ತುಂಗಭದ್ರಾ ನದಿ ಪಾತ್ರಕ್ಕೆ ಜಿಲ್ಲಾಧಿಕಾರಿ ದಿವಾಕರ ಭೇಟಿ: ಮುಂಜಾಗ್ರತೆಗೆ ಸೂಚನೆ

KannadaprabhaNewsNetwork |  
Published : Jul 27, 2024, 01:01 AM IST
26ಎಚ್‌ಪಿಟಿ12- ಹಂಪಿಗೆ ಶುಕ್ರವಾರ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್ ಅವರು ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ನದಿಯು ದೇವಸ್ಥಾನ ಪಕ್ಕದಲ್ಲೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕು.

ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನದಿಗೆ ನೀರು ಹರಿಯುತ್ತಿರುವುದರಿಂದ ನದಿಪಾತ್ರದ ಸ್ಥಳಗಳಿಗೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಪಕ್ಕದ ನದಿ ಪಾತ್ರದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನದಿಯು ದೇವಸ್ಥಾನ ಪಕ್ಕದಲ್ಲೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕು. ಸ್ನಾನ ಮಾಡಲು ನದಿಗೆ ಇಳಿಯದಂತೆ ಭಕ್ತರಿಗೆ ಸೂಚನೆ ನೀಡಬೇಕು. ನದಿದಡದಲ್ಲಿ ಸದ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ಮುಂಜಾಗ್ರತೆ ವಹಿಸಬೇಕು ಎಂದು ಸೂಚನೆ ನೀಡಿದರು. ಈ ಬಗ್ಗೆ ಸೂಕ್ತ ಮೇಲ್ವಿಚಾರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಹಂಪಿ ಗ್ರಾಮ ಪಂಚಾಯತ್ ಪಿಡಿಓ ಅವರಿಗೆ ನಿರ್ದೇಶನ ನೀಡಿದರು.

ಹಂಪಿಯ ಪ್ರವಾಸಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಕೋದಂಡರಾಮ ದೇವಸ್ಥಾನ ಹತ್ತಿರದ ಸ್ಥಳಕ್ಕೆ ತೆರಳಿದರು. ದೇವಸ್ಥಾನಕ್ಕೆ ಬರುವ ಸಾರ್ವಜನಿಕರಿಗೆ ಬೇರೆಡೆ ದಾರಿ ವ್ಯವಸ್ಥೆ ಮಾಡಿದ್ದೀರಾ? ಎಂದು ಕೇಳಿ ಮಾಹಿತಿ ಪಡೆದರು.

ನೀರಿನ ಹರಿವು ಹೆಚ್ಚಿರುವ ಕಾರಣ ಪ್ರವಾಸಿಗರ ದಂಡು ನೀರಿನ ವೀಕ್ಷಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ನದಿಪಾತ್ರ ಎಲ್ಲ ಕಡೆಗಳಲ್ಲಿ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಬೇಕು ಎಂದು ಹಂಪಿಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಅವರಿಗೆ ಜಿಲ್ಲಾಧಿಕಾರಿ ತಿಳಿಸಿದರು.

ನಂತರ ಹಂಪಿಯ ಮತ್ತೊಂದು ಪ್ರವಾಸಿ ತಾಣವಾದ ವಿಜಯವಿಠ್ಠಲ ದೇವಾಸ್ಥಾನ ಹತ್ತಿರ ತೆರಳಿ, ನದಿ ನೀರಿಗೆ ಅಲ್ಲಿನ ಪುರಂದರ ಮಂಟಪ ಮುಳುಗಿರುವುದನ್ನು ವೀಕ್ಷಿಸಿದರು.

ನದಿ ಪಾತ್ರಕ್ಕೆ ಪ್ರವಾಸಿಗರು ಆಗಮಿಸಿ ಸೆಲ್ಫಿ ಕ್ಲಿಕ್ಕಿಸುವ ಭರದಲ್ಲಿ ಅನಾಹುತ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಇದನ್ನು ತಡೆಯಲು ಸರಿಯಾದ ಸೂಚನೆ ನೀಡಲು ಕ್ರಮ ವಹಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಹೊಸಪೇಟೆಯ ಸಹಾಯಕ ಆಯುಕ್ತ ವಿವೇಕಾನಂದ, ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಪ್ರಭುಲಿಂಗ ಎಸ್.ತಾಳಕೆರೆ, ಹೊಸಪೇಟೆಯ ತಹಸೀಲ್ದಾರ ವಿಶ್ವಜಿತ್ ಮೆಹತಾ, ಹಂಪಿ ಸಬ್ ಇನ್‌ಸ್ಪೆಕ್ಟರ್‌ ಶಿವಕುಮಾರ ನಾಯ್ಕ, ಹಂಪಿ ಗ್ರಾಪಂ ಅಧ್ಯಕ್ಷೆ ರಜಿನಿ ಷಣ್ಮುಖಗೌಡ, ಪಿಡಿಒ ಗಂಗಾಧರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ
ಹಳೆ ದ್ವೇಷ: ರಸ್ತೆಯಲ್ಲಿ ಅಟ್ಟಾಡಿಸಿ ಅಪ್ಪ, ಮಗನ ಮೇಲೆ ಹಲ್ಲೆ ನಡೆಸಿ ಪರಾರಿ