ಕನ್ನಡಪ್ರಭ ವಾರ್ತೆ ಹಾಸನ
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್ ಮಾತನಾಡಿ, ಹಾಸನಾಂಬಾ ಒಳಾಂಗಣ ಕ್ರೀಡಾಂಗಣದಲ್ಲಿ ಕೆಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಆರಂಭದಲ್ಲಿ ಸ್ವಲ್ಪ ತೊಂದರೆ ಎದುರಾದರೂ, ಸ್ಪರ್ಧೆಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾದ್ಯಂತದ ಪತ್ರಕರ್ತರು ಒಂದೇ ವೇದಿಕೆಯಲ್ಲಿ ಸೇರಿ ಕ್ರೀಡಾ ಮನೋಭಾವದಿಂದ ಭಾಗವಹಿಸುತ್ತಿರುವುದು ಶ್ಲಾಘನೀಯ ಬೆಳವಣಿಗೆಯಾಗಿದ್ದು, ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಸಮಾಜಸೇವಕ ಅಮ್ಜಾದ್ ಖಾನ್ ಮಾತನಾಡಿ, ಸಮಾಜಸೇವೆ ಎನ್ನುವುದು ಎಲ್ಲರ ಸಹಕಾರದಿಂದ ಮಾತ್ರ ಯಶಸ್ವಿಯಾಗುವ ಕಾರ್ಯ. ಪತ್ರಕರ್ತರೊಂದಿಗೆ ತಮ್ಮ ಆತ್ಮೀಯ ಸಂಬಂಧ ಹಲವು ವರ್ಷಗಳಿಂದ ಮುಂದುವರಿದಿದ್ದು, ಸಮಾಜಮುಖಿ ಕಾರ್ಯಗಳಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಕ್ರೀಡೆಗೆ ಆದ್ಯತೆ ನೀಡಿ ಆಯೋಜಿಸಿರುವ ಈ ಪಂದ್ಯಾವಳಿ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಕೋರಿದರು.ರಾಜ್ಯ ಸಂಘದ ಉಪಾಧ್ಯಕ್ಷ ಮದನ್ ಗೌಡ ಹಾಗೂ ಜಿಲ್ಲಾ ಅಧ್ಯಕ್ಷ ಕೆಂಚೇಗೌಡ ಮಾತನಾಡಿ, ನಿರಂತರ ಒತ್ತಡದ ನಡುವೆ ಕೆಲಸ ಮಾಡುವ ಪತ್ರಕರ್ತರಿಗೆ ಕ್ರೀಡೆ ಉತ್ತಮ ಮಾನಸಿಕ ನೆಮ್ಮದಿ ಹಾಗೂ ದೈಹಿಕ ಆರೋಗ್ಯ ನೀಡುತ್ತದೆ. ಪತ್ರಕರ್ತರಲ್ಲಿ ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸುವಲ್ಲಿ ಇಂತಹ ಕ್ರೀಡಾಕೂಟಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.