ಹಿನ್ನೋಟ 2023- ಬೆಲ್ಲಕ್ಕಿಂತ ಬೇವು ಸವಿದಿದ್ದೇ ಹೆಚ್ಚು

KannadaprabhaNewsNetwork | Published : Dec 31, 2023 1:30 AM

ಸಾರಾಂಶ

ಬರದ ಭೀಕರತೆಯಿಂದ ಜಿಲ್ಲೆಯಲ್ಲಿ ಶೇ.90 ಬೆಲೆ ಹಾನಿಯಾಗಿದೆ. ಸುಮಾರು ₹1400 ಕೋಟಿ ಹಾನಿಯಾಗಿದ್ದರೂ ಸರ್ಕಾರದಿಂದ ಪರಿಹಾರವಾಗಿ ಕೊಡಬೇಕಾದ ಸುಮಾರು ₹220 ಕೋಟಿ ಪರಿಹಾರ ಬಾರದೇ ರೈತ ಸಮುದಾಯ ಈಗಲೂ ತತ್ತರಿಸುತ್ತಿದೆ.

ಸೋಮರಡ್ಡಿ ಅಳವಂಡಿಕೊಪ್ಪಳ: ಕಲುಷಿತ ನೀರು ಸೇವಿಸಿ ಸಾವುಗಳು, ಭೀಕರ ಬರದಿಂದ ತತ್ತರಿಸಿದ ರೈತ ಸಮುದಾಯ, ಬೆಲೆ ಏರಿಕೆ, ಬೆಲೆ ಕುಸಿತ ಸೇರಿ ಹತ್ತಾರು ಕಹಿ ಘಟನೆಗಳೊಂದಿಗೆ 2023 ವಿದಾಯ ಹೇಳಿದ್ದು, ಬೆಲ್ಲಕ್ಕಿಂತ ಬೇವಿನ ಕಹಿ ಹೆಚ್ಚು ಎನ್ನುವ ವರ್ಷವಿದು.2023 ಜಿಲ್ಲೆಯ ಪಾಲಿಗೆ ಅಂಥ ಸಿಹಿಯನ್ನೇನೂ ನೀಡಲಿಲ್ಲ. ಬದಲಾಗಿ ಬೇವಿನ ಕಹಿಯನ್ನು ನೀಡಿದ್ದೇ ಹೆಚ್ಚು ಎನ್ನುವುದಕ್ಕೆ ವರ್ಷದುದ್ದಕ್ಕೂ ನಡೆದ ಘಟನೆಗಳೇ ಸಾಕ್ಷಿ. ಜಿಲ್ಲೆಯಲ್ಲಿ ಪ್ರಸಕ್ತ ಬರ ಭೀಕರ, ಅದರಲ್ಲೂ ಹಸಿ ಬರ ಕಾಡಿದ್ದರಿಂದ ರೈತರು ಬಿತ್ತನೆ ಮಾಡಿ, ಹಸಿ ಸಾಲದ್ದಕ್ಕೆ ಫಲ ನೀಡದ ಬೆಳೆಯಿಂದ ಕೈ ಸುಟ್ಟುಕೊಳ್ಳಬೇಕಾಯಿತು. ನಾಲ್ಕಾರು ರೈತರು ಆತ್ಮಹತ್ಯೆಯ ಹಾದಿ ತುಳಿದರು.ಬರದ ಭೀಕರತೆಯಿಂದ ಜಿಲ್ಲೆಯಲ್ಲಿ ಶೇ.90 ಬೆಲೆ ಹಾನಿಯಾಗಿದೆ. ಸುಮಾರು ₹1400 ಕೋಟಿ ಹಾನಿಯಾಗಿದ್ದರೂ ಸರ್ಕಾರದಿಂದ ಪರಿಹಾರವಾಗಿ ಕೊಡಬೇಕಾದ ಸುಮಾರು ₹220 ಕೋಟಿ ಪರಿಹಾರ ಬಾರದೇ ರೈತ ಸಮುದಾಯ ಈಗಲೂ ತತ್ತರಿಸುತ್ತಿದೆ.ಗವಿಸಿದ್ಧೇಶ್ವರ ಜಾತ್ರೆಯೊಂದಿಗೆ ಆರಂಭವಾದ ವರ್ಷ ಕೋವಿಡ್ ಆತಂಕವಿಲ್ಲದೆಯೇ ಗವಿಸಿದ್ಧೇಶ್ವರ ಜಾತ್ರೆ ಸಾಂಘವಾಗಿ ಸಾಗಿತು. ಈ ವರ್ಷ ಸುಮಾರು 8 ಲಕ್ಷಕ್ಕೂ ಅಧಿಕ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗುವ ಮೂಲಕ ಕಳೆದ ಎರಡು ಮೂರು ವರ್ಷಗಳ ಕೋವಿಡ್ ಆತಂಕದಲ್ಲಿ ಮಂಕಾಗಿದ್ದ ಜಾತ್ರೆಗೆ ಮೆರುಗು ನೀಡಿದ್ದು ಮಾತ್ರ ಸಂತಸದ ಸಂಗತಿ.ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ಸುಮಾರು ಐವರು ಕಲುಷಿತ ನೀರು ಸೇವಿಸಿ ಪ್ರಾಣ ತೆತ್ತಿದ್ದಾರೆ. ಇದು ರಾಜ್ಯಮಟ್ಟದ ಸುದ್ದಿಯಾಯಿತು ಮತ್ತು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಘಟನೆಯ ಕುರಿತು ಬೇಸರ ವ್ಯಕ್ತಪಡಿಸಿ, ಇನ್ನೊಮ್ಮೆ ಹೀಗಾದರೆ ಸಹಿಸಲ್ಲ. ಆಯಾ ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನೇ ಹೊಣೆ ಮಾಡುವುದಾಗಿ ಹೇಳಿದರು. ಆದರೆ, ಇದೆಲ್ಲವೂ ಆದ ಮೇಲೆ ಸತ್ತಿದ್ದು ಕಲುಷಿತ ನೀರು ಕುಡಿದು ಅಲ್ಲ ಎನ್ನುವ ಷರಾ ಬರೆಯುವುದರೊಂದಿಗೆ ಇಡೀ ಪ್ರಕರಣಕ್ಕೆ ಇತಿಶ್ರೀ ಹಾಡಲಾಯಿತು.ರೈತರ ಆತ್ಮಹತ್ಯೆ: ಜಿಲ್ಲೆಯಲ್ಲಿ 2023ರಲ್ಲಿಯೇ ಸುಮಾರು ನಾಲ್ಕಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದೆರಡು ತಿಂಗಳಲ್ಲಿಯೇ ಈ ಪ್ರಕರಣಗಳು ಹೆಚ್ಚಾಗುತ್ತಿವೆ. ಬರದ ಬವಣೆಯಿಂದ ರೈತ ಸಮುದಾಯ ತತ್ತರಿಸಿದ್ದು, ಸಾಂತ್ವನದ ಅಗತ್ಯವಿದೆ.ಕೊಪ್ಪಳ ವಿವಿ: ಕೊನೆಗೂ ಕೊಪ್ಪಳ ವಿವಿ ಪ್ರಾರಂಭವಾಗಿದೆ. ಆದರೆ, ಇದಕ್ಕೊಂದು ಸೂಕ್ತ ಜಾಗ ಜಿಲ್ಲಾ ಕೇಂದ್ರದಲ್ಲಿ ಇಲ್ಲದೆ ಇರುವುದರಿಂದ ಕುಕನೂರು ತಾಲೂಕು ತಳಕಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾರಂಭಿಸಲಾಗಿದೆ. ಸರ್ಕಾರದಿಂದ ಯಾವುದೇ ಮೂಲಭೂತ ಸೌಕರ್ಯ ಮತ್ತು ಅನುದಾನ ವಿವಿಗೆ ದೊರೆಯುತ್ತಲೇ ಇಲ್ಲ ಎನ್ನುವುದು ಮತ್ತೊಂದು ಕೊರಗು.ಅಂಜನಾದ್ರಿ: ಅಂಜನಾದ್ರಿಯಲ್ಲಿ ಹನುಮಾಲಾ ವಿಸರ್ಜನಾ ಕಾರ್ಯಕ್ರಮಕ್ಕೆ ನಿರೀಕ್ಷೆ ಮೀರಿ ಭಕ್ತರು ಹರಿದು ಬಂದಿದ್ದರು. ಜಿಲ್ಲಾಡಳಿತ ಮುತುವರ್ಜಿ ವಹಿಸಿ ಬಂದ ಭಕ್ತರಿಗೆಲ್ಲ ತೊಂದರೆಯಾಗದಂತೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿ, ಪ್ರಶಂಸೆಗೆ ಪಾತ್ರವಾಯಿತು. ಆದರೆ, ಅಂಜನಾದ್ರಿ ಅಭಿವೃದ್ಧಿ ಮಾತ್ರ ನನೆಗುದಿಗೆ ಬಿದ್ದಿದೆ. ಹಿಂದಿನ ಸರ್ಕಾರ ಘೋಷಣೆ ಮಾಡಿದ್ದು, ಅಡಿಗಲ್ಲು ಹಾಕಿದ್ದನ್ನು ಈ ಸರ್ಕಾರ ಇದುವರೆಗೂ ಕೈಗೆತ್ತಿಕೊಂಡಿಲ್ಲ.ಕನಕಗಿರಿ ಶಾಸಕ ಶಿವರಾಜ ತಂಗಡಗಿ ಮೂರನೇ ಬಾರಿಗೆ ಸಚಿವರಾದರು. ವರ್ಷದ ಕೊನೆಯಲ್ಲಿ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಸಂಪುಟ ದರ್ಜೆಯಲ್ಲಿ ಸಿಎಂ ಆರ್ಥಿಕ ಸಲಹೆಗಾರರಾಗಿ ನೇಮಕವಾದರು. ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಪ್ರತಿಪಕ್ಷದ ಮುಖ್ಯಸಚೇತಕರರಾಗಿ ಆಯ್ಕೆಯಾಗಿರುವುದು ಜಿಲ್ಲೆಯ ರಾಜಕೀಯ ಬೆಳವಣಿಗೆಯಲ್ಲಿ ಆಗಿರುವ ಹೊಸ ಮೈಲುಗಲ್ಲುಗಳು. ಗಂಗಾವತಿಯ ಮಾಜಿ ಸಚಿವ ಶ್ರೀರಂಗದೇವರಾಯಲು ಮತ್ತು ಕಲಾವಿದ ಬಾಬಣ್ಣ ಕಲ್ಮನಿ ನಿಧನರಾಗಿದ್ದಾರೆ. ವಿವಾದವೊಂದರಲ್ಲಿ ನ್ಯಾಯಲಯದ ಮೆಟ್ಟಿಲು ಏರಿದ್ದಾರೆ ಎನ್ನುವ ಕಾರಣಕ್ಕಾಗಿ ತಮ್ಮ ಸಮುದಾಯವರಿಂದ ಬಹಿಷ್ಕಾರಕ್ಕೆತುತ್ತಾಗಿದ್ದ ಸುಡುಗಾಡು ಸಿದ್ದರ ಕುಟುಂಬಗಳ ಕೊರಗನ್ನು ಕನ್ನಡಪ್ರಭ ವರದಿ ಮಾಡುತ್ತಿದ್ದಂತೆ ಸರ್ಕಾರ ಎಚ್ಚೆತ್ತು ಅವರಿಗೆ ಬಹಿಷ್ಕಾರದಿಂದ ಮುಕ್ತಿ ನೀಡಲಾಯಿತು.ತನ್ನ ಜೀವನಕ್ಕೆಂದು ಇದ್ದ ಎರಡು ಎಕರೆ ಭೂಮಿಯನ್ನು ತಮ್ಮೂರ ಶಾಲೆಗೆ ದಾನ ಮಾಡಿದ್ದ ಕುಣಿಕೇರಿ ಗ್ರಾಮದ ದಾನ ಚಿಂತಾಮಣಿ ಹುಚ್ಚಮ್ಮಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು ವಿಶೇಷ. ಇವರ ಜೊತೆಗೆ ಜಿಲ್ಲೆಯ ಇನ್ನಿಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಜಂಟಿಯಾಗಿ ಆಯ್ಕೆ ಮಾಡಿದ ಕರ್ನಾಟಕದ ಏಳು ಅದ್ಭುತಗಳಲ್ಲಿ ಕೊಪ್ಪಳ ಜಿಲ್ಲೆಯ ಹಿರೇಬೆಣಕಲ್ ಆಯ್ಕೆಯಾಗಿರುವುದು ವಿಶೇಷ. ಮೋರೇರ ತಟ್ಟೆಗಳ ವಿಶೇಷತೆಯುಳ್ಳ ಹಿರೇಬೆಣಕಲ್ ಈಗ ಕರ್ನಾಟಕದ ಏಳು ಅದ್ಭುತಗಳಲ್ಲೊಂದು.ಬಹುವರ್ಷಗಳ ಪ್ರಯತ್ನದ ಫಲವಾಗಿ ಕೊಪ್ಪಳ ಜಿಲ್ಲೆಗೆ ಕೃಷ್ಣಾ ನೀರು ಹರಿಯಲಾಯಿತು. ಯಲಬುರ್ಗಾ ತಾಲೂಕಿಗೆ ನೀರು ಹರಿಸುವ ಮೂಲಕ ಸಂಭ್ರಮಿಸಲಾಯಿತು. ಆದರೆ, ನಂತರ ಬಂದಿರುವ ನೀರು ಬಳಕೆಯ ಪ್ರಯತ್ನ ನಿಧಾನಗತಿಯಲ್ಲಿದೆ.

Share this article