ಕನ್ನಡಪ್ರಭ ವಾರ್ತೆ ಮೈಸೂರುಜಿಲ್ಲೆಯಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಗೆ ವಿಫುಲ ಅವಕಾಶವಿದೆ. ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ವರದಿ ತಯಾರಿಸಿ, ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.ತಮ್ಮ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹೋಮ್ ಸ್ಟೇ ಗಳು ಹಳ್ಳಿಗಳ ರೀತಿಯ ಅನುಭವ ನೀಡುವ ತಾಣಗಳು. ಹೋಮ್ ಸ್ಟೇ ಗಳಲ್ಲಿ 5 ರೂಮ್ ಗಳು ಮಾತ್ರ ಇರಬೇಕು. ನಗರ ಪ್ರದೇಶಗಳಲ್ಲಿ ಹೋಟೆಲ್ ಗಳನ್ನು ಹೋಮ್ ಸ್ಟೇ ಗಳಾಗಿ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಅವರು ಅಲ್ಲೇ ವಾಸವಿದ್ದು 5 ಕ್ಕಿಂತ ಕಡಿಮೆ ರೂಮ್ ಗಳನ್ನು ನಿರ್ಮಿಸಿಕೊಂಡಿದ್ದಾರೆ ಇದಕ್ಕೆ ಯಾವುದೇ ಕನ್ವರ್ಷನ್ ಬೇಕಿಲ್ಲ ಎಂದು ತಿಳಿಸಿ ಹಾಗೂ ಎನ್.ಒ.ಸಿ ನೀಡಲು ನಗರ ಪಾಲಿಕೆ ಆಯುಕ್ತರಿಗೆ ತಿಳಿಸಿದರು. ವರುಣ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಟೆಂಡರ್ ನೀಡಲಾಗಿದೆ. ಅದೇ ರೀತಿ ಜಿಲ್ಲೆಯ ಕೆರೆಗಳಲ್ಲಿ ಪ್ರವಾಸಿ ಬೋಟಿಂಗ್ ವ್ಯವಸ್ಥೆ ಮಾಡಲು ಸಾಧ್ಯತೆ ಇರುವ ಎರಡು ಮೂರು ಕೆರೆಗಳನ್ನು ಗುರುತಿಸುವಂತೆ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.ಪ್ರವಾಸೋಧ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ಮಾತನಾಡಿ, ಹೊಮ್ ಸ್ಟೆಗಳು ವಾಣಿಜ್ಯ ಉದ್ಯಮಗಳು ಅಲ್ಲ. ಕೇಂದ್ರ ಪ್ರವಾಸೋಧ್ಯಮ ಇಲಾಖೆ ವತಿಯಿಂದ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಸೆಲ್ಫಿ ಪಾಯಿಂಟ್ ಗಳನ್ನು ಹಾಗೂ ಮಾಹಿತಿ ಫಲಕಗಳನ್ನು ಅಳವಡಿಸಲಾಗುತ್ತಿದೆ. ಮೈಸೂರಿನ ಅಧಿಕೃತ ಲೋಗೋವನ್ನು ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು ಇತರೆ ಕ್ಷೇತ್ರಗಳಲ್ಲಿ ಅಗತ್ಯವಾಗಿ ಬಳಸಬೇಕು ಎಂದು ಅವರು ತಿಳಿಸಿದರು.ವರುಣ ಕೆರೆಯಲ್ಲಿ ಸಾಹಸ ಕ್ರೀಡೆಗಳು ಹಾಗೂ ಸ್ಥಳಗಳಲ್ಲಿ ಜಿಪ್ ಲೈನ್, ಸ್ಕೈ ಸೈಕಲ್ ಮತ್ತು ಜಾಯಿಂಟ್ ಸ್ವಿಂಗ್ ಎಂಬ ಹೆಚ್ಚುವರಿ ಚಟುವಟಿಕೆ ಆರಂಭಿಸಲು ಅನುಮತಿ ನೀಡಬಹುದು. ಪ್ರವಾಸೋಧ್ಯಮ ಇಲಾಖೆಯ ಸಾಮಾಜಿಕ ಜಾಲ ತಾಣವನ್ನು ಉನ್ನತ ಮಟ್ಟಕ್ಕೆ ಏರಿಸಲು ನೇರ ಪಾಲುದಾರರು ಅಥವಾ ಖಾಸಗಿ ಸಹಭಾಗಿತ್ವವನ್ನು ಪಡೆಯಬಹುದು ಎಂದರು.ಈ ಸಂದರ್ಭದಲ್ಲಿ ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ್ ದರ್ಶನ 2.0 ಅಡಿಯಲ್ಲಿ ಮೈಸೂರಿನ ಫೇಸ್ 1ರಲ್ಲಿ ಮೃಗಾಲಯ ಹಾಗೂ ಕಾರಂಜಿ ಕೆರೆಯ ಒಳಗೊಂಡಂತೆ ಟಾಂಗಾ ರೈಡ್, ಎಕೋಲಾಜಿಕಲ್ ಎಕ್ಸ್ ಫೀರಿಯ್ಸ್ ಸಂಬಂಧ ಡಿಪಿಆರ್ ಸಲ್ಲಿಕೆಯಾಗಿದ್ದು ಟೆಂಡರ್ ಕರೆಯಲಾಗಿದೆ. ಸ್ವದೇಶ ದರ್ಶನ್ ಯೋಜನೆಯ 2ನೇ ಹಂತದಲ್ಲಿ ನಗರದ ಹೃದಯ ಭಾಗದಲ್ಲಿರುವ ಹಳೆ ಜಿಲ್ಲಾಧಿಕಾರಿ ಕಚೇರಿಯನ್ನು ವಸ್ತು ಪ್ರದರ್ಶನವಾಗಿ ಪರಿವರ್ತಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯಕ್ಕೆ ಡಿಪಿಆರ್ ಸಲ್ಲಿಸಿದ್ದು ಅಂತಿಮ ಅನುಮೋದನೆ ಹಾಗೂ ಅನುದಾನ ಬಿಡುಗಡೆಗೆ ಸಲ್ಲಿಸಿಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ನಗರ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್, ಡಿಸಿಎಫ್ ಡಾ.ಕೆ.ಎನ್. ಬಸವರಾಜು, ಡಿಸಿಪಿ ಮುತ್ತುರಾಜ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಸ್ವಾಮಿ, ಜಿಎಸ್ಎಸ್ ಯೋಗ ಸಂಸ್ಥೆಯ ಶ್ರೀಹರಿ, ಗೈಡ್ಸ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.