ಬೆಳ್ತಂಗಡಿ: ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮುಲೈಮುಗಿಲನ್ ಭೇಟಿ

KannadaprabhaNewsNetwork |  
Published : Aug 02, 2024, 12:45 AM IST
೧೧ | Kannada Prabha

ಸಾರಾಂಶ

ಮದ್ದಡ್ಕ, ಪಡಂಗಡಿ, ಪೊಯ್ಯೆಗುಡ್ಡೆ ಸಂಪರ್ಕ ಮಾರ್ಗದಲ್ಲಿನ ಕುದ್ರೆಂಜ ಎಂಬಲ್ಲಿ ರಸ್ತೆ ಕುಸಿದಿರುವ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ತಾಲೂಕಿನಲ್ಲಿ ಮಳೆ ಹಾನಿ ಪ್ರದೇಶಗಳಿಗೆ ದ.ಕ. ಜಿಲ್ಲಾಧಿಕಾರಿ ಮುಲೈಮುಗಿಲನ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮದ್ದಡ್ಕ, ಪಡಂಗಡಿ, ಪೊಯ್ಯೆಗುಡ್ಡೆ ಸಂಪರ್ಕ ಮಾರ್ಗದಲ್ಲಿನ ಕುದ್ರೆಂಜ ಎಂಬಲ್ಲಿ ರಸ್ತೆ ಕುಸಿದಿರುವ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾರ್ವಜನಿಕರು ಇಂತಹ ಅಪಾಯಕಾರಿ ರಸ್ತೆಗಳಲ್ಲಿ ಪ್ರಯಾಣಿಸದಂತೆ ಅವರು ಮನವಿ ಮಾಡಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತು ಕಾಮಗಾರಿ ನಡೆಸಲು, ಅಂದಾಜು ವೆಚ್ಚ ಮಾಡಿ ವರದಿ ನೀಡುವಂತೆ ಸೂಚಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬುಧವಾರ ರಾತ್ರಿ ತಾಲೂಕಿನಲ್ಲಿ ಅಧಿಕ ಮಳೆಯಾಗಿದ್ದು ಅಪಾರ ಹಾನಿಯಾಗಿದೆ. ರಾತ್ರಿ ವೇಳೆಯಲ್ಲಿ ತಹಸೀಲ್ದಾರರ ನೇತೃತ್ವದ ತಂಡ, ಅಗ್ನಿಶಾಮಕ ದಳ ಹಾಗು ಸಾರ್ವಜನಿಕರು, ಜನಪ್ರತಿನಿಧಿಗಳು ತುರ್ತು ಕಾರ್ಯದಲ್ಲಿ ಸಹಕರಿಸಿದ್ದಾರೆ. ಮುಂದೆ ಮನೆ ನಿರ್ಮಾಣದ ಸಂದರ್ಭ ಸುರಕ್ಷತೆಯನ್ನು ಅಳವಡಿಸಿ ಮನೆ ನಿರ್ಮಿಸಬೇಕು. ಪರವಾನಗಿ ನೀಡುವಾಗ ಕೂಡ ಎಲ್ಲ ಸುರಕ್ಷಿತಾ ನಿಯಮ ಅನುಸರಿಸಲು ಅದೇಶ ಮಾಡಲಾಗುತ್ತದೆ. ಇಲ್ಲವಾದಲ್ಲಿ ಕೇರಳ ವಯನಾಡ್ ಸ್ಥಿತಿ ಬರಬಹುದು ಎಂದರು.

ತಾಲೂಕಿನಲ್ಲಿ ಪ್ರಮುಖವಾಗಿ ನಾಲ್ಕು ಕಡೆ ರಸ್ತೆ ಸಂಚಾರಕ್ಕೆ ತಡೆಯಾಗಿದೆ. ಹಲವು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಸಂಪೂರ್ಣ ಹಾನಿಯಾದ ಮನೆಗಳಿಗೆ ಸರ್ಕಾರದ ನಿಯಮದಂತೆ ಒಂದು ಲಕ್ಷದ ಇಪ್ಪತೈದು ಸಾವಿರ ಪರಿಹಾರ ನೀಡಲಾಗುವುದು. ಉಳಿದಂತೆ ಹಾನಿಯನ್ನು ಪರಿಗಣಿಸಿ ಪರಿಹಾರ ನೀಡಲಾಗುವುದು ಎಂದರು. ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ ಅನಾಹುತವಾಗದಂತೆ ತಡೆಯಲು, ಮಕ್ಕಳ ಮೇಲಿನ ಕಾಳಜಿಯಿಂದ ರಜೆ ನೀಡಲಾಗುತ್ತದೆ. ಪೋಷಕರು ಕೂಡ ಮಕ್ಕಳನ್ನು ಮಳೆ ಸಂದರ್ಭದಲ್ಲಿ ಹೊರಗೆ ಕಳಿಸಬಾರದು ಎಂದರು.

ಬಳಿಕ ಸವಣಾಲು, ಅಳದಂಗಡಿ, ವೇಣೂರು ಭಾಗಗಳಿಗೆ ಭೇಟಿ ನೀಡಿದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ನ.ಪಂ. ಉಪಾಧ್ಯಕ್ಷ ಜಯಾನಂದ ಗೌಡ, ಪಡಂಗಡಿ ಗ್ರಾ. ಪಂ. ಅಧ್ಯಕ್ಷೆ ಮೀನಾಕ್ಷಿ, ಉಪಾಧ್ಯಕ್ಷ ಸಂತೋಷ್ ಕುಮಾರ್, ತಹಸೀಲ್ದಾರ್ ಪ್ರಥ್ವಿ ಸಾನಿಕಂ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಆನಂದ್, ತಾ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಮ್ಯಾನೇಜರ್ ಪ್ರಶಾಂತ್ ಡಿ, ಜಿ. ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರ ನಿತಿನ್ ನಾಯ್ಕ್, ನ.ಪಂ. ಮುಖ್ಯಾಧಿಕಾರಿ ರಾಜೇಶ್, ಸ್ಥಳೀಯ ಗ್ರಾ. ಪಂ. ಅಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯಾಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು