ಕೋಲಾರದಲ್ಲಿ ನಗರ ಸಾರಿಗೆ ಸೇವೆಗೆ ಸೂಚನೆ

KannadaprabhaNewsNetwork |  
Published : Jun 17, 2025, 12:48 AM ISTUpdated : Jun 17, 2025, 12:49 AM IST
೧೬ಕೆಎಲ್‌ಆರ್-೬ಕೋಲಾರದ ಜಿಲ್ಲಾಡಳಿತ ಕಚೇರಿಯಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಡಾ.ಎಂ.ಆರ್.ರವಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ನಗರ ಹೊರವಲಯದ ಗಾರ್ಮೆಂಟ್ಸ್‌ಗಳಿಗೆ ಮಹಿಳೆಯರು ದಿನನಿತ್ಯ ಸಾರಿಗೆ ಸಂರ್ಪಕವಿಲ್ಲದೆ ಖಾಸಗಿ ಆಟೋ ಮುಂತಾದ ವಾಹನಗಳಲ್ಲಿ ತೆರಳುತ್ತಿದ್ದು ತೊಂದರೆಗೆ ಒಳಗಾಗಿದ್ದಾರೆ. ಇದರೊಂದಿಗೆ ಸೇವಾ ರಸ್ತೆಗಳಲ್ಲಿನ ಗ್ರಾಮಗಳಿಗೆ ಸಮರ್ಪಕವಾದ ಸಾರಿಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೋಲಾರಕೋಲಾರದ ಜನಸಂಖ್ಯೆ ಹಾಗೂ ನಗರವು ದಿನೇ ದಿನೇ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ನಗರ ಸಾರಿಗೆ ಅವಶ್ಯವಿದ್ದರೂ ಸಾರ್ವಜನಿಕರಿಗೆ ಏಕೆ ಸಾರಿಗೆ ಸೇವೆ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕೆ.ಎಸ್.ಆರ್.ಟಿ. ವಿಭಾಗೀಯ ನಿಯಂತ್ರಣಾಧಿಕಾರಿಯನ್ನು ಪ್ರಶ್ನಿಸಿದರು.

ನಗರದ ಜಿಲ್ಲಾ ಆಡಳಿತ ಕಚೇರಿಯಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರಕ್ಕೆ ೩-೪ ನಗರಸಾರಿಗೆ ಬಸ್‌ಗಳನ್ನು ನಿಯೋಜಿಸಿ ಮುಂದಿನ ಕೆಡಿಪಿ ಸಭೆಯಲ್ಲಿ ಜಿಲ್ಲಾ ಸಚಿವರಿಂದ ಸಮ್ಮತಿ ಪಡೆಯುವಂತೆ ಸೂಚಿಸಿದರು.

ಆಟೋಗಳ ಅವಲಂಬನೆ

ನಗರ ಹೊರವಲಯದ ಗಾರ್ಮೆಂಟ್ಸ್‌ಗಳಿಗೆ ಮಹಿಳೆಯರು ದಿನನಿತ್ಯ ಸಾರಿಗೆ ಸಂರ್ಪಕವಿಲ್ಲದೆ ಖಾಸಗಿ ಆಟೋ ಮುಂತಾದ ವಾಹನಗಳಲ್ಲಿ ತೆರಳುತ್ತಿದ್ದು ತೊಂದರೆಗೆ ಒಳಗಾಗಿದ್ದಾರೆ. ಇದರೊಂದಿಗೆ ಸೇವಾ ರಸ್ತೆಗಳಲ್ಲಿನ ಗ್ರಾಮಗಳಿಗೆ ಸಮರ್ಪಕವಾದ ಸಾರಿಗೆ ಸೌಲಭ್ಯಗಳು ಇಲ್ಲದಿರುವ ಬಗ್ಗೆ ಕೇಳಿ ಬಂದಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದರು.ನಗರದಲ್ಲಿ ಶಾಲಾ ಕಾಲೇಜುಗಳು ಪ್ರಾರಂಭವಾಗಿವೆ. ಖಾಸಗಿ ವಾಹನಗಳ ಸಂಚಾರದ ಸಂಖ್ಯೆ ಹೆಚ್ಚಾಳವಾಗಿದೆ. ಆಟೋ, ಬಸ್, ಟೆಂಪೋ ಮುಂತಾದವುಗಳಲ್ಲಿ ನಿಗದಗಿಂತ ಹೆಚ್ಚು ಜನರನ್ನು ತುಂಬುತ್ತಿದ್ದಾರೆ ಎಂಬುದಾಗಿ ಮಾಧ್ಯಮಗಳು ಪ್ರಕಟಿಸುತ್ತಿವೆ. ಈ ಸಂಬಂಧವಾಗಿ ಸಂಚಾರ ಪೊಲೀಸ್ ಇಲಾಖೆ, ಆರ್.ಟಿ.ಓ. ಅವರುಗಳು ಏನು ಕ್ರಮ ಕೈಗೊಂಡಿದ್ದೀರಾ ಎಂದು ಪ್ರಶ್ನಿಸಿದರು.

ಆರ್‌ಟಿಒಗಳಿಗೆ ಸೂಚನೆ

ಸಂಚಾರಕ್ಕೆ ಯೋಗ್ಯವಾದ ಬಸ್‌ಗಳು, ಆಟೋಗಳು ಸಂಚಾರಿಸುತ್ತಿದೆ ಇವುಗಳ ಎಫ್.ಸಿ.ಗಳು ಇಲ್ಲದಿದ್ದರೂ ಸಂಚಾರಿಸುತ್ತಿವೆ. ನಾಳೆ ಏನಾದರೂ ಅನಾಹುತಗಳಿಗೆ ಎಡೆ ಮಾಡಿಕೊಟ್ಟರೇ ಉಂಟಾಗುವ ಸಾವು ನೋವುಗಳ ಬಗ್ಗೆ ನೀವೇ ಜವಾಬ್ದಾರರಾಗಬೇಕಾಗುತ್ತದೆ ಎಂಬ ಪ್ರಜ್ಞೆ ಇರಲಿ. ಎಲ್ಲಾ ವಾಹನಗಳಿಗೂ ಎಫ್.ಸಿ ಹಾಗೂ ವಿಮೆ ಕಡ್ಡಾಯವಾಗಿರಬೇಕು ಎಂದು ತಾಕೀತು ಮಾಡಿದರು.ಗ್ರಾಪಂ, ಜಿಪಂ ವ್ಯಾಪ್ತಿಗೆ ಬರಲಿರುವ ರಸ್ತೆಗಳ ಅಭಿವೃದ್ದಿ ಅನುದಾನಗಳನ್ನು ಸದ್ಬಳಿಸಿಕೊಳ್ಳಬೇಕು, ಪಿ.ಡಬ್ಲೂಡಿ, ಆರ್.ಟಿ.ಓ. ಪೊಲೀಸ್. ಸೇರಿದಂತೆ ಹೆದ್ದಾರಿ ಪ್ರಾಧಿಕಾರವು ರಸ್ತೆ ಸುರಕ್ಷತೆಯ ನಿಯಮ ಪಾಲಿಸುವ ಮುಂಜಾಗೃತೆ ಮೂಡಿಸಿ ಅಪಘಾತ ನಿಯಂತ್ರಿಸಬೇಕು. ಟೋಲ್ ಪ್ಲಾಜಾ ಸೇರಿದಂತೆ ಹೆದ್ದಾರಿಯ ವೃತ್ತಗಳಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸ ಬೇಕು ದಿನದ ೨೪ ಗಂಟೆಗಳ ಕಾಲ ರಸ್ತೆ ಸಂಚಾರಗಳ ನಿಯಂತ್ರಿಸಬೇಕು, ಅತಿವೇಗದ ವಾಹನಗಳ ಬಗ್ಗೆ ವೇಗವನ್ನು ಆಳೆಯುವಂತ ಅಧುನಿಕ ಯಂತ್ರಗಳ(ಸ್ಪೀಡೋ ಮೀಟರ್) ಮೂಲಕ ಪರಿಶೀಲಿಸಬೇಕ ಎಂದರು.

ಗೃಹ ರಕ್ಷಕ ದಳ ಬಳಸಿಕೊಳ್ಳಿ

ಪೊಲೀಸ್ ಕೊರತೆ ಉಂಟಾದಲ್ಲಿ ಗೃಹ ರಕ್ಷಕ ದಳದವರನ್ನು ಬಳಸಿಕೊಳ್ಳಬಹುದಾಗಿದೆ. ನಿಯಮ ಮೀರಿದ ವೇಗದ ವಾಹನಗಳಿಗೆ ಸಿ.ಸಿ. ಕ್ಯಾಮೆರಾದ ಮೂಲಕ ನಂಬರ್‌ಗಳನ್ನು ಪತ್ತೆ ಹಚ್ಚಿ ಅವರಿಗೆ ಎಸ್.ಎಂ.ಎಸ್. ಮೂಲಕ ಮಾಹಿತಿ ನೀಡಿ ದಂಡವನ್ನು ವಿಧಿಸಬೇಕು. ೨೦೨೫ ನೇ ಸಾಲಿನಲ್ಲಿ ಈವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ರಾಜ್ಯದ ರಸ್ತೆಗಳಲ್ಲಿ ಒಟ್ಟು ೪೫೫ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದೆ, ಕೈಗಾರಿಕೆಗಳು ಬರುತ್ತಿರುವ ಹಿನ್ನಲೆಯಲ್ಲಿ ನರಸಾಪುರ, ವೇಮಗಲ್ ಸಮೀಪದಲ್ಲಿ ಅಪಘಾತಗಳು ಹೆಚ್ಚುತ್ತಿದ್ದು ರಸ್ತೆಗಳು ದುರಸ್ಥಿ ಮಾಡ ಬೇಕಾಗಿರುವ ಕಡೆ ತ್ವರಿತವಾಗಿ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಖಾಸಗಿ ಶಾಲಾ ಕಾಲೇಜು ಆಡಳಿತ ಮಂಡಳಿಯವರ ಸಭೆ ಕರೆದು ವಾಹನಗಳಿಗೆ ಎಫ್.ಸಿ. ಹಾಗೂ ನಿಗಧಿತ ಸಂಖ್ಯೆಯ ವಿದ್ಯಾರ್ಥಿಗಳನ್ನು ಮಾತ್ರ ವಾಹನಗಳಲ್ಲಿ ಅವಕಾಶ ಕಲ್ಪಿಸುವಂತಾಗಬೇಕೆಂಬ ಮಾರ್ಗದರ್ಶನ ನೀಡ ಬೇಕೆಂದು ಹೇಳಿದರು. ಆರೋಗ್ಯಾಧಿಕಾರಿಗಳು ಅಪಘಾತ ಸಂಭಿವಿಸಿದ ಸುದ್ದಿ ಬಂದ ಕೂಡಲೇ ಆ್ಯಂಬುಲೆನ್ಸ್ ಕಳುಹಿಸುವ ಜೊತೆಗೆ ವೈದ್ಯರು ಪ್ರಾಥಮಿಕ ಚಿಕಿತ್ಸೆಯ ಪರಿಕರಗಳೊಂದಿಗೆ ಕೂಡಲೇ ಸೇವೆ ಒದಗಿಸುವಂತಾಗ ಸಾವುಗಳು ಉಂಟಾದರೆ ತ್ವರಿತವಾಗಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವಗಳನ್ನು ವಿಲೇವಾರಿ ಮಾಡುವಂತಾಗಬೇಕೆಂದು ತಿಳಿಸಿದರು, ಸಭೆಯಲ್ಲಿ ಕೋಲಾರ ಎಸ್ಪಿ ನಿಖಿಲ್.ಬಿ, ಕೆ.ಜಿ.ಎಫ್ ಎಸ್ಪಿ. ಶಾಂತರಾಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ