ಹಾವೇರಿ: 2025-26ನೇ ಸಾಲಿನ ಮುಂಗಾರು ಹಂಗಾಮಿನ ಮುಂಗಾರು ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಬೆಲೆ ವ್ಯತ್ಯಾಸ ಪಾವತಿ ಯೋಜನೆಯಡಿ, ಹಾವೇರಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರಾರಂಭಿಸಲಾಗಿರುವ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಯೋಜನೆಯಡಿಯಲ್ಲಿ ಮೆಕ್ಕೆಜೋಳ ಉತ್ಪನ್ನಗಳನ್ನು ಪ್ರಚಲಿತ ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಾಲ್‌ಗೆ 1,900 ರು.ಗಳ ದರದಲ್ಲಿ ವಹಿವಾಟು ಆಗುತ್ತಿರುವುದನ್ನು ಪರಿಗಣಿಸಿ, ಮಾರುಕಟ್ಟೆ ಮಧ್ಯಪ್ರವೇಶ ದರ ಪ್ರತಿ ಕ್ವಿಂಟಾಲ್ ಗರಿಷ್ಠ 2,150 ರು.ಗಳನ್ನು ನಿಗದಿಪಡಿಸಿದೆ. ಅಂದರೆ ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಲ್‌ಗೆ 1,900 ರು. ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಮಾರಾಟವಾದರೆ ಪ್ರತಿ ಕ್ವಿಂಟಲ್‌ಗೆ ಗರಿಷ್ಟ 250 ರು. ರಂತೆ ಪಾವತಿಸಲಾಗುವುದು. ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಲ್‌ಗೆ 1,950 ರು.ಗಳಂತೆ ಮಾರಾಟವಾದಲ್ಲಿ ವ್ಯತ್ಯಾಸದ ಮೊತ್ತ 200 ರು.ರಂತೆ ಪ್ರತಿ ಕ್ವಿಂಟಾಲ್‌ಗೆ ಪಾವತಿಸಲಾಗುವುದು. ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಲ್‌ಗೆ 2,000 ರು. ಗಳಂತೆ ಮಾರಾಟವಾದಲ್ಲಿ ವ್ಯತ್ಯಾಸದ ಮೊತ್ತ 150 ರು.ರಂತೆ ಪ್ರತಿ ಕ್ವಿಂಟಲ್‌ಗೆ ಪಾವತಿಸಲಾಗುವುದು. ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಾಲ್‌ಗೆ 2,100 ರು. ಗಳಂತೆ ಮಾರಾಟವಾದಲ್ಲಿ ವ್ಯತ್ಯಾಸದ ಮೊತ್ತ 50ರು. ರಂತೆ ಪ್ರತಿ ಕ್ವಿಂಟಲ್‌ಗೆ ಪಾವತಿಸಲಾಗುವುದು. ಮಾರುಕಟ್ಟೆ ಧಾರಣೆಯು ಪ್ರತಿ ಕ್ವಿಂಟಲ್‌ಗೆ 2,150 ರು. ಅಥವಾ ಅದಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟವಾದಲ್ಲಿ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬುವುದನ್ನು ರೈತರಿಗೆ ಮನದಟ್ಟು ಮಾಡಿಕೊಟ್ಟು ಈ ಯೋಜನೆ ಅಡಿ ಪ್ರತಿ ಎಕರಿಗೆ 12 ಕ್ವಿಂಟಲ್ ನಂತೆ ಫ್ರೂಟ್ ತಂತ್ರಾಂಶದ ಪ್ರಕಾರ ರೈತರು ಹೊಂದಿರುವ ಜಮೀನುಗಳ ವಿಸ್ತಾರಕ್ಕೆ ಅನುಗುಣವಾಗಿ ಪ್ರತಿ ರೈತರಿಂದ 50 ಕ್ವಿಂಟಲ್ ಮಿತಿಗೊಳಿಸಿ ವ್ಯತ್ಯಾಸದ ಮೊತ್ತವನ್ನು ಪಾವತಿಸಲಾಗುವುದು ಜಿಲ್ಲೆಯ ಎಲ್ಲ 9 ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತೆರೆಯಲಾಗಿದೆ. ನಂತರ ರೈತರ ಖಾತೆಗೆ ನೇರ ನಗದು ವರ್ಗಾವಣೆ ಸೌಲಭ್ಯದ ಮೂಲಕ ಹಣ ಜಮೆಯಾಗಲಿದೆ ರೈತರು ಇದರ ಸದುಪಯೋಗವನ್ನು ಪಡಿಸಿಕೊಳ್ಳುವಂತೆ ಸೂಚಿಸಿದರು.