
ಕನ್ನಡ ಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇತ್ತೀಚಿಗೆ ಜಿಲ್ಲಾಸ್ಪತ್ರೆ ಡೀನ್ ಅವರೊಂದಿಗೆ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಚರ್ಚಿಸಲಾದ ವಿಷಯಗಳ ಕುರಿತ ಪ್ರಗತಿ ಹಾಗೂ ಅನುಷ್ಠಾನ ಕುರಿತು ಮಾಹಿತಿ ಪಡೆಯುವ ನಿಟ್ಟಿನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ನೇತೃತ್ವದಲ್ಲಿ ಪತ್ರಕರ್ತರು ಜಿಲ್ಲಾಸ್ಪತ್ರೆಗೆ ತೆರಳಿ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ, ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದರು.
ಈ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಡಾ. ಲೋಕೇಶ್, ಪ್ರಸ್ತುತ ಜಿಲ್ಲಾಸ್ಪತ್ರೆ ವೇಗದಲ್ಲಿ ಅಭಿವೃದ್ಧಿ ಕಾಣುತ್ತಿದೆ. ವೈದ್ಯರ ಕೊರತೆಯಿದ್ದರೂ ಇರುವ ವೈದ್ಯರಿಂದ ರೋಗಿಗಳಿಗೆ ಅಗತ್ಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ರೇಡಿಯೋಲಾಜಿಸ್ಟ್ ಹೊರತುಪಡಿಸಿ ಬೇರೆಲ್ಲ ವಿಭಾಗದಲ್ಲೂ ವೈದ್ಯರಿದ್ದು, ಹುದ್ದೆ ಭರ್ತಿಗೆ ಆಹ್ವಾನಿಸಲಾಗಿದೆ. ಆದರೆ, ಕೊಡಗಿಗೆ ನಿಯೋಜನೆಗಳು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.ಸೂಪರ್ ಸ್ಪೆಷಾಲಿಟಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ವೈದ್ಯಕೀಯ ಕಾಲೇಜು ಸುಪರ್ದಿಯಲ್ಲಿರುವ ಜ. ತಿಮ್ಮಯ್ಯ ವೃತ್ತದ ಬಳಿ ಇರುವ ಐಬಿ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾಪವಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾದರೆ ಸೇವೆ ಮತ್ತಷ್ಟು ಪರಿಣಾಮಕಾರಿಯಾಗಿ ಜನರಿಗೆ ದೊರೆಯಲಿದೆ ಎಂದು ಹೇಳಿದರು.
ಅರ್ಥೋಪೆಡಿಕ್ ಸಮಸ್ಯೆಗೆ ರೋಬಾಟಿಕ್ ಸರ್ಜರಿಗೆ ಪೂರಕ ಯಂತ್ರೋಪಕರಣ ಖರೀದಿಗೆ ಟೆಂಡರ್ ಆಹ್ವಾನಿಸಲಾಗಿದೆ. ಈಗಾಗಲೇ ಕಿದ್ವಾಯಿ, ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ರೋಬಾಟಿಕ್ ಶಸ್ತ್ರಚಿಕಿತ್ಸೆ ವ್ಯವಸ್ಥೆ ಇದೆ. ಮೆಮೋಗ್ರಾಫಿ ಚಿಕಿತ್ಸೆ, ಹೈಟೆಕ್ ಆ್ಯಂಬ್ಯುಲೆನ್ಸ್, ಡೇ ಕೇರ್ ಕಿಮೋ ಥೆರಪಿ ಆರಂಭಕ್ಕೂ ಕ್ರಮವಹಿಸಲಾಗುವುದು ಎಂದರು.
ಗುಣಮಟ್ಟದ ಸೇವೆ:
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಂಜುಂಡಯ್ಯ ಮಾತನಾಡಿ, ಸ್ಕ್ಯಾನಿಂಗ್ ಸೇವೆಗಳನ್ನು ಒಂದೇ ಕಟ್ಟಡದಲ್ಲಿ ತರಲಾಗುವುದು. ಒಪಿಡಿ ಕೌಂಟರ್‌ಗಳನ್ನು ಹೆಚ್ಚಿಸಲಾಗುವುದು. ಹೆಲ್ಪ್ ಡೆಸ್ಕ್ ಸ್ಥಾಪಿಸಲಾಗುವುದು. ಐಟಿಡಿಪಿ ಇಲಾಖೆಯಿಂದ 2 ಸಿಬ್ಬಂದಿ ನಿಯೋಜನೆಯಾಗಲಿದ್ದು, ಅವರಿಂದಲೂ ರೋಗಿಗಳಿಗೆ ಸಹಾಯ ದೊರೆಯಲಿದೆ ಎಂದು ವಿವರಿಸಿದರು.
ಮಹಿಳೆಯರಲ್ಲಿ ಹೆಚ್ಚುತ್ತಿರುವ ಗರ್ಭಕಂಠದ ಕ್ಯಾನ್ಸರ್ ತಡೆಗೆ, 14 ರಿಂದ 16 ವರ್ಷ ವಯಸ್ಸಿನ ಬಾಲಕಿಯರಿಗೆ ಕೇಂದ್ರ ಸರ್ಕಾರದ ವತಿಯಿಂದ ಹೆಚ್.ಪಿ.ವಿ ಲಸಿಕೆಯನ್ನು ನೀಡುವ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲೆಯಲ್ಲಿ ಇದೇ ಸಂದರ್ಭ ಜಿಲ್ಲಾಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭ ಸ್ಥಾನೀಯ ವೈದ್ಯಾಧಿಕಾರಿಗಳಾದ ಡಾ. ಧನಂಜಯ್, ಡಾ. ಅಭಿನಂದನ್ ಹಾಗೂ ಸಾಮಾನ್ಯ ವೈದ್ಯ ಶಾಸ್ತ್ರ ವಿಭಾಗದ ವೈದ್ಯ ಡಾ. ಪವನ್ ಹಾಜರಿದ್ದರು.
ಸಂಪರ್ಕ ಸಂಖ್ಯೆ: ತುರ್ತು ವೈದ್ಯಕೀಯ ಸೇವೆ ಹಾಗೂ ಆಸ್ಪತ್ರೆಯಲ್ಲಿ ಸಮಸ್ಯೆಗಳು ಉಂಟಾದಲ್ಲಿ ವೈದ್ಯಾಧಿಕಾರಿಗಳನ್ನು ಸಂಪರ್ಕಿಸುವಂತೆ ಡಾ. ಲೋಕೇಶ್ ಮನವಿ ಮಾಡಿದರು.
ಆರ್‌ಎಂಓ ಡಾ. ಧನಂಜಯ್ 9945607166, ಡಾ. ಅಭಿನಂದನ್ 9844790767, ವೈದ್ಯಕೀಯ ಅಧೀಕ್ಷಕ ಡಾ. ಸೋಮಶೇಖರ್ 9448984095, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಂಜುಂಡಯ್ಯ 9482111211 ಸಂಖ್ಯೆಯನ್ನು ಸಂಪರ್ಕಿಸಬಹುದು.