಟಿ, ಬಸವರಾಜ ಪಾಟೀಲ (ಚಿಕ್ಕಣಜಿ), ಮೇಲಗಿರಿಯಪ್ಪ ಕಾಕೋಳ ಕಾಲೇಜು ಪ್ರಾಚಾರ್ಯ ಘಂಟಿಸಿದ್ದಪ್ಪನವರ ಹಾಗೂ ಕಾಲೇಜು ಸಿಬ್ಬಂದಿಗಳು ಉಪಸ್ಥಿತರಿದ್ದರು.