ಇ-ಖಾತೆ ಆಂದೋಲನಕ್ಕೆ ಜಿಲ್ಲಾಧಿಕಾರಿ ಜಿ.ಪ್ರಭು ಚಾಲನೆ

KannadaprabhaNewsNetwork |  
Published : Apr 07, 2026, 01:30 AM IST
ಸಿಕೆಬಿ-3  ನಗರಸಭೆಯ ಆರವಣದಲ್ಲಿ ನಡೆದ ಇ-ಆಸ್ತಿ ವಿಶೇಷ ಅಭಿಯಾನಕ್ಕೆ ಜಿಲ್ಲಾಧಿಕಾರಿ ಜಿ.ಪ್ರಭು ಚಾಲನೆ ನೀಡಿದರು | Kannada Prabha

ಸಾರಾಂಶ

ಜಿಲ್ಲೆಯ ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲಿ ವಿಶೇಷ ಕಂದಾಯ ಗ್ರಾಮ ಅಭಿಯಾನ 2.O ಕಾರ್ಯಕ್ರಮದಡಿ 86,652 ಕುಟುಂಬಗಳಿಗೆ ಮಾಲಿಕತ್ವದ ಹಕ್ಕುಪತ್ರಗಳನ್ನು ನೀಡುವ ಕಾರ್ಯದ ಪ್ರಕ್ರಿಯೆ ಚಾಲನೆಯಲ್ಲಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯ ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮುಂದಿನ 3 ರಿಂದ 4 ತಿಂಗಳಲ್ಲಿ 70 ರಿಂದ 80 ಸಾವಿರ ಇ-ಖಾತೆಗಳನ್ನು ವಿತರಿಸಲು ಯೋಜಿಸಿ ಇ-ಖಾತೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.

ನಗರಸಭೆಯ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇ-ಆಸ್ತಿ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲಿ ವಿಶೇಷ ಕಂದಾಯ ಗ್ರಾಮ ಅಭಿಯಾನ 2.O ಕಾರ್ಯಕ್ರಮದಡಿ 86,652 ಕುಟುಂಬಗಳಿಗೆ ಮಾಲಿಕತ್ವದ ಹಕ್ಕುಪತ್ರಗಳನ್ನು ನೀಡುವ ಕಾರ್ಯದ ಪ್ರಕ್ರಿಯೆ ಚಾಲನೆಯಲ್ಲಿದೆ. ಅದೇ ರೀತಿ ಜಿಲ್ಲೆಯ ನಗರಾಡಳಿತ ಪ್ರದೇಶದ ವ್ಯಾಪ್ತಿಯಲ್ಲಿ 70 ರಿಂದ 80 ಸಾವಿರ ಮನೆ/ನಿವೇಶನಗಳಿಗೆ ಇ-ಆಸ್ತಿಗಳನ್ನು ವಿತರಿಸುವುದು ಬಾಕಿ ಇದೆ. ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳು ಹಾಗೂ ಕೆಲವು ಬಡಾವಣೆಗಳ ನಿವೇಶನಗಳಿಗೆ ಬಿ-ಖಾತೆ ಮಾಡಿಕೊಳ್ಳಲು ಹಾಗೂ ಈಗಾಗಲೇ ಬಿ-ಖಾತೆ ಹೊಂದಿರುವವರು ಎ-ಖಾತೆಯ ಇ-ಸ್ವತ್ತುಗಳನ್ನು ಹೊಂದಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ 23,535 ಆಸ್ತಿಗಳಿದ್ದು, ಈ ಪೈಕಿ 14,918 ಅಧಿಕೃತ ಹಾಗೂ 8,617 ಅನಧಿಕೃತ ಆಸ್ತಿಗಳು ಇರುತ್ತವೆ. ಒಟ್ಟು ಲಭ್ಯವಿರುವ ಆಸ್ತಿಗಳ ಪೈಕಿ 11,391 ಆಸ್ತಿಗಳಿಗೆ ಈಗಾಗಲೇ ಇ-ಆಸ್ತಿಯನ್ನು ನೀಡಲಾಗಿದೆ. ಉಳಿದ 12,144 ಆಸ್ತಿಗಳಿಗೆ ಇ-ಖಾತೆಗಳನ್ನು ನೀಡುವುದು ಜಿಲ್ಲಾ ಕೇಂದ್ರ ಒಂದರಲ್ಲೇ ಬಾಕಿ ಇರುತ್ತದೆ. ಬಾಕಿ ಇರುವ ಆಸ್ತಿಗಳ ಪ್ರತಿ ಮಾಲೀಕರ ಮನೆ ಬಾಗಿಲಿಗೆ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ತೆರಳಿ ಇ-ಖಾತೆ ಮಾಡಿಕೊಡಲು ಏನೆಲ್ಲ ದಾಖಲೆ ಪತ್ರಗಳನ್ನು ನೀಡಬೇಕೆಂದು ಮನವರಿಕೆ ಮಾಡಿ ತಿಳಿವಳಿಕೆ ಪತ್ರವನ್ನು ವಿತರಿಸುವ ಕಾರ್ಯ ಇಂದಿನಿಂದ ಕೆಲವು ದಿನಗಳ ವರೆಗೆ ನಡೆಯಲಿದೆ.

ನಂತರ ಸಾರ್ವಜನಿಕರಿಂದ ಸಂಬಂಧಪಟ್ಟ ದಾಖಲೆಗಳನ್ನು ಸ್ವೀಕರಿಸಿ ಮುಂದಿನ 3 ರಿಂದ 4 ತಿಂಗಳಲ್ಲಿ ಶೇ. 80 ರಷ್ಟು ಇ-ಖಾತೆಗಳನ್ನು ವಿತರಿಸಲು ಗುರಿಯನ್ನು ಈ ಅಭಿಯಾನದಡಿ ಹೊಂದಲಾಗಿದೆ. ಇ-ಸ್ವತ್ತು ಅಭಿಯಾನವನ್ನು ಇಂದು ಜಿಲ್ಲಾ ಕೇಂದ್ರದಲ್ಲಿ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲು ಈಗಾಗಲೇ ಸೂಚನೆ ನೀಡಿರುವುದಾಗಿ ಮಾಹಿತಿ ನೀಡಿದರು.ಸಾರ್ವಜನಿಕರು ಸಲ್ಲಿಸುವ ಅಹವಾಲು ಹಾಗೂ ಅರ್ಜಿಗಳ ವಿಲೆವಾರಿಯ ಸ್ಥಿತಿಗತಿಯನ್ನು ಕರಾರುವಕ್ಕಾಗಿ ತಿಳಿದುಕೊಳ್ಳಲು ಜಿಲ್ಲಾಡಳಿತ ಎಲ್ಲ ಇಲಾಖೆಗಳಲ್ಲಿ ಇ-ಕಚೇರಿ ಆಡಳಿತ ವ್ಯವಸ್ಥೆಯನ್ನು ಇದೇ ಏಪ್ರಿಲ್ 15 ರಿಂದ ಕಡ್ಡಾಯವಾಗಿ ಜಾರಿಗೆ ತರಲಾಗುತ್ತಿದೆ. ಇಲಾಖೆಗಳ ಮುಖ್ಯಸ್ಥರು ನಿಗಾವಹಿಸಿ ಇ-ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸಲು ಸೂಚಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಮಂಜುನಾಥ್, ಪೌರಾಯುಕ್ತ ಮನ್ಸೂರ್ ಅಲಿ ಇದ್ದರು. ಈ ವೇಳೆ ಜಿಲ್ಲಾಧಿಕಾರಿಗಳು ಇ-ಖಾತೆ ಪಡೆಯಲು ಸಲ್ಲಿಸಬೇಕಾದ ದಾಖಲೆಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿ ಅರ್ಜಿಗಳನ್ನು ಸಾರ್ವಜನಿಕರಿಗೆ ವಿತರಿಸಿದ್ದು, ಗಮನ ಸೆಳೆಯಿತು.ಸಿಕೆಬಿ-3 ನಗರಸಭೆಯ ಆರವಣದಲ್ಲಿ ನಡೆದ ಇ-ಆಸ್ತಿ ವಿಶೇಷ ಅಭಿಯಾನಕ್ಕೆ ಜಿಲ್ಲಾಧಿಕಾರಿ ಜಿ.ಪ್ರಭು ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಕಸ್ಮಿಕ ಬೆಂಕಿ: 2 ರಾಗಿ ಮೆದೆ ಭಸ್ಮ
ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯ ಗಡಿ ಪರಿಷ್ಕರಿಸಿ