ನಗರೋತ್ಥಾನ ಕಾಮಗಾರಿ ಜಿಲ್ಲಾಧಿಕಾರಿ ಪರಿಶೀಲನೆ

KannadaprabhaNewsNetwork |  
Published : Sep 23, 2024, 01:24 AM IST
ನರಸಿಂಹರಾಜಪುರ ಪಟ್ಟಣ ಪಂಚಾಯಿತಿಯ ನಗರೋತ್ತಾನ ಕಾಮಗಾರಿಯನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್  ಭಾನುವಾರ ವೀಕ್ಷಣೆ ಮಾಡಿದರು | Kannada Prabha

ಸಾರಾಂಶ

ನರಸಿಂಹರಾಜಪುರ, ಪಟ್ಟಣದ ವಿವಿಧ ವಾರ್ಡ್ ಗಳ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ನಿರ್ಮಿಸಿರುವ ಕಾಮಗಾರಿಯನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಭಾನುವಾರ ವೀಕ್ಷಿಸಿದರು.

- ಪಟ್ಟಣ ಪಂಚಾಯಿತಿ ಸದಸ್ಯರಿಂದ ಹಲವು ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪಟ್ಟಣದ ವಿವಿಧ ವಾರ್ಡ್ ಗಳ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ನಿರ್ಮಿಸಿರುವ ಕಾಮಗಾರಿಯನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಭಾನುವಾರ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರೋತ್ಥಾನ ಯೋಜನೆಯಡಿ ಕಾಮಗಾರಿ ಪೂರ್ಣಗೊಂಡಿದೆ. ಈ ಕಾಮಗಾರಿ ಗಳಲ್ಲಿ ಶೇ. 25 ರಷ್ಟು ಕಾಮಗಾರಿ ಗುಣಮಟ್ಟವನ್ನು ಜಿಲ್ಲಾಧಿಕಾರಿ ಪರಿಶೀಲಿಸಿ ಬಿಲ್ ಪಾವತಿಸಬೇಕೆಂಬ ನಿಯಮವಿದೆ. ಅದರಂತೆ ಇಂದು ಶೃಂಗೇರಿ, ಎನ್.ಆರ್.ಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಭೇಟಿ ನೀಡಿದ್ದೇನೆ. ನಗರೋತ್ಥಾನ ಯೋಜನೆಯಡಿ ಎನ್.ಆರ್.ಪುರ ಪಟ್ಟಣದ 6,7,8.10,11 ನೇ ವಾರ್ಡ್ ಗಳ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಂಕ್ರಿಟ್ ರಸ್ತೆ, ಟಾರ್ ರಸ್ತೆ, ಬಾಕ್ಸ್ ಚರಂಡಿ ಮತ್ತು ಕವರಿಂಗ್ ಸ್ಲ್ಯಾಬ್ ಕಾಮಗಾರಿ ವೀಕ್ಷಣೆ ಮಾಡಿ ಕಾಮಗಾರಿ ಗುಣಮಟ್ಟ ಪರಿಶೀಲಿಸಿದ್ದೇವೆ. ಡಿಎಂಎ ಅವರು 3ನೇ ಏಜೆನ್ಸಿಯಿಂದ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ನಡೆಸಿದ್ದಾರೆ. ಅಪೂರ್ಣಗೊಂಡಿರುವ ಕೆಲವು ಕಾಮಗಾರಿಯನ್ನು ಪಟ್ಟಣ ಪಂಚಾಯಿತಿ ಅನುದಾನದಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ನಗರೋತ್ಥಾನ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಗುಣಮಟ್ಟ ತೃಪ್ತಿತಂದಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕಿ ನಾಗರತ್ನ, ಎಇಇ ಜರೀನಾ, ತಹಸೀಲ್ದಾರ್ ತನುಜಾ ಟಿ.ಸವದತ್ತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಕಂದಾಯ ನಿರೀಕ್ಷಕ ವಿಜಯಕುಮಾರ್, ಎಂಜಿನಿಯರ್ ಸುನಿಲ್ ಮತ್ತಿತರರಿದ್ದರು.

-- ಬಾಕ್ಸ್‌ ---

ಪಟ್ಟಣ ಪಂಚಾಯಿತಿ ಸದಸ್ಯರಿಂದ ಡಿಸಿ ಭೇಟಿ

ಪಟ್ಟಣಕ್ಕೆ ಭಾನುವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರನ್ನು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ನೇತೃತ್ವದಲ್ಲಿ ಸದಸ್ಯರ ತಂಡ ಭೇಟಿ ಮಾಡಿ ಹಲವು ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ನರಸಿಂಹರಾಜಪುರ ಪಟ್ಟಣದ ವ್ಯಾಪ್ತಿಯಲ್ಲಿ ಗ್ರಾಮಠಾಣಾ, ಕಾಫಿ ಕರಾಬು, ಗೋಮಾಳ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಮನೆ ನಿರ್ಮಿಸಿ ಕೊಂಡಿರುವವರಿಗೆ ಹಕ್ಕು ಪತ್ರ ನೀಡಲು ಇನ್ನೂ ಸಾಧ್ಯವಾಗಿಲ್ಲ. ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಪತ್ರ ಬರೆದರೆ ಗ್ರಾಮ ಠಾಣಾ ಪಟ್ಟಣದ ವ್ಯಾ‍ಪ್ತಿಗೆ ಬರುವುದಿಲ್ಲ ಎನ್ನುತ್ತಾರೆ. ಜಿಲ್ಲಾಧಿಕಾರಿಗೆ ಪತ್ರ ಬರೆದರೆ ನಿಮ್ಮ ಹಂತದಲ್ಲಿಯೇ ಕ್ರಮಕೈಗೊಳ್ಳಿ ಎನ್ನುತ್ತಾರೆ. ಈಗಾಗಲೇ ಮನವಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಈ ಸಮಸ್ಯೆ ಕಂದಾಯ ಇಲಾಖೆಗೆ ಸಂಬಂಧಿಸಿರುವುದರಿಂದ ಸಮಸ್ಯೆ ಬಗೆಹರಿಸಿ ಕೊಡಬೇಕು. ಅಲ್ಲದೆ ಪಟ್ಟಣದಲ್ಲಿ ವಾಸ ಮಾಡುತ್ತಿರುವ ನಿವೇಶನ ರಹಿತರಿಗೆ ನಿವೇಶನ ನೀಡಲು ಅರಣ್ಯ ಇಲಾಖೆ ವಶದಲ್ಲಿರುವ ಗೋಮಾಳ ಜಾಗದ ಜಮೀನಿನಲ್ಲಿ ಕನಿಷ್ಠ 10 ಎಕ್ರೆ ಜಮೀನು ಬಿಡಿಸಿಕೊಡಬೇಕು ಎಂದು ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮನವಿ ಮಾಡಿದರು. ಸದಸ್ಯ ಮುನಾವರ್‌ ಪಾಷಾ ಮಾತನಾಡಿ, ಅರಣ್ಯ ಇಲಾಖೆಗೆ ನಾಟಾ ಸಂಗ್ರಹಾಲಯಕ್ಕೆ ನಾಗರಮಕ್ಕಿಯಲ್ಲಿ ಜಾಗ ಮಂಜೂರಾಗಿದೆ. ಆದ್ದರಿಂದ ಪಟ್ಟಣದ ಜನತೆಗೆ ಅನುಕೂಲವಾಗಲು ಗೋಮಾಳ ಜಾಗ ಬಿಡಿಸಿಕೊಡಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಮನೆ ನಿರ್ಮಿಸಿ ಕೊಂಡಿರುವುದರಿಂದ ಹಕ್ಕು ಪತ್ರ ಕೊಡುವ ಬಗ್ಗೆ ಕಾನೂನಿನ ಸಾಧಕಬಾಧಕಗಳ ಪರಿಶೀಲಿಸಲಾಗುತ್ತಿದೆ. ಪಟ್ಟಣ ಪಂಚಾಯಿತಿ ಸಭೆ ನಿರ್ಣಯವನ್ನು ಕಳಿಸಿಕೊಡುವಂತೆ ಸೂಚಿಸಿದರು.

ಪಂಚಾಯಿತಿ ವಾರ್ಡ್ ನಂ 1 ರ ಸರ್ವೆ ನಂ 200 ರಲ್ಲಿ ಹಲವು ಜನರ ಮನೆ ನಿರ್ಮಿಸಿಕೊಂಡಿದ್ದು ಅವರಿಗೆ ಈಗಾಗಲೇ ಮೂಲ ಸೌಕರ್ಯ ಒದಗಿಸಲಾಗಿದೆ. ಆದ್ದರಿಂದ ಹಕ್ಕು ಪತ್ರ ಕೊಡಬೇಕು. ಅಲ್ಲದೆ ನಗರೋತ್ಥಾನ ಯೋಜನೆಯಡಿ ವಾರ್ಡ ನಂಬರ್ 1 ರ ಕಾಮಗಾರಿ ಕಳಪೆ ಯಾಗಿದೆ ಎಂದು ಸದಸ್ಯೆ ಜುಬೇದ ದೂರಿದರು.

ನಗರೋತ್ಥಾನ ಯೋಜನೆಯಡಿ ಕಾಮಗಾರಿ ಆರಂಭವಾಗಿ 22 ತಿಂಗಳೂ ಕಳೆದರೂ ಪೂರ್ಣಗೊಂಡಿಲ್ಲ ಎಂದು ಪಪಂ ಸದಸ್ಯರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಪಟ್ಟಣ ಪಂಚಾಯಿತಿ ಸದಸ್ಯರಾದ ಸೈಯದ್ ವಸೀಂ, ಮುಕುಂದ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಗಾವಿ ಅಧಿವೇಶನಕ್ಕೆ ಪೊಲೀಸರ ಸರ್ಪಗಾವಲು
ಮೆಕ್ಕೆಜೋಳ ಖರೀದಿಯ ಮಿತಿ 50 ಕ್ವಿಂಟಲ್‌ಗೇರಿಕೆ