ಮೆಕ್ಕೆಜೋಳ ಖರೀದಿಗೆ ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪೂರ ಚಾಲನೆ

KannadaprabhaNewsNetwork |  
Published : Jan 07, 2026, 03:15 AM IST
ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಂಗಳವಾರ ಚಾಲನೆ  | Kannada Prabha

ಸಾರಾಂಶ

ಪ್ರಸಕ್ತ ಸಾಲಿನ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಗೋವಿನಜೋಳ ಖರೀದಿಯ ನೋಂದಣಿ ಕಾರ್ಯಕ್ಕೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಂಗಳವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಸಕ್ತ ಸಾಲಿನ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಗೋವಿನಜೋಳ ಖರೀದಿಯ ನೋಂದಣಿ ಕಾರ್ಯಕ್ಕೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಂಗಳವಾರ ಚಾಲನೆ ನೀಡಿದರು.

ಮುಧೋಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಆದೇಶದನ್ವಯ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಮೆಕ್ಕೆಜೋಳವನ್ನು ಎಪಿಎಂಸಿ ಮಾರುಕಟ್ಟೆಗಳಲ್ಲಿ ಆಗುವ ವಹಿವಾಟಿನ ಧಾರಣೆಯ ಆಧಾರದ ಮೇಲೆ ರೈತರಿಗೆ ಬೆಲೆ ವ್ಯತ್ಯಾಸದ ಮೊತ್ತವನ್ನು ಡಿಬಿಟಿ ಮೂಲಕ ಬ್ಯಾಂಕ ಖಾತೆಗೆ ಪಾವತಿಸಲಾಗುತ್ತದೆ ಎಂದು ತಿಳಿಸಿದರು.

ಮಾರುಕಟ್ಟೆ ಮಧ್ಯ ಪ್ರವೇಶದ ದರ ಪ್ರತಿ ಕ್ವಿಂಟಲ್ ಗೆ ಗರಿಷ್ಟ ₹2150 ನಿಗದಿಪಡಿಸಿದೆ. ಪ್ರತಿ ಎಕರೆಗೆ 12 ಕ್ವಿಂಟಲ್ ನಂತೆ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ಹೊಂದಿರುವ ಜಮೀನಿನ ವಿಸ್ತಿರ್ಣಕ್ಕೆ ಅನುಗುಣವಾಗಿ ಗರಿಷ್ಠ 50 ಕ್ವಿಂಟಲ್‌ಗೆ ಮಿತಿಗೊಳಿಸಲಾಗಿದೆ. ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಲ್‌ಗೆ ₹1900 ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಮಾರಾಟವಾದರೆ ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹250 ರಂತೆ ಪಾವತಿಸಲಾಗುತ್ತದೆ. ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಲ್‌ ಗೆ ₹1950ಗೆ ಮಾರಾಟವಾದಲ್ಲಿ ವ್ಯತ್ಯಾಸದ ಮೊತ್ತ ₹200 ಪ್ರತಿ ಕ್ವಿಂಟಲ್‌ಗೆ ಪಾವತಿಸಲಾಗುತ್ತದೆ ಎಂದು ತಿಳಿಸಿದರು.

ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಲ್‌ ಗೆ ₹2000ಕ್ಕೆ ಮಾರಾಟವಾದಲ್ಲಿ ವ್ಯತ್ಯಾಸದ ಮೊತ್ತ ₹150ರಂತೆ ಪ್ರತಿ ಕ್ವಿಂಟಲ್‌ಗೆ ಪಾವತಿಸಲಾಗುತ್ತದೆ. ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಲ್‌ ಗೆ 2100ಗೆ ಮಾರಾಟವಾದಲ್ಲಿ ವ್ಯತ್ಯಾಸದ ಮೊತ್ತ ₹50 ಪಾವತಿಸಲಾಗುತ್ತದೆ. ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಲ್‌ ಗೆ ₹2150 ಅಥವಾ ಅದಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟವಾದಲ್ಲಿ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲವೆಂದು ತಿಳಿಸಿದರು.

ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಈಗಾಗಲೇ ಎಥೆನಾಲ್ ಉತ್ಪಾದನೆಗಾಗಿ ಹಾಗೂ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಕ್ಕೆ ಅವಶ್ಯವಿರುವ ಮೆಕ್ಕೆಜೋಳ ಪೂರೈಕೆ ಮಾಡಿರುವ ರೈತರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಯೋಜನೆಯ ಅನುಷ್ಠಾನ ಅವಧಿಯು ಮೆಕ್ಕೆಜೋಳ ಉತ್ಪನ್ನದ ಮೊದಲ ವಹಿವಾಟು ಯುಎಂಪಿ ತಂತ್ರಾಂಶದಲ್ಲಿ ಆಗುವ ದಿನಾಂಕದಿಂದ ಒಂದು ತಿಂಗಳ ಅವಧಿಯವರೆಗೆ ಚಾಲ್ತಿಯಲ್ಲಿರಲಿದೆ ಎಂದು ತಿಳಿಸಿದರು.

ಈ ಯೋಜನೆಯ ಪ್ರಯೋಜನ ಪಡೆಯಲು ಬಾಗಲಕೋಟೆ ಜಿಲ್ಲೆಯ ಎಲ್ಲಾ ರೈತ ಬಾಂಧವರು ನೋಂದಣಿ ಸ್ಥಳಗಳಲ್ಲಿ ಆಧಾರ್‌ ಕಾರ್ಡ್‌, ಫ್ರೂಟ್ಸ್ ಗುರುತಿನ ಸಂಖ್ಯೆಯೊಂದಿಗೆ ಎನ್.ಇ.ಎಂ.ಎಲ್ ತಂತ್ರಾಂಶದಲ್ಲಿ ಬಯೋಮೆಟ್ರಿಕ್‌ ಮೂಲಕ ನೋಂದಣಿ ಮಾಡಿಸಿಕೊಂಡು ಎಪಿಎಂಸಿ ಮಾರುಕಟ್ಟೆ ಪ್ರಾಂಗಣಗಳಲ್ಲಿ ಯುಎಂಪಿ ವೇದಿಕೆಯಲ್ಲಿ ಮೆಕ್ಕೆಜೋಳ ಮಾರಾಟ ಮಾಡಲು ರೈತರಲ್ಲಿ ಮನವಿ ಮಾಡಿಕೊಂಡರು.

ಜಂಟಿ ಕೃಷಿ ನಿರ್ದೆಶಕ ರುದ್ರೇಶ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಂಟಿ ತೋಟಗಾರಿಕೆ ನಿರ್ದೇಶಕ ರವೀಂದ್ರ ಹಕಾಟಿ, ಮುಧೋಳ ಕೃಷಿ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸಂಗಪ್ಪ ಇಮ್ಮನ್ನವರ, ಉಪಾಧ್ಯಕ್ಷ ಭೀಮಪ್ಪ ರಾಮಪ್ಪ ಮೆಟಗುಡ್ಡ, ಸದಸ್ಯರಾದ ಮಲ್ಲಪ್ಪ ರಾಮಪ್ಪ ಮಂಟೂರ, ವೆಂಕಟೇಶ ಅಂಕಲಗಿ, ಲಕ್ಕಪ್ಪ ಹಂಚಿನಾಳ, ಸೋಮಪ್ಪ ಹೊಟ್ಟೆಪ್ಪನವರ, ಪಾಂಡುರಂಗ ಹೂವನ್ನವರ, ದಾನಪ್ಪ ಕವಳ್ಳಿ, ಪ್ರಕಾಶ ತಳಗೇರಿ, ಶಿವಾನಂದ ಉದುಪುಡಿ, ಸದುಗೌಡ ಪಾಟೀಲ, ದುಂಡಪ್ಪ ಭರಮನಿ ರೈತರಾದ ಮುತ್ತಪ್ಪ ಚೌಧರಿ, ಕೊರಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಖರೀದಿ ಕೇಂದ್ರಗಳ ವಿವರ

ಎಪಿಎಂಸಿ ಪ್ರಾಂಗಣ ಬಾಗಲಕೋಟೆ (9448100779), ಬಾದಾಮಿ (9164794469), ಜಮಖಂಡಿ (8904218149), ಬೀಳಗಿ (9035353912), ಮುಧೋಳ (7892640540), ಮಹಾಲಿಂಗಪುರ (7892640540), ಹುನಗುಂದ (9972841315), ಇಳಕಲ್ಲ (9901439616).

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ