ದಾಂಡೇಲಿ: ಡಿ. ೧೩ರಿಂದ ಡಿ. ೧೫ರ ವರೆಗೆ ನಗರಸಭೆಯ ಮೈದಾನದಲ್ಲಿ ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ ೨೫ನೇ ಕನ್ನಡ ಸಾಹಿತ್ಯ ಸಮ್ಮೇಳನ ವಿಜೃಂಭಣೆಯಿಂದ ನಡೆಯಲು ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಈ ಸಮ್ಮೇಳನದಲ್ಲಿ ಸರ್ವರೂ ಭಾಗವಹಿಸುವ ಮೂಲಕ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ದಾಂಡೇಲಿ ತಹಸೀಲ್ದಾರ್ ಶೈಲೇಶ ಪರಮಾನಂದ ಕರೆ ನೀಡಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಉ.ಕ. ಜಿಲ್ಲಾ ೨೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮ ದಾಂಡೇಲಿಯಲ್ಲಿ ಮನೆ ಮಾತಾಗಿದೆ. ಜಿಲ್ಲೆಯ ಹಿರಿಯ ಸಾಹಿತಿ ರೋಹಿದಾಸ ನಾಯ್ಕ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನವನ್ನು ನಾಡಿನ ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ ನಾಡಿನ ೧೦ ಕಲಾತಂಡಗಳು, ಭಾಗವಹಿಸುವ ಮೂಲಕ ಮೆರವಣಿಗೆಗೆ ವಿಶೇಷವಾದ ಮೆರುಗು ತಂದು ಕೊಡಲಿದೆ. ಮೂರು ದಿನಗಳ ಈ ಸಮ್ಮೇಳನದಲ್ಲಿ ೨೫ ಕನ್ನಡ ಸಾಹಿತ್ಯ ಕೃತಿಗಳು ಲೋಕಾರ್ಪಣೆಯಾಗಲಿದೆ. ಈ ಹಿಂದಿನ ಎಲ್ಲ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಗೌರವ ಸನ್ಮಾನ ನಡೆಯಲಿದೆ. ವಿವಿಧ ಕ್ಷೇತ್ರಗಳ ೨೫ ಜನರಿಗೆ ಗೌರವ ಪುರಸ್ಕಾರ ನೀಡಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳ ೨೫ ಸಾಧಕರಿಗೆ ರಜತ ಗೌರವ ನೀಡಲಾಗುತ್ತಿದೆ. ಈ ಸಮ್ಮೇಳನದಲ್ಲಿ ನಾಡು-ನುಡಿ, ಭಾಷೆ ಹಾಗೂ ನಾಡಿನ ಸಮಗ್ರ ಅಭಿವೃದ್ಧಿಯ ಕುರಿತಂತೆ ವಿಚಾರಗೋಷ್ಠಿಗಳು ನಡೆಯಲಿದೆ ಎಂದು ಹೇಳಿದರು. ನಾಲ್ಕು ಪ್ರಾಧಿಕಾರಗಳ ಅಧ್ಯಕ್ಷರು ಒಂದೇ ವೇದಿಕೆಯಲ್ಲಿ ಭಾಗವಹಿಸುತ್ತಿರುವುದು ಈ ಸಮ್ಮೇಳನದ ವಿಶೇಷವಾಗಿದೆ. ದಾಂಡೇಲಿ ಇಡೀ ಕನ್ನಡಮಯವಾಗಿದೆ. ಇಲ್ಲಿಯ ಕನ್ನಡದ ಮನಸ್ಸುಗಳು ಈ ಅಕ್ಷರ ಜಾತ್ರೆಯ ಯಶಸ್ಸಿಗಾಗಿ ಅವಿರತ ಶ್ರಮಿಸುತ್ತಿವೆ. ಮೂರು ದಿನಗಳ ಈ ಅಕ್ಷರ ಜಾತ್ರೆಯಲ್ಲಿ ಎಲ್ಲ ಕನ್ನಡಾಭಿಮಾನಿಗಳೂ ಭಾಗವಹಿಸಿ, ಈ ಸಮ್ಮೇಳನವನ್ನು ಅರ್ಥಪೂರ್ಣ ಹಾಗೂ ಅವಿಸ್ಮರಣೀಯವಾಗಿಸಲು ಸಹಕರಿಸುವಂತೆ ವಿನಂತಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಪಿ.ಆರ್. ನಾಯ್ಕ, ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೊಸೂರ, ಎಸ್.ಎಚ್.ಗೌಡ, ಎಂ.ಆರ್. ನಾಯಕ, ಪ್ರವೀಣ ನಾಯಕ, ಮುಸ್ತಾಕ ಶೇಖ, ರಿವ ಸುತಾರ ಮುಂತಾದವರಿದ್ದರು.