ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಏಪ್ರಿಲ್ 16 ಮತ್ತು ಏಪ್ರಿಲ್ 17 ರಂದು ನಡೆಯಲಿರುವ ಯುಜಿಸಿಇಟಿ ಪರೀಕ್ಷೆಯನ್ನು ಜಿಲ್ಲೆಯಲ್ಲಿ ಯಾವುದೇ ಲೋಪಗಳಿಲ್ಲದೆ ಸುಗಮವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು. ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ನಡೆದ ಯುಜಿಸಿಇಟಿ ಪರೀಕ್ಷೆಗಳ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಿಸಿ ಕ್ಯಾಮೆರಾ ಅಳವಡಿಕೆ
ಜಿಲ್ಲೆಯ ಒಟ್ಟು 15 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆಗಳು ನಡೆಯಲಿದ್ದು, 7,302 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿನ ಜೆರಾಕ್ಸ್ ಸೆಂಟರ್ ಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ ಎಂದರು. ಏಪ್ರಿಲ್ 16 ರಂದು ಬೆಳಗ್ಗೆ 10.30 ರಿಂದ 11.50 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50ರ ವರೆಗೆ ರಸಾಯನ ಶಾಸ್ತ್ರ ಹಾಗೂ 17 ರಂದು ಬೆಳಗ್ಗೆ 10.30 ರಿಂದ 11.50 ರವರೆಗೆ ಗಣಿತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರ ವರೆಗೆ ಜೀವಶಾಸ್ತ್ರ ವಿಷಯಗಳು ಎರಡು ಅವಧಿಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಕಡ್ಡಾಯವಾಗಿರುವುದರಿಂದ ಪ್ರತಿ ಕೊಠಡಿಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.15 ಪರೀಕ್ಷಾ ಕೇಂದ್ರಗಳುಜಿಲ್ಲೆಯಲ್ಲಿ ಒಟ್ಟು 15 ಪರೀಕ್ಷಾ ಕೇಂದ್ರಗಳ ಪೈಕಿ ನಾಗಾರ್ಜುನ ಪದವಿ ಪೂರ್ವ ಕಾಲೇಜು, ಎಸ್.ಜೆ.ಸಿ ತಾಂತ್ರಿಕ ಮಹಾ ವಿದ್ಯಾಲಯ, ಜ್ಞಾನಗಂಗಾಕ್ಯಾಂಪಸ್, ಎಸ್.ಬಿ.ಜಿ.ಎನ್.ಎಸ್, ಪಪೂ ಕಾಲೇಜು ಅಗಲಗುರ್ಕಿ, ಬಿಜಿಎಸ್ ಸೈನ್ಸ್ ಅಕಾಡಮಿ, ಪದವಿ ಕಾಲೇಜು ಅಗಲಗುರ್ಕಿ, ಬಿ.ಜಿ.ಎಸ್ ಆಂಗ್ಲ ಪ್ರೌಢ ಶಾಲೆ ಅಗಲಗುರ್ಕಿ, ಶ್ರೀ ಕೃಷ್ಣ ರುಕ್ಕಿಣಿ ಪದವಿ ಪೂರ್ವ ಕಾಲೇಜು, ಶಾಂತಿನಿಕೇತನ್ ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ನ್ಯೂಟನ್ ಇಂಟಿಗ್ರೇಟೆಡ್ ಪಪೂ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಬೆಸ್ಟ್ ಪದವಿ ಪೂರ್ವ ಕಾಲೇಜು. ಈ ಸಂದರ್ಭದಲ್ಲಿ ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮರಿಸ್ವಾಮಿ ಹಾಗೂ ಇತರ ಅಧಿಕಾರಿಗಳು ಇದ್ದರು.