ಮಡಿಕೇರಿ : ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಯೋಜನೆಗೆ ಅರ್ಹ ಪತ್ರಕರ್ತರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮುಖ್ಯಮಂತ್ರಿ 2024-25 ನೇ ಸಾಲಿನ ಆಯವ್ಯಯದಲ್ಲಿ ಈ ಯೋಜನೆ ಘೋಷಿಸಿದ್ದರು.
ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಜಿಲ್ಲಾ ವ್ಯಾಪ್ತಿಗೆ ಉಚಿತವಾಗಿ ಸಂಚರಿಸಬಹುದು. ತಹಸೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ ಒದಗಿಸಬೇಕು.
ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ವರದಿಗಾರರಿಗೆ ಪ್ರತಿ ತಾಲೂಕಿಗೆ ಸಂಪಾದಕರು ಸೂಚಿಸುವ ಒಬ್ಬರಿಗೆ,ಜಿಲ್ಲಾ ಮಟ್ಟದ ಪತ್ರಿಕೆಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಒಬ್ಬರಿಗೆ, ಆರು ಪುಟಗಳಲ್ಲಿ ಪ್ರಕಟವಾಗುವ ಪ್ರಾದೇಶಿಕ ಪತ್ರಿಕೆಗಳು ಓರ್ವ ವರದಿಗಾರರು ಹಾಗೂ ಓರ್ವ ಫೋಟೋಗ್ರಾಫರ್ ಎಂಟು ಅಥವಾ ಹೆಚ್ಚು ಪುಟಗಳಲ್ಲಿ ಪ್ರಕಟವಾಗುವ ಪ್ರಾದೇಶಿಕ ಪತ್ರಿಕೆಗಳು ಇಬ್ಬರು ವರದಿಗಾರರು ಹಾಗೂ ಓರ್ವ ಫೋಟೋಗ್ರಾಫರ್‌ಗೆ ಬಸ್‌ಪಾಸ್ ಪಡೆಯಲು ಅವಕಾಶವಿದೆ.
ದಿನಪತ್ರಿಕೆಗಳು ಹಾಗೂ ಉಪಗ್ರಹ ಸುದ್ದಿ ವಾಹಿನಿಗಳ ಸಂಪಾದಕರು ನೀಡುವ ನೇಮಕಾತಿ ಪತ್ರ ಹಾಗೂ ಶಿಫಾರಸ್ಸು ಆಧರಿಸಿ ಅರ್ಹ ಪತ್ರಕರ್ತರಿಗೆ ಬಸ್ ಪಾಸ್‌ಗಳನ್ನು ನೀಡಲಾಗುವುದು.
ಆಸಕ್ತ ಹಾಗೂ ಅರ್ಹ ಪತ್ರಕರ್ತರು ತಮ್ಮ ಸಮೀಪದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ತೆರಳಿ ಸೇವಾಸಿಂಧು ಪೋರ್ಟಲ್ ನಲ್ಲಿ ಆನ್‌ಲೈನ್ ಮೂಲಕ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು. ಅಪ್‌ಲೋಡ್ ಮಾಡಿದ ದಾಖಲೆಗಳು ಹಾಗೂ ಆನ್‌ಲೈನ್ ಅರ್ಜಿಯ ಮುದ್ರಿತ ಪ್ರತಿಯನ್ನು ತಮ್ಮ ಜಿಲ್ಲೆಯ ಜಿಲ್ಲಾ ವಾರ್ತಾಧಿಕಾರಿ ಕಚೇರಿಗೆ ಸ್ವಯಂ ದೃಢೀಕರಿಸಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.