)
ಕಳಸದಲ್ಲಿ ಅತ್ಯಧಿಕ ಮಳೆ । ಹಿಂಗಾರು ಬಿತ್ತನೆಗೆ ಅನುಕೂಲ:
ತೀವ್ರ ಬರ ಪರಿಸ್ಥಿತಿಯಿಂದ ಕಂಗೆಟ್ಟಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಗುರುವಾರ ಸಂಜೆಯಿಂದ ಮಳೆ ಚುರುಕುಗೊಂಡಿದ್ದು, ಶುಕ್ರವಾರವೂ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಮಲೆನಾಡು ಹಾಗೂ ಬಯಲುಸೀಮೆಯ ಹಲವು ಭಾಗಗಳಲ್ಲಿ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ನಿರೀಕ್ಷೆಯೊಂದಿಗೆ ರೈತರು ಕೊಂಚ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ.ಗುರುವಾರ ಸಂಜೆ ಕೊಪ್ಪ, ಮೂಡಿಗೆರೆ, ಕೊಟ್ಟಿಗೆಹಾರ ಸೇರಿದಂತೆ ಮಲೆನಾಡಿನ ವಿವಿಧೆಡೆ ಮಳೆಯಾಗಿತ್ತು. ರಾತ್ರಿ ವೇಳೆಗೆ ಶೃಂಗೇರಿ, ನರಸಿಂಹರಾಜಪುರ, ಮೂಡಿಗೆರೆ, ಕಡೂರು, ಬೀರೂರು, ಅಜ್ಜಂಪುರ ಹಾಗೂ ಚಿಕ್ಕಮಗಳೂರು ನಗರ ಸೇರಿ ದಂತೆ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಕೊಪ್ಪ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆ ಯಾಗಿದ್ದು, ಕೊಪ್ಪ ಪಟ್ಟಣದಲ್ಲಿ ಗುರುವಾರ ರಾತ್ರಿ ಆರಂಭವಾದ ಮಳೆ ಶುಕ್ರವಾರ ಬೆಳಗಿನ ಜಾವದವರೆಗೂ ಮುಂದುವರಿದಿದೆ.ಶುಕ್ರವಾರ ಬೆಳಗ್ಗೆಯಿಂದಲೂ ಜಿಲ್ಲೆಯ ಬಹುತೇಕ ಕಡೆ ಮೋಡ ಕವಿದ ವಾತಾವರಣವಿತ್ತು. ದಿನವಿಡೀ ಆಗಾಗ್ಗೆ ತುಂತುರು ಮಳೆಯಾಗಿದೆ. ಕೆಲವು ಪ್ರದೇಶಗಳಲ್ಲಿ ಕೆಲಕಾಲ ಉತ್ತಮ ಮಳೆ ಸುರಿದಿದೆ.ಕಳಸದಲ್ಲಿ ಅತ್ಯಧಿಕ ಮಳೆ:ಶುಕ್ರವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡಿದ್ದು 24 ಗಂಟೆಗಳ ಅವಧಿಯಲ್ಲಿ ಕಳಸ ತಾಲೂಕಿನಲ್ಲಿ ಅತ್ಯಧಿಕ 51.4 ಮಿ.ಮೀ. ಮಳೆಯಾಗಿದೆ. ಶೃಂಗೇರಿಯಲ್ಲಿ 40.6 ಮಿ.ಮೀ., ಮೂಡಿಗೆರೆಯಲ್ಲಿ 38.4 ಮಿ.ಮೀ., ನರಸಿಂಹರಾಜಪುರದಲ್ಲಿ 28.5 ಮಿ.ಮೀ. ಹಾಗೂ ಕೊಪ್ಪದಲ್ಲಿ 26.7 ಮಿ.ಮೀ. ಮಳೆಯಾಗಿದೆ.ಚಿಕ್ಕಮಗಳೂರು ತಾಲೂಕಿನಲ್ಲಿ 16.5 ಮಿ.ಮೀ., ತರೀಕೆರೆಯಲ್ಲಿ 7 ಮಿ.ಮೀ., ಕಡೂರಿನಲ್ಲಿ 6.5 ಮಿ.ಮೀ. ಹಾಗೂ ಅಜ್ಜಂಪುರದಲ್ಲಿ 5.4 ಮಿ.ಮೀ. ಮಳೆ ದಾಖಲಾಗಿದೆ. ಮಲೆನಾಡಿನ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದರೆ, ಬಯಲು ಸೀಮೆಯ ಕೆಲವು ಭಾಗಗಳಲ್ಲಿ ತುಸು ಕಡಿಮೆ ಮಳೆಯಾಗಿದೆ.ಕಡೂರು, ಅಜ್ಜಂಪುರ ಮತ್ತು ತರೀಕೆರೆ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಿದ್ದರಿಂದ ಕೃಷಿ ಚಟುವಟಿಕೆ ಗಳಿಗೆ ತೊಂದರೆಯಾಗಿತ್ತು. ತೋಟಗಳಿಗೆ ನೀರುಣಿಸಲು ಅವಲಂಬಿಸಿದ್ದ ಹಲವು ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಕೆಲವು ತೋಟಗಳಲ್ಲಿ ಕೊಳವೆಬಾವಿಗಳು ಬತ್ತಿದ್ದರಿಂದ ರೈತರು ಟ್ಯಾಂಕರ್ ಮೂಲಕ ನೀರು ತರಿಸಿ ಬೆಳೆಗಳಿಗೆ ಪೂರೈಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.ಗುರುವಾರ ಮತ್ತು ಶುಕ್ರವಾರ ಸುರಿದ ಮಳೆಯಿಂದ ರೈತರು ತುಸು ನಿರಾಳರಾಗಿದ್ದಾರೆ. ಮುಂದಿನ ದಿನಗಳಲ್ಲೂ ಉತ್ತಮ ಮಳೆಯಾದರೆ ಅಂತರ್ಜಲ ಮಟ್ಟ ಸುಧಾರಿಸುವ ಜತೆಗೆ ತೋಟಗಳಿಗೆ ನೀರಿನ ಕೊರತೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಿದೆ.ಹಿಂಗಾರು ಬಿತ್ತನೆಗೆ ಅನುಕೂಲ: ಜಿಲ್ಲೆಯ ಬಯಲುಸೀಮೆ ಭಾಗಗಳಲ್ಲಿ ಸುರಿದ ಮಳೆ ಹಿಂಗಾರು ಬಿತ್ತನೆಗೆ ಕೃಷಿ ಭೂಮಿ ಸಿದ್ಧಪಡಿಸಲು ಸಹಕಾರಿ. ಮುಂಗಾರು ಅವಧಿಯಲ್ಲಿ ಬಿತ್ತನೆ ಮಾಡಿರುವ ರಾಗಿ ಬೆಳೆಗೆ ಕೂಡ ಮಳೆ ಅಗತ್ಯವಿದ್ದು, ಪ್ರಸ್ತುತ ಸುರಿದ ಮಳೆ ಬೆಳೆಗಳ ಬೆಳವಣಿಗೆಗೆ ಪೂರಕವಾಗಿದೆ. ತೀವ್ರ ಬರದಿಂದ ತೇವಾಂಶ ಕಳೆದುಕೊಂಡಿದ್ದ ಅಜ್ಜಂಪುರ ಮತ್ತು ಬೀರೂರು ಸುತ್ತಮುತ್ತಲಿನ ಕೆಲವು ಹೊಲಗಳಲ್ಲಿ ಶುಕ್ರವಾರ ಮಳೆ ನೀರು ನಿಂತಿರುವುದು ಕಂಡುಬಂದಿದೆ....ಬಾಕ್ಸ್....
ಒಂದು ವಾರ ಮಳೆ ಮುನ್ಸೂಚನೆಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೆರಡು ದಿನ ಹೊರತುಪಡಿಸಿ ಮುಂದಿನ ಒಂದು ವಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಿಲ್ಲೆಯ ಹಲವು ಭಾಗಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮಳೆ ಮುಂದುವರಿದರೆ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಅನುಕೂಲವಾಗುವ ನಿರೀಕ್ಷೆಯಿದೆ.... ಬಾಕ್ಸ್....ಶುಕ್ರವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ 24 ಗಂಟೆಗಳ ಮಳೆ ವಿವರ(ಮಿ.ಮೀ)ತಾಲೂಕು ವಾಡಿಕೆ ಮಳೆ ವಾಸ್ತವಿಕ ಮಳೆ
ಕಡೂರು 1.8 6.5
ಮೂಡಿಗೆರೆ 4.2 38.4
ಶೃಂಗೇರಿ 8.6 40.6
ಅಜ್ಜಂಪುರ 3.9 5.4
ಒಟ್ಟು/ಸರಾಸರಿ 4.3 20.8