ಕನ್ನಡಪ್ರಭ ವಾರ್ತೆ ಹೊನ್ನಾಳಿ
ಅತಿವೃಷ್ಟಿ, ಪ್ರಕೃತಿ ವಿಕೋಪ ಪರಿಸ್ಥಿತಿಗಳನ್ನು ಸಮರ್ಪಕವಾಗಿ ನಿಭಾಯಿಸಲು ಜಿಲ್ಲಾ ಮತ್ತು ತಾಲೂಕು ಆಡಳಿತಗಳು ಸರ್ವಸನ್ನದ್ಧವಾಗಿವೆ. ಜನರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ದಾವಣಗೆರೆ ಜಿಲ್ಲೆ ವಿಪತ್ತು ನಿರ್ವಹಣಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊನ್ನಾಳಿ ತಾಲೂಕಿನಲ್ಲಿ ಬಾಲರಾಜ್ ಘಾಟ್, ಬಂಬೂಬಜಾರ್, ಸಾಸ್ವೇಹಳ್ಳಿ ಪ್ರದೇಶಗಳು ಪ್ರವಾಹಪೀಡಿತ ಪ್ರದೇಶಗಳಾಗಿವೆ. ತುಂಗಾಭದ್ರಾ ನದಿ ನೀರಿನಮಟ್ಟ 13 ಮೀಟರ್ ಮೀರಿದರೆ ಚೀಲೂರಿನ ಗ್ರಾಮಗಳು ಕೂಡ ಪ್ರವಾಹ ಪೀಡಿತವಾಗುವ ಸಾಧ್ಯತೆಗಳು ಇವೆ. ಹೊನ್ನಾಳಿಯಲ್ಲಿ 28 ಕುಟುಂಬಗಳ 125 ಸಂತ್ರಸ್ತರನ್ನು ಗುರುತಿಸಿದ್ದು, ಪಟ್ಟಣದಲ್ಲಿ 2 ಮತ್ತು ಸಾಸ್ವೇಹಳ್ಳಿಯಲ್ಲಿ 1 ಕಾಳಜಿ ಕೇಂದ್ರ ಗುರುತಿಸಿ, ಸಿದ್ಧಪಡಿಸಲಾಗಿದೆ ಎಂದರು.
ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಳೆ ನೀರಿನಿಂದ ಸೋರುತ್ತಿದ್ದರೆ ಮಾತ್ರ ಅವುಗಳ ತಾತ್ಕಾಲಿಕ ರಿಪೇರಿಗೆ ಹಣ ಲಭ್ಯವಿದೆ. ತಹಶೀಲ್ದಾರ್ ವಿಪತ್ತಿನ ಪಿಡಿ ಖಾತೆಯಲ್ಲಿ ₹64.24 ಲಕ್ಷ ಹಾಗೂ ನ್ಯಾಮತಿ ತಾಲೂಕಿನಲ್ಲಿ ₹38 ಲಕ್ಷವಿದ್ದು, ಶಾಲೆಗಳ ಮೇಲ್ಛಾವಣೆ ದುರಸ್ತಿಗೆ ₹2 ಲಕ್ಷದವರೆಗೆ ಹಣ ನೀಡಬಹುದಾಗಿದೆ. ಜಿಲ್ಲೆಯ 6 ತಾಲೂಕುಗಳಿಂದ ₹1696.47 ಲಕ್ಷ ಹಣವಿದೆ ಎಂದು ಹೇಳಿದರು.ರಸ್ತೆಗಳು, ಸೇತುವೆಗಳು, ವಿದ್ಯುತ್ ಕಂಬಗಳ ದುರಸ್ತಿಎ ಅವಕಾಶವಿದ್ದು, ಅಧಿಕಾರಿಗಳು ಖುದ್ದು ಪರಿವೀಕ್ಷಣೆ ಮಾಡಿ ನಿಖರವಾದ ಮಾಹಿತಿ ಜಿಲ್ಲಾಡಳಿತಕ್ಕೆ ನೀಡಬೇಕು. ಅತಿವೃಷ್ಠಿಯಿಂದ ಮನೆಗಳು ಸಂಪೂರ್ಣ ಹಾನಿಯಾಗಿದ್ದ ಪ್ರಕರಣಗಳಿಗೆ ₹1.20 ಲಕ್ಷ ಭಾಗಶಃ ಹಾನಿಯಾದ ಮನೆಗಳಿಗೆ ₹6500, ಕಚ್ಚಾ ಮನೆಗಳಾದರೆ ₹4 ಸಾವಿರ ಪರಿಹಾರ ನೀಡಲಾಗುವುದು ಎಂದು ವಿವರಿಸಿದರು.
ಜಿಪಂ ಸಿಇಒ ಸುರೇಶ್ ಇಟ್ನಾಳ್ ಮಾತನಾಡಿ, ಹೊನ್ನಾಳಿ ತಾಲೂಕಿನಲ್ಲಿ ಪ್ರವಾಹ ಪೀಡಿತವಾಗುವಂತಹ 13 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 32 ಗ್ರಾಮಗಳು, ನ್ಯಾಮತಿ 1 ಗ್ರಾಮ ಪಂಚಾಯಿತಿಯಲ್ಲಿ 1 ಗ್ರಾಮ ಬರುತ್ತದೆ. ಪಿ.ಡಿ.ಒ.ಗಳು ಕೇಂದ್ರ ಸ್ಥಾನಗಳಲ್ಲಿರಬೇಕು. ಈಜುಗಾರರು, ಹಾವು ಹಿಡಿಯುವವರ, ಜೆಸಿಬಿ ಯಂತ್ರಗಳ ಮಾಲೀಕರು, ಸ್ವಯಂಸೇವಕ ಯುವಕರ ಮಾಹಿತಿಗಳನ್ನು ಅವರ ಮೊಬೈಲ್ ಸಂಖ್ಯೆಗಳೊಂದಿಗೆ ಪಟ್ಟಿ ಸಿದ್ಧಪಡಿಸುವಂತೆ ಸೂಚಿಸಿದರು.ಜಿಲ್ಲಾ ಆರೋಗ್ಯಾಧಿಕಾರಿ ಷಣ್ಮುಖಪ್ಪ ಡೆಂಘೀ, ಇತರೆ ಕಾಯಿಲೆಗಳ ನಿಯಂತ್ರಣ ಕುರಿತು ಮಾತನಾಡಿದರು. ಉಪವಿಭಾಗಾಧಿಕಾರಿ ಅಭಿಷೇಕ್, ತಹಸೀಲ್ದಾರ್ ಪಟ್ಟರಾಜ ಗೌಡ, ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ಜಗಳೂರು ತಹಸೀಲ್ದಾರ್ ಫೀರೋಜ್ ಷಾ, ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ, ತಾಪಂ ಇಒ, ರಾಘವೇಂದ್ರ, ಬಿಇಒ ನಿಂಗಪ್ಪ, ಎನ್‌ಡಿಆರ್‌ಎಫ್ ಡೆಪ್ಯೂಟಿ ಕಮಾಂಡರ್ ಹೇಮಕುಮಾರ್, ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.
- - - -23ಎಚ್.ಎಲ್.ಐ1: