ಮಾಲೂರು ಕ್ಷೇತ್ರದಲ್ಲಿ ನಿಮ್ಮ ಆಟ ನಡೆಯದು: ಕೆ.ವೈ.ನಂಜೇಗೌಡ

KannadaprabhaNewsNetwork |  
Published : Jan 20, 2026, 01:15 AM IST
೧೯ಕೆಎಲ್‌ಆರ್-೨ಮಾಲೂರು ಶಾಸಕ ಕೆ.ವೈ.ನಂಜೇಗೌಡ. | Kannada Prabha

ಸಾರಾಂಶ

ಮಾಲೂರಿನಲ್ಲಿ ನಮ್ಮ ಮನೆಯ ಎಲ್ಲರೂ ಕಾಂಗ್ರೆಸ್ ಪಕ್ಷದವರು. ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಕೆಲಸ ಮಾಡುತ್ತೇವೆ. ನಿಮ್ಮಂತೆ ಒಂದು ಮನೆ ಒಂದು ಪಕ್ಷ, ಮತ್ತೊಂದು ಮನೆ ಮತ್ತೊಂದು ಪಕ್ಷ ಎನ್ನುವ ರಾಜಕಾರಣ ನಮ್ಮದಲ್ಲ.

ಕನ್ನಡಪ್ರಭ ವಾರ್ತೆ ಮಾಲೂರುಮಾಲೂರು ತಾಲೂಕಿನಲ್ಲಿ ಗಂಡಸರಿದ್ದಾರೆ. ನಂಜೇಗೌಡ ಕೂಡ ಗಂಡಸು. ಯಾವುದಕ್ಕೂ ಹೆದರುವವನಲ್ಲ. ನಿಮ್ಮ ಆರ್ಭಟಗಳು ಹೊಸಕೋಟೆಗೆ ಮಾತ್ರ ಸೀಮಿತವಾಗಿರಲಿ, ಮಾಲೂರಿನ ಜನರು ಸ್ವಾಭಿಮಾನಿಗಳು, ನಿಮ್ಮ ಆಟ ನಡೆಯದು ಎಂದು ಶಾಸಕ ಕೆ.ವೈ.ನಂಜೇಗೌಡ ಮಾಜಿ ಶಾಸಕ ಕೆ.ಎಸ್. ಮಂಜುನಾಥಗೌಡರಿಗೆ ಎಂದು ಶಾಸಕ ಹಾಗೂ ಕೋಲಾರ ಹಾಲು ಒಕ್ಕೂಟ (ಕೋಮುಲ್) ಅಧ್ಯಕ್ಷ ಕೆ.ವೈ.ನಂಜೇಗೌಡ ಟಾಂಗ್ ನೀಡಿದರು.

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದಿಂದ ಸನ್ಮಾನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ತಾಲೂಕಿನಲ್ಲಿ ಹಲವಾರು ಮಾಜಿ ಶಾಸಕರು ಜೀವಂತವಾಗಿದ್ದಾರೆ. ಅವರಲ್ಲಿ ನನ್ನ ವಿರುದ್ಧ ಟೀಕೆ ಮಾಡಿದವರು ಯಾರು ಎಂದು ವ್ಯಂಗ್ಯವಾಡಿದ ಅವರು, ಮಾಲೂರಿನಲ್ಲಿ ನಮ್ಮ ಮನೆಯ ಎಲ್ಲರೂ ಕಾಂಗ್ರೆಸ್ ಪಕ್ಷದವರು. ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಕೆಲಸ ಮಾಡುತ್ತೇವೆ. ನಿಮ್ಮಂತೆ ಒಂದು ಮನೆ ಒಂದು ಪಕ್ಷ, ಮತ್ತೊಂದು ಮನೆ ಮತ್ತೊಂದು ಪಕ್ಷ ಎನ್ನುವ ರಾಜಕಾರಣ ನಮ್ಮದಲ್ಲ. 2028ರ ಚುನಾವಣೆ ಸುಲಭವಲ್ಲ, ಎಲ್ಲದಕ್ಕೂ ಸಿದ್ದನಿದ್ದೇನೆ. ನಿಮ್ಮ ಮಾತಿನ ದಾಟಿಗೆ ನಾನು ಹೆದರುವುದಿಲ್ಲ. ಮಾಲೂರಿನಲ್ಲಿ ಗೌರವದಿಂದ ಮಾತನಾಡಿದರೆ ನಾನೂ ಗೌರವ ಕೊಡುತ್ತೇನೆ, ವಿರೋಧ ಪಕ್ಷದವರಾಗಿ, ಅಭಿವೃದ್ಧಿ ವಿಚಾರಗಳಲ್ಲಿ ತಪ್ಪುಗಳಿದ್ದರೆ ಟೀಕೆ ಮಾಡಿದರೆ ಸ್ವಾಗತಿಸುತ್ತೇನೆ ಎಂದರು.ತಾಲೂಕಿನಲ್ಲಿ 28 ಗ್ರಾ.ಪಂ.ಗಳ ಪೈಕಿ 22-23 ಅಧ್ಯಕ್ಷರು ಕಾಂಗ್ರೆಸ್ ಪಕ್ಷದವರೇ ಆಗಿದ್ದಾರೆ. 32 ವರ್ಷಗಳ ನಂತರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ವಶಪಡಿಸಿಕೊಂಡಿದೆ. ಕೋಮುಲ್‌ನಲ್ಲಿ ಮೊದಲು ಒಬ್ಬನೇ ನಿರ್ದೇಶಕನಾಗಿದ್ದೇ, ನಂತರ ಇಬ್ಬರಾದೆವು, ಈಗ ಮೂವರು ನಿರ್ದೇಶಕರಾಗಿದ್ದೇವೆ. ಡಿಸಿಸಿ ಬ್ಯಾಂಕ್‌ನಲ್ಲೂ ಒಬ್ಬರಿಂದ ಇಬ್ಬರಾಗಿದ್ದಾರೆ. ಸಹಕಾರಿ ಒಕ್ಕೂಟದಲ್ಲಿಯೂ ಪ್ರತಿನಿಧಿತ್ವ ಹೆಚ್ಚಾಗಿದೆ. ಇವರೆಲ್ಲರೂ ಕಾಂಗ್ರೆಸ್ ಪಕ್ಷದವರೇ ಎಂದು ಹೇಳಿದರು.ತಾಲೂಕು ಆಡಳಿತ ಮತ್ತು ಶಾಸಕರು ಹಳ್ಳಿಕಡೆ ಎಂಬ ಕಾರ್ಯಕ್ರಮ ಆಯೋಜಿಸಿದೆ, ಇದರಿಂದ ನಿಮಗೆ ಏನು ತೊಂದರೆ? ನಾನು ಎರಡನೇ ಅವಧಿಗೆ ಶಾಸಕನಾದ ನಂತರ ನೀವು ಸುಮ್ಮನಿದ್ದರಾ? ನನ್ನ ವಿರುದ್ಧ ಇಡಿ ಕಳುಹಿಸಿದಿರಿ, ಅಕ್ರಮವಾಗಿ ಗೆದ್ದಿದ್ದೇನೆ ಎಂದು ಪ್ರಚಾರ ಮಾಡಿದಿರಿ, ಕೋರ್ಟ್‌ನಲ್ಲಿ ಪ್ರಕರಣ ಹಾಕಿದಿರಿ, ಮಾನಸಿಕ ಹಿಂಸೆ ನೀಡಿದಿರಿ. ಕೊನೆಗೆ ಏನಾಯಿತು? ಈಗ ಎಲ್ಲವೂ ಮುಗಿದಿದೆ. ಇನ್ನೂ 2.5 ವರ್ಷ ಅಧಿಕಾರ ಇದೆ. ಹಳ್ಳಿ ಹಳ್ಳಿಗೆ ಹೋಗುತ್ತೇನೋ, ಮನೆ ಮನೆಗೆ ಹೋಗುತ್ತೇನೋ ಅದು ನನ್ನ ಇಷ್ಟ ಎಂದು ಹೇಳಿದರು.

ಮಾಲೂರು ತಾಲೂಕಿನಲ್ಲಿ ಯಾರಾದರೂ ಹಣ ಕೊಟ್ಟು ಪೋಸ್ಟಿಂಗ್ ಪಡೆದುಕೊಂಡಿದ್ದರೆ ಅವರಲ್ಲೊಬ್ಬರಿಂದ ಹೇಳಿಸಿ. ಪಕ್ಷಾತೀತವಾಗಿ ನಾನು ಹಣ ಪಡೆದು ಕೆಲಸ ಮಾಡಿಸಿದ್ದೇನೆ ಎಂದು ಬಿಜೆಪಿ ನಾಯಕರಿಂದಲಾದರೂ ಹೇಳಿಸಲಿ ಎಂದು ಸವಾಲು ಹಾಕಿದರು. ಕೇವಲ ಬಾಯಿ ಚಪಲಕ್ಕಾಗಿ ಮಾತಾಡುವುದು ಸರಿಯಲ್ಲ. ಮಾಲೂರು ತಹಸೀಲ್ದಾರ್ ಗೌರವಾನ್ವಿತ ಮಹಿಳೆಯಾಗಿರುವುದರಿಂದ ಸುಮ್ಮನಿದ್ದಾರೆ. ಇಲ್ಲವಾದರೆ ಶಿಡ್ಲಘಟ್ಟದಲ್ಲಿ ನಡೆದಂತೆಯೇ ಇಲ್ಲಿ ನಡೆದಿದ್ದರೆ ಮಾಲೂರಿನ ಹೆಸರು ಕೆಟ್ಟುಹೋಗುತ್ತಿತ್ತು ಎಂದರು.

ಕೆರೆ ಮಣ್ಣು ಕೆರೆಗೆ ಹಾಕಿ ನಮ್ಮ ಮನೆಗೆ ದುಡ್ಡು ಎಂಬ ಆರೋಪ ಮಾಡುವವರು ತನಿಖೆ ಮಾಡಿಸಿ, ಅದನ್ನು ಜನರಿಗೆ ಸಾಬೀತುಪಡಿಸಲಿ. ಮಾಲೂರಿನ ಜನರು ಸ್ವಾಭಿಮಾನಿಗಳು. ನೀವು ಹೊಸಕೋಟೆಯವರು. ನಾನು 1986ರಿಂದ ಇಲ್ಲಿನ ರಾಜಕೀಯದಲ್ಲಿದ್ದೇನೆ. ತಾಲೂಕಿನ ಜನರು ನೀಡಿದ ಗೌರವವನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದೇನೆ ಎಂದರು.

ಅಂಬೇಡ್ಕರ್ ಸಂವಿಧಾನಕ್ಕೆ ನಾವು ಗೌರವ ಕೊಡುವುದಿಲ್ಲವೇ? ಬ್ಯಾನರ್ ಗಲಾಟೆ ಯಾಕಾಯಿತು? ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಪಕ್ಷೇತರ ಎಲ್ಲರೂ ಶಾಸಕರಾ? ತಾಲೂಕು ಕಚೇರಿ ಎದುರು ಬ್ಯಾನರ್ ಹಾಕಿದಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರು ಈ ಬಗ್ಗೆ ತಹಸೀಲ್ದಾರ್‌ನಿಂದ ವಿವರಣೆ ಕೇಳಿದ್ದಾರೆ. ಬಳ್ಳಾರಿ, ಶಿಡ್ಲಘಟ್ಟದಲ್ಲಿ ನಡೆದ ಘಟನೆಗಳ ಹಿನ್ನೆಲೆ ಇದನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಬ್ಯಾನರ್‌ಗಳನ್ನು ತೆಗೆಸಲಾಗಿದೆ. ನೀನು ಶಾಸಕನಾಗಿದ್ದರೂ ಇದೇ ಮಾಡುತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.

ಅನುಮತಿ ಪಡೆದು ಬ್ಯಾನರ್ ಹಾಕುವುದರಲ್ಲಿ ನಮಗೆ ತಕರಾರಿಲ್ಲ. ಮಾಜಿ ಶಾಸಕರು ಎಂದು ಹಾಕಿಕೊಳ್ಳುವುದಕ್ಕೂ ನಮ್ಮ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಚಿಕ್ಕಬಳ್ಳಾಪುರದ ಮಾಜಿ ಶಾಸಕ ಹಾಗೂ ಹಾಲಿ ಸಂಸದ ಡಾ.ಸುಧಾಕರ್ ವಿಭಜನೆ ಹೆಸರಿನಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಸ್ಥಗಿತಗೊಳಿಸಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸ್ಥಗಿತಗೊಂಡಿದ್ದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮರುಪ್ರಾರಂಭಿಸಿ ಮಾಲೂರು ತಾಲೂಕಿನಿಂದ ಮೂರು ಬಾರಿ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಜಂಟಿ ಜಿಲ್ಲೆಗಳ ನಿರ್ದೇಶಕರ ಸಹಕಾರದಿಂದ ಮೊದಲ ಅವಧಿಯಲ್ಲಿ ಒಂದು ವರ್ಷ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಅವಕಾಶ ಲಭಿಸಿತು, ಆ ಅವಧಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೆಗಾ ಡೇರಿ ಪೂರ್ಣಗೊಳಿಸಲಾಗಿದ್ದು, ಚಿಂತಾಮಣಿಯಲ್ಲಿ ಐಸ್‌ಕ್ರೀಂ ಘಟಕ ಸ್ಥಾಪಿಸಲಾಯಿತು. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದ್ದರೂ ಕೂಡ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿರನ್ನು ಆಹ್ವಾನಿಸಿ ಕೋಲಾರದಲ್ಲಿ ಎಂ.ವಿ.ಕೆ. ಡೇರಿಯ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು ಎಂದು ವಿವರಿಸಿದರು.

ಕೋಮುಲ್ ನಿರ್ದೇಶಕರಾದ ಕಾಂತಮ್ಮ, ಸೋಮಣ್ಣ, ಮಲ್ಲಪನಹಳ್ಳಿ ಶ್ರೀನಿವಾಸ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಾಲಗೇನಹಳ್ಳಿ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ದಿನ್ನಹಳ್ಳಿ ರಮೇಶ್ ಹಾಗೂ ವಿನೋದ್ ಗೌಡ, ಜಿಲ್ಲಾ ಸಹಕಾರಿ ಒಕ್ಕೂಟ ನಿರ್ದೇಶಕರಾದ ಗೌವರ್ಧನ ರೆಡ್ಡಿ, ನಾರಾಯಣಗೌಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕಾಮ’ಚಂದ್ರರಾವ್‌ ಐಪಿಎಸ್‌ - ಪೊಲೀಸ್‌ ಸಮವಸ್ತ್ರದಲ್ಲೇ ಕಚೇರಿಯಲ್ಲಿ ಮಹಿಳೆಯರ ಜತೆ ಸರಸ
ಪವಿತ್ರಾಗೌಡಗೆ ಮನೆ ಊಟ ಪ್ರಶ್ನಿಸಿಹೈಕೋರ್ಟ್‌ಗೆ ರಾಜ್ಯ ಸರ್ಕಾರ ಅರ್ಜಿ