ಕನ್ನಡಪ್ರಭ ವಾರ್ತೆ ಮೈಸೂರು
ಕೆ.ಆರ್.ಎಸ್. ನಲ್ಲಿ ನೀರು ಕಡಿಮೆ ಆದಾಗಲೂ ಮೈಸೂರು ನಗರಕ್ಕೆ ನೀರು ಕೊರತೆ ಉಂಟಾಗದಂತೆ ಮಾಡಲು ಕೈಗೊಂಡಿರುವ ಹಳೇ ಉಂಡುವಾಡಿ ಕಾಮಗಾರಿ ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ.ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಶಾಸಕ ಜಿ.ಟಿ. ದೇವೇಗೌಡ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿ, ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಮಟ್ಟ 60 ಅಡಿಗೆ ಕುಸಿದಾಗಲೂ ಹಿನ್ನೀರು ಬಳಿಯ ಹಳೇ ಉಂಡುವಾಡಿಯಿಂದ ನೀರೆತ್ತುವ ಈ ಯೋಜನೆಯಿಂದ 150 ಎಂ.ಎಲ್.ಡಿ ನೀರು ಪೂರೈಕೆ ಆಗಲಿದೆ. ಈ ಯೋಜನೆಯಡಿ ವಿಜಯನಗರದ ಕೇಂದ್ರ ಬೃಹತ್‌ಜಲಸಂಗ್ರಹಗಾರಕ್ಕೆ ಸಂಪರ್ಕ ಕಲ್ಪಿಸಿ ಮೈಸೂರು ನಗರ ಪಾಲಿಕೆ ವ್ಯಾಪ್ತಿಯ ಭಾಗಶಃ ಚಾಮರಾಜ, ಕೃಷ್ಣರಾಜ ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಯಾದವಗಿರಿಯ ಎಚ್.ಎಲ್.ಆರ್‌ನಿಂದ ಭಾಗಶಃ ಚಾಮರಾಜ, ಕೃಷ್ಣರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಿಗೆ ನೀರನ್ನು ಪೂರೈಸಲಾಗುವುದು ಎಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ವಿಜಯನಗರ 3ನೇ ಮತ್ತು 4ನೇ ಹಂತ, ಸುತ್ತಮುತ್ತಲಿನ ಪ್ರಾಧಿಕಾರದಿಂದ ಅನುಮೋದನೆಗೊಂಡಿರುವ ಖಾಸಗಿ ಬಡಾವಣೆಗಳ ವ್ಯಾಪ್ತಿಯ ಪ್ರದೇಶಕ್ಕೆ ನೀರನ್ನು ಒದಗಿಸಲಾಗುವುದು. ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ ಜೆಜೆಎಂ ಯೋಜನೆಯಡಿ ಕೈಗೊಂಡಿರುವ ಜಿಲ್ಲೆಯ ಹುಣಸೂರು ತಾಲೂಕಿನ ಬಾಚನಹಳ್ಳಿ ಮತ್ತು 276 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಓಯಜನೆಗೆ ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ಅನುಷ್ಠಾನಗೊಳಿಸುತ್ತಿರುವ ಹಳೇ ಉಂಡುವಾಡಿ ಯೋಜನೆಯಿಂದ ಶುದ್ಧೀಕರಿಸಿದ ನೀರನ್ನು ಒದಗಿಸಲಾಗುವುದು ಎಂದರು.ಹಳೇ ಉಂಡವಾಡಿ ಸಮೀಪ ಕೃಷ್ಣರಾಜ ಸಾಗರ ಜಲಾಶಯದ ಹಿನ್ನೀರಿನಲ್ಲಿ ಜಾಕ್ ವೆಲ್ ಜತೆಗೆ ಪಂಪ್ ಹೌಸ್, ಫಿಲ್ಲಿಂಗ್, ಬೇಸಿನ್ ಮತ್ತು ಭಾಗಶಃ ಡ್ರಾಟ್ ಕೆನಾಲ್ ಗೆ ಮಣ್ಣು ಅಗೆತದ ಕೆಲಸ ಪೂರ್ಣಗೊಂಡಿದ್ದು, ಜಾಕ್ ವೆಲ್ ಪಂಪ್ ಹೌಸ್, ಸ್ಟೀನಿಂಗ್ ವಾಲ್ನ ಕಾಮಗಾರಿ ಪೂರ್ಣಗೊಂಡಿದೆ ಎಂದು ಅವರು ವಿವರಿಸಿದರು.
ಹಳೇ ಉಂಡುವಾಡಿ ಬಳಿ 102 ಎಕರೆ ಜಮೀನಿದೆ. ಜಾಕ್ ವೆಲ್ ಹಾಕಿ ಜಲಾಶಯದಲ್ಲಿ 60 ಅಡಿ ನೀರಿದ್ದರೂ ಮೈಸೂರಿಗೆ ನೀರು ಪೂರೈಸಬಹುದು ಎಂದು ಸರ್ವೆ ಮಾಡಲಾಗಿತ್ತು. ಪ್ರಸ್ತುತ 150 ಎಂ.ಎಲ್.ಡಿ. ನೀರು ಪೂರೈಸುವ ಕಾಮಗಾರಿ ಹಮ್ಮಿಕೊಂಡಿದ್ದು, ಭವಿಷ್ಯದಲ್ಲಿ 900 ಎಂ.ಎಲ್.ಡಿಗೆ ವಿಸ್ತರಿಸಿಕೊಳ್ಳಬಹುದು. ಅಂತೆಯೇ ಬಿದರಗೂಡು ನೀರು ಪೂರೈಕೆ ಕೇಂದ್ರವನ್ನು 180 ಎಂ.ಎಲ್.ಡಿಗೆ ವಿಸ್ತರಿಸಿಕೊಳ್ಳಲು ಅವಕಾಶವಿದೆ. ಪ್ರಸ್ತುತ ಮೈಸೂರಿಗೆ ಒಟ್ಟಾರೆ 306 ಎಂ.ಎಲ್.ಡಿ ನೀರು ಪೂರೈಕೆ ಆಗುತ್ತಿದೆ. ಈ ವಿಸ್ತೃತ ಯೋಜನೆಗಳೂ ಸೇರಿದರೆ ಮೈಸೂರಿಗೆ 600 ಎಂ.ಎಲ್.ಡಿ ನೀರು ಪೂರೈಕೆ ಆಗಲಿದೆ ಎಂದರು.ಹಳೇ ಉಂಡುವಾಡಿಯ ಈ ಯೋಜನೆಯು ರಾಜ್ಯದ ಎರಡನೇ ದೊಡ್ಡ ಯೋಜನೆಯಾಗಿದೆ. ಮಳವಳ್ಳಿಯ ತೊರೆಕಾಡನೂರು ಯೋಜನೆ ಬಿಟ್ಟರೆ ಹಳೇ ಉಂಡುವಾಡಿ ಎರಡನೇ ದೊಡ್ಡ ಯೋಜನೆ. ಈ ಯೋಜನೆಗೆ 2014-15ರಲ್ಲಿ ಟೆಂಡರ್‌ಮಾಡಿದ್ದು ನಾವೆ ಎಂದರು.
ಶಾಸಕ ಜಿ.ಟಿ. ದೇವೇಗೌಡ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್, ನಗರ ಪಾಲಿಕೆ ಆಯುಕ್ತ ಶೇಖ್‌ತನ್ವೀರ್‌ಆಸಿಫ್, ಅಧೀಕ್ಷಕ ಎಂಜಿನಿಯರ್‌ಕೆ.ಜೆ. ಸಿಂಧು, ಇಇ ಆಸಿಫ್, ನಗರ ಕಾಂಗ್ರೆಸ್‌ಅಧ್ಯಕ್ಷ ಆರ್. ಮೂರ್ತಿ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ಮಾಜಿ ಮೇಯರ್ ಬಿ.ಎಲ್. ಬೈರಪ್ಪ, ನಗರ ಪಾಲಿಕೆ ಮಾಜಿ ಸದಸ್ಯರಾದ ಸೈಯದ್ ಅಸ್ರತ್, ಕೆ.ವಿ. ಮಲ್ಲೇಶ್ ಮೊದಲಾದವರು ಇದ್ದರು.