ಚಿಕ್ಕಮಗಳೂರುಬಿಂಡಿಗದ ಶ್ರೀ ದೇವಿರಮ್ಮ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ನ. 7ರಿಂದ 11ರವರೆಗೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಹಿನ್ನೆಲೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಬಿಂಡಿಗದ ಶ್ರೀ ದೇವಿರಮ್ಮ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ನ. 7ರಿಂದ 11ರವರೆಗೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಹಿನ್ನೆಲೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ದೇವಾಲಯದ ದೀಪೋತ್ಸವ ಹಾಗೂ ಜಾತ್ರಾ ಮಹೋತ್ಸವದ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾತ್ರೆಗೆ ಆಗಮಿಸುವ ಭಕ್ತರ ವಾಹನ ನಿಲುಗಡೆಗೆ ಸೂಕ್ತ ಸ್ಥಳ ಗುರುತಿಸಬೇಕು. ಬೆಟ್ಟಕ್ಕೆ ನಾಲ್ಕು ದಿಕ್ಕುಗಳಿಂದ ಭಕ್ತರು ತೆರಳುವುದರಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕು. ದೇವಾಲಯದ ಆವರಣ ಹಾಗೂ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಅಗತ್ಯ ಸಿಬ್ಬಂದಿ ಮತ್ತು ತ್ಯಾಜ್ಯ ಸಂಗ್ರಹಕ್ಕೆ ಟಿಪ್ಪರ್ ವ್ಯವಸ್ಥೆ ಮಾಡಬೇಕು. ಶುದ್ಧ ಕುಡಿವ ನೀರು ಪೂರೈಸಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು. ಜಾತ್ರೆ ಮಾಹಿತಿ ನೀಡುವ ನಾಮಫಲಕ ಅಳವಡಿಸಬೇಕು. ಅನುಮತಿ ಪಡೆಯದೆ ಅಂಗಡಿ ತೆರೆಯದಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.ಭಕ್ತರಿಗೆ ತುರ್ತು ಆರೋಗ್ಯ ಸೇವೆ ಒದಗಿಸಲು ಬೆಟ್ಟದ ಮೇಲೆ, ಮಧ್ಯಭಾಗದಲ್ಲಿ, ಫಲಾಹಾರ ಕಲ್ಲು, ಐ.ಡಿ.ಪೀಠ (ಮಾಣಿಕ್ಯ ಧಾರ) ಹಾಗೂ ದೇವಾಲಯದ ಕೆಳಭಾಗದಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆಯಬೇಕು. ವೈದ್ಯರು, ಸಿಬ್ಬಂದಿ ಹಾಗೂ ಅಗತ್ಯ ವೈದ್ಯಕೀಯ ಪರಿಕರ ನಿಯೋಜಿಸಬೇಕು. ಮೂರು ಸುಸಜ್ಜಿತ ಆಂಬ್ಯುಲೆನ್ಸ್ಗಳನ್ನು ಸಿದ್ಧವಾಗಿಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ತಿಳಿಸಿದರು.ಜಾತ್ರೆಯ ಅವಧಿಯಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಅಗ್ನಿಶಾಮಕ ಸಿಬ್ಬಂದಿ ಅಗತ್ಯ ರಕ್ಷಣಾ ಸಾಮಗ್ರಿ ಗಳೊಂದಿಗೆ ಬೆಟ್ಟ ಹತ್ತುವ ಸ್ಥಳಗಳು ಹಾಗೂ ದೇವಾಲಯದ ಕೆಳಭಾಗದಲ್ಲಿ ನಿಯೋಜನೆಗೊಂಡು ಮುನ್ನೆಚ್ಚರಿಕೆ ಕ್ರಮ ಕೈ ಗೊಳ್ಳಬೇಕು. ಬೆಟ್ಟದ ಕಡಿದಾದ ಮಾರ್ಗಗಳಲ್ಲಿ ಹಗ್ಗದ ನೆರವಿನಿಂದ ಭಕ್ತರು ಸುರಕ್ಷಿತವಾಗಿ ಹತ್ತಲು ವ್ಯವಸ್ಥೆ ಮಾಡಬೇಕು ಎಂದರು.ಜಾತ್ರೆ ಆರಂಭದಿಂದ ಅಂತ್ಯದವರೆಗೆ ಕೆಎಸ್ಆರ್ಟಿಸಿಯಿಂದ ವಿಶೇಷ ಬಸ್ಗಳನ್ನು ಓಡಿಸಬೇಕು. ಲೋಕೋಪಯೋಗಿ ಇಲಾಖೆ ರಸ್ತೆಗಳನ್ನು ತಾತ್ಕಾಲಿಕವಾಗಿ ದುರಸ್ತಿಪಡಿಸಬೇಕು. ದೇವಾಲಯಕ್ಕೆ ತೆರಳುವ ರಸ್ತೆ ಇಕ್ಕೆಲಗಳಲ್ಲಿ ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸಬೇಕು. ವಾಹನ ನಿಲುಗಡೆ ಸ್ಥಳಗಳಲ್ಲೂ ಸ್ವಚ್ಛತೆ ಕಾಪಾಡಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದರ್ ಕುಮಾರ್ ದಯಾಮ, ಉಪವಿಭಾಗಾಧಿಕಾರಿ ಪುರುರಾಜ್ ಸಿಂಗ್ ಸೋಲಂಕಿ, ತಹಸೀಲ್ದಾರ್ ರೇಷ್ಮಾ ಶೆಟ್ಟಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.