ಶಾಲಾ ಆವರಣದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಬ್ರೇಕ್: ನಗರಸಭೆಗೆ ಜಿಲ್ಲಾಧಿಕಾರಿ ಆದೇಶ

KannadaprabhaNewsNetwork |  
Published : Jun 30, 2026, 02:15 AM IST
 | Kannada Prabha

ಸಾರಾಂಶ

ನಗರದ ಪ್ರತಿಷ್ಠಿತ ಬಾಯಿ ಕುವೇರಬಾಯಿ ಶಾಲೆಯ ಆವರಣದಲ್ಲಿ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ನಗರಸಭೆಯು ನಡೆಸುತ್ತಿದ್ದ ಬಸ್ ನಿಲ್ದಾಣದ ಕಾಮಗಾರಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ತಕ್ಷಣವೇ ತಡೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರವಾರ

ನಗರದ ಪ್ರತಿಷ್ಠಿತ ಬಾಯಿ ಕುವೇರಬಾಯಿ ಶಾಲೆಯ ಆವರಣದಲ್ಲಿ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ನಗರಸಭೆಯು ನಡೆಸುತ್ತಿದ್ದ ಬಸ್ ನಿಲ್ದಾಣದ ಕಾಮಗಾರಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ತಕ್ಷಣವೇ ತಡೆ ನೀಡಿದ್ದಾರೆ. ಶಾಲಾ ಜಾಗದ ರಕ್ಷಣೆಗಾಗಿ ಎಸ್‌ಡಿಎಂಸಿ ಸದಸ್ಯರು ಹಾಗೂ ಹಿತರಕ್ಷಣಾ ಸಮಿತಿಯವರು ನಡೆಸಿದ ಹೋರಾಟಕ್ಕೆ ತಕ್ಷಣದ ಜಯ ಸಿಕ್ಕಂತಾಗಿದೆ.ಶನಿವಾರ ಶಾಲೆಯ ಎಸ್‌ಡಿಎಂಸಿ ಸದಸ್ಯರು ಮತ್ತು ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದ್ದರು. ಬಾಯಿ ಕುವರಬಾಯಿ ಶಾಲೆಯ ಜಾಗವು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ ಬಳಕೆಯಾಗಬೇಕು ಎಂದು ಹೈಕೋರ್ಟ್ ಈ ಹಿಂದೆಯೇ ಆದೇಶಿಸಿದೆ. ಶಾಲೆಯ ಆರ್‌ಟಿಸಿ ದಾಖಲೆಯಲ್ಲಿಯೂ ಶಿಕ್ಷಣ ಇಲಾಖೆಯ ಹೆಸರೇ ನಮೂದಾಗಿದೆ. ಅಲ್ಲದೆ, ಕಂದಾಯ ಇಲಾಖೆಯು ಶಾಲೆಯ ಜಾಗವನ್ನು ಶಾಲೆಯ ಹೆಸರಿಗೇ ಮಾಡಬೇಕು ಎಂದು ಇತ್ತೀಚೆಗೆ ಆದೇಶಿಸಿದೆ. ಹೀಗಿದ್ದರೂ, ಶಾಲಾ ಮಂಡಳಿಯ ತೀವ್ರ ವಿರೋಧದ ನಡುವೆಯೂ ನಗರಸಭೆಯು ಅಕ್ರಮವಾಗಿ ಶಾಲಾ ಕಂಪೌಂಡ್ ಒಳಗಡೆ ಬಸ್ ಸ್ಟಾಪ್ ನಿರ್ಮಿಸುತ್ತಿರುವುದು ಅಕ್ಷಮ್ಯ ಎಂದು ಮನವಿಯಲ್ಲಿ ದೂರಲಾಗಿತ್ತು.ಸಮಸ್ಯೆಯ ಗಂಭೀರತೆಯನ್ನು ಅರಿತ ಜಿಲ್ಲಾಧಿಕಾರಿಗಳು ತಕ್ಷಣವೇ ಪೌರಾಯುಕ್ತರಿಗೆ ಕರೆ ಮಾಡಿದ್ದಾರೆ. ಶಾಲೆಯ ವಠಾರದಲ್ಲಿ ಹಾಗೂ ಫುಟ್‌ಪಾತ್ ಮೇಲೆ ನಿರ್ಮಿಸಲಾಗುತ್ತಿರುವ ಬಸ್ ನಿಲ್ದಾಣದ ಕಾಮಗಾರಿಯನ್ನು ಈ ಕೂಡಲೇ ಸ್ಥಗಿತಗೊಳಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದರು. ಜಿಲ್ಲಾಧಿಕಾರಿ ಈ ತಕ್ಷಣದ ಕ್ರಮದಿಂದ ಶಾಲೆಯ ಆಸ್ತಿ ಕಬಳಿಕೆಯಾಗುವ ಭೀತಿ ದೂರವಾಗಿದ್ದು, ಪೋಷಕರು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.ಈ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ವಕೀಲರಾದ ಮಹೇಶ್ ಹರಿಕಂತ್ರ ಹಾಗೂ ರೂಪೇಶ್ ನಾಯ್ಕ್ ಮತ್ತು ಶಾಲಾ ಮಕ್ಕಳ ಪಾಲಕರಿಗೆ ಬಾಯಿ ಕುವರಬಾಯಿ ಹಿತ ರಕ್ಷಣಾ ಸಮಿತಿಯ ಪ್ರಸಾದ್ ಕಾಮತ್ ಜಿಲ್ಲಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.ಈ ಸಂದರ್ಭ ಸಮಿತಿಯ ಪ್ರಮುಖರಾದ ತಿಮ್ಮಪ್ಪ ಗೌಡ, ದಿಲೀಪ್ ಮೆಹತಾ, ಮಂಜುನಾಥ ಕಳಕೇರಿ, ಮಂಜುನಾಥ ರಾವುತ್ ಸೇರಿದಂತೆ ಇತರರಿದ್ದರು.ಜಿಲ್ಲಾಧಿಕಾರಿಗಳು ಸದ್ಯ ಶಾಲಾ ಆವರಣದ ಬಳಿ ನಡೆಯುತ್ತಿರುವ ಬಸ್ ಸ್ಟಾಪ್ ಕಾಮಗಾರಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಕಾನೂನು ರೀತಿಯಲ್ಲಿ ಮತ್ತೊಮ್ಮೆ ಪರಿಶೀಲಿಸಿ ಕಾಮಗಾರಿಯನ್ನು ಮುಂದುವರೆಸುವ ಅಥವಾ ರದ್ದುಗೊಳಿಸುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ಜಗದೀಶ ಹುಲಿಗೆಜ್ಜಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಮಾಪುರ ಗ್ರಾಮ ಪಂಚಾಯಿತಿ ಮೇಲೆ ಲೋಕಾಯುಕ್ತ ದಾಳಿ
ಮತದಾರರ ಸಂವಿಧಾನಬದ್ಧ ಹಕ್ಕು ರಕ್ಷಣೆಗೆ ಶ್ರಮಿಸಿ: ಮಿಥುನ್ ಪಾಟೀಲ