ಕನ್ನಡಪ್ರಭ ವಾರ್ತೆ ಸಾಲಿಗ್ರಾಮ
ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಸೋಮವಾರ ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಅಡಕವಾಗಿರುವ ಆರ್ಥಿಕವಾಗಿ ಹಿಂದುಳಿದಿರುವ ತಳ ಸಮುದಾಯದ ಉದ್ಯೋಗದ ಹಕ್ಕನ್ನು ಕಿತ್ತು ಕೊಳ್ಳುವ ಮೂಲಕ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿ ನಡೆ ಅನುಸರಿಸಿದೆ. ದೇಶದ 12 ಕೋಟಿ ಜನರು ಮನರೇಗಾ ಯೋಜನೆಯಡಿ ಉದ್ಯೋಗ ಪಡೆದು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇದರಲ್ಲಿ ಎಸ್ಸಿ ಸಮುದಾಯದ ಶೇ. 17 ಹಾಗೂ ಪ. ಪಂಗಡದ ಶೇ. 11ರಷ್ಟು ಮಂದಿ ಜೀವನ ಕಟ್ಟಿಕೊಂಡಿದ್ದರು. ಆದರೆ ಯೋಜನೆಯನ್ನೇ ಬುಡಮೇಲು ಮಾಡುವುದರ ಮೂಲಕ ರಾಜ್ಯದ ಸುಮಾರು 71 ಲಕ್ಷ ಕುಟುಂಬಗಳ ಜೀವನೋಪಾಯಕ್ಕೆ ಧಕ್ಕೆಯಾಗಿದೆ ಎಂದು ಕಿಡಿಕಾರಿದರು. ಮೊದಲಿದ್ದ ಹಾಗೆ ಮನರೇಗಾ ಯೋಜನೆಯನ್ನು ಮರು ಜಾರಿ ಮಾಡುವವರೆಗೂ ಕಾಂಗ್ರೆಸ್ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.ಮರ್ಯಾದೆಗೇಡು ಹತ್ಯೆಗಳಾಗುತ್ತಿವೆ
ಮುಂದುವರಿದ ಸಮುದಾಯದವರು ದಲಿತ ವರ್ಗದ ಮಕ್ಕಳನ್ನು ಸ್ವಯಂ ಪ್ರೇರಿತರಾಗಿ ಮದುವೆಯಾಗಲು ಮುಂದಾದಾಗ ಮರ್ಯಾದೆ ಗೇಡು ಹತ್ಯೆಗಳಾಗುತ್ತಿವೆ. ಇದು ನಾಚಿಕೆಗೇಡಿನ ಹತ್ಯೆ ಎಂದು ವ್ಯಾಖ್ಯಾನಿಸಿದ ಅವರು, ಮರ್ಯಾದೆಗೇಡು ಹತ್ಯೆ ಸಂಬಂಧ ಕಠಿಣ ಕ್ರಮಕ್ಕಾಗಿ ನಮ್ಮ ಸರ್ಕಾರವಿಶೇಷ ಕಾನೂನು ರೂಪಿಸಲಿದೆ ಎಂದು ಹೇಳಿದರು.ಸಮಾನತೆ, ಭ್ರಾತೃತ್ವ, ಸ್ವಾತಂತ್ರ್ಯದ ಮೂಲಕ ಸಮೃದ್ದ ಭಾರತದ ಕನಸು ಕಂಡಿದ್ದ ಶ್ರೇಷ್ಟರಾಷ್ಟ್ರವಾದಿ, ದೇಶ ಪ್ರೇಮಿ ಅಂಬೇಡ್ಕರ್ ಅವರ ಕನಸು ಕನಸಾಗಿಯೇ ಉಳಿದಿರಲು ಪ್ರಸ್ತುತ ಜಾತಿ, ಧರ್ಮ ರಾಜಕಾರಣ ಕಾರಣವಾಗಿದೆ ಎಂದು ವಿಷಾದಿಸಿದರು.
ಕೆ.ಆರ್. ನಗರ ಪಟ್ಟಣದಲ್ಲಿ ಡಾ. ಅಂಬೇಡ್ಕರ್ ಭವ್ಯ ಭವನ ನಿರ್ಮಾಣವಾಗುತ್ತಿದ್ದು, ಮುಂದುವರಿದ ಕಾಮಗಾರಿಗೆ 4 ಕೋಟಿ ರು. ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.ಡಿಜಿಟಲ್ ಲೈಬ್ರರಿ ನಿರ್ಮಾಣ
ಶಾಸಕ ಡಿ. ರವಿಶಂಕರ್ ಮಾತನಾಡಿ, ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿನ ಎಲ್ಲ ಅಂಬೇಡ್ಕರ್ ಭವನಗಳಲ್ಲಿ ಡಿಜಿಟಲ್ ಲೈಬ್ರರಿ ನಿರ್ಮಾಣ ತೆರೆಯಲಾಗುವುದು. ಕೆ.ಆರ್. ನಗರದಲ್ಲಿ ನಿರ್ಮಾಣವಾಗುತ್ತಿರುವ ಡಾ. ಅಂಬೇಡ್ಕರ್ ಭವನ ಮುಂದುವರಿದ ಕಾಮಗಾರಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಒಂದು ಕೋಟಿ ರು. ನೀಡಲಾಗುವುದು ಎಂದು ಅವರು ತಿಳಿಸಿದರು.ಟಿ. ನರಸೀಪುರ ಕೂಡೂರಿನ ನಳಂದ ಬುದ್ದ ವಿಹಾರದ ಬಂತೇ ಬೋದಿರತ್ನ, ಜಿಪಂ ಮಾಜಿ ಸದಸ್ಯ ಅಚ್ಯುತಾನಂದ, ಮುಖಂಡ ಕಾಂತರಾಜು, ತಹಸೀಲ್ದಾರ್ ರುಕಿಯಾಬೇಗಂ, ತಾಪಂ ಇಒ ರವಿ, ಸಮಾಜ ಕಲ್ಯಾಣಾಧಿಕಾರಿ ಶಂಕರ ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಶಂಕರ್, ಮಹದೇವ್, ವಕ್ತಾರ ಸಯ್ಯದ್ ಜಾಬೀರ್, ತಾಪಂ ಮಾಜಿ ಸದಸ್ಯ ಸಣ್ಣಪ್ಪ, ಗ್ರಾಪಂ ಪಂಚಾಯತ್ ಆಡಳಿತ ಮಂಡಳಿ ಸದಸ್ಯರು, ಡಾ. ಅಂಬೇಡ್ಕರ್ ಯುವಕರ ಸಂಘದ ಪದಾಧಿಕಾರಿಗಳು, ಸದಸ್ಯರು, ಗ್ರಾಮದ ಮುಖಂಡರು, ನೂರಾರು ಮಂದಿ ಇದ್ದರು.