ಫೆ.1ರಿಂದ ಜಿಲ್ಲಾ ಮಟ್ಟದ ಖೋಖೋ ಪಂದ್ಯಾವಳಿ

KannadaprabhaNewsNetwork | Published : Jan 24, 2025 12:46 AM

ಸಾರಾಂಶ

ಜಿಲ್ಲಾ ಖೋಖೋ ಸಂಸ್ಥೆ ಮತ್ತು ತಾಲೂಕಿನ ವೆಂಕಟಯ್ಯನ ಛತ್ರದ ಫ್ರೆಂಡ್ಸ್ ಖೋಖೋ ಕ್ಲಬ್ ವತಿಯಿಂದ ಫೆ. ೧ ಮತ್ತು ೨ ರಂದು ವೆಂಕಟಯ್ಯನ ಛತ್ರದ ಸರ್ಕಾರಿ ಪದವಿ ಕಾಲೇಜು ಮತ್ತು ಪ್ರೌಢಶಾಲೆ ಮೈದಾನದಲ್ಲಿ ಹೊನಲು ಬೆಳಕಿನ ಜಿಲ್ಲಾ ಮಟ್ಟದ ಖೋಖೋ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಖೋಖೋ ಸಂಸ್ಥೆ ಅಧ್ಯಕ್ಷ ಶಮಿತ್‌ಕುಮಾರ್ ಎಚ್.ಬಿ. ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಜಿಲ್ಲಾ ಖೋಖೋ ಸಂಸ್ಥೆ ಮತ್ತು ತಾಲೂಕಿನ ವೆಂಕಟಯ್ಯನ ಛತ್ರದ ಫ್ರೆಂಡ್ಸ್ ಖೋಖೋ ಕ್ಲಬ್ ವತಿಯಿಂದ ಫೆ. ೧ ಮತ್ತು ೨ ರಂದು ವೆಂಕಟಯ್ಯನ ಛತ್ರದ ಸರ್ಕಾರಿ ಪದವಿ ಕಾಲೇಜು ಮತ್ತು ಪ್ರೌಢಶಾಲೆ ಮೈದಾನದಲ್ಲಿ ಹೊನಲು ಬೆಳಕಿನ ಜಿಲ್ಲಾ ಮಟ್ಟದ ಖೋಖೋ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಖೋಖೋ ಸಂಸ್ಥೆ ಅಧ್ಯಕ್ಷ ಶಮಿತ್‌ಕುಮಾರ್ ಎಚ್.ಬಿ. ತಿಳಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಮಟ್ಟದಲ್ಲಿ ಒಂದು ಪ್ರಬಲ ತಂಡವನ್ನು ಕಟ್ಟಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಾಗವಹಿಸುವಂತೆ ತರಬೇತಿ ನೀಡುವ ಸಲುವಾಗಿ ಈ ಪಂದ್ಯಾವಳಿ ಆಯೋಜಿಸಲಾಗಿದೆ. ಫೆ.೧ರಂದು ಮಧ್ಯಾಹ್ನ ೩ ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು ಶಾಸಕ ಸಿ. ಪುಟ್ಟರಂಗಶೆಟ್ಟಿ ಉದ್ಘಾಟಿಸಲಿದ್ದು ಖೋಖೋ ಪಂದ್ಯಾವಳಿಗೆ ಸಂಸದ ಸುನೀಲ್ ಬೋಸ್ ಚಾಲನೆ ನೀಡಲಿದ್ದಾರೆ ಎಂದರು.

ಅಧ್ಯಕ್ಷತೆಯನ್ನ ಶಮಿತ್‌ಕುಮಾರ್ ವಹಿಸಲಿದ್ದು, ಗೌರವ ಅಧ್ಯಕ್ಷ ಜಿ.ಪ್ರಶಾಂತ್ ಉಪಸ್ಥಿತರಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಖೋಖೋ ಸಂಸ್ಥೆ ಕಾರ್ಯದರ್ಶಿ ಆರ್. ಮಲ್ಲಿಕಾರ್ಜುನಯ್ಯ, ಭಾರತ ಕ್ರೀಡಾ ಪ್ರಾಧಿಕಾರ ಮುಖ್ಯ ಖೋಖೋ ತರಬೇತಿದಾರ ಎಂ.ನಟರಾಜು, ಎಪಿಎಂಸಿ ಅಧ್ಯಕ್ಷ ಮಹದೇವಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಶಶಿಕುಮಾರ್, ಸುರೇಶ್, ಗ್ರಾ.ಪಂ. ಉಪಾಧ್ಯಕ್ಷ ಕೃಷ್ಣಮೂರ್ತಿ, ಸದಸ್ಯ ರಂಗಸ್ವಾಮಿ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಶಂಕರ್, ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜು, ಪ್ರಾಂಶುಪಾಲ ಮಲ್ಲೇಶ್, ಉಪಪ್ರಾಂಶುಪಾಲೆ ನಾಗರತ್ನ ಭಾಗವಹಿಸಲಿದ್ದಾರೆ ಎಂದರು.

ದೈಹಿಕ ಶಿಕ್ಷಕರು ಹಾಗೂ ಹಿರಿಯ ತರಬೇತಿದಾರರಿಗೆ ಸನ್ಮಾನ ಮಾಡಲಾಗುವುದು. ಜಿಲ್ಲೆಯ ಸುಮಾರು ೧೨ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು ಮೊದಲ ನಾಲ್ಕು ತಂಡಕ್ಕೆ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವುದು ಎಂದರು,

ಫೆ.2ರಂದು ಮಧ್ಯಾಹ್ನ ೨ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಗ್ರಾಮೀಣ ಭಾಗದಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ ಎಂಬುದಕ್ಕೆ ಕುರುಬೂರಿನ ಚೈತ್ರಾ ಅವರೇ ಉದಾಹರಣೆ, ಉತ್ತಮ ತರಬೇತಿ ನೀಡಿದರೆ ಉತ್ತಮ ಆಟವಾಡಬಲ್ಲರು ಎಂಬುದಕ್ಕೆ ಇವರೇ ಸ್ಪೂರ್ತಿ, ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆಯಲ್ಲೂ ಒಂದು ಉತ್ತಮ ತಂಡ ಕಟ್ಟುವ ಸಲುವಾಗಿ ಈ ಜಿಲ್ಲೆ ಮಟ್ಟದ ಪಂದ್ಯಾವಳಿ ಆಯೋಜಿಸಿದ್ದು, ಇಲ್ಲಿ ಉತ್ತಮ ಆಟವಾಡುವ ಕ್ರೀಡಾಪಟುಗಳನ್ನು ಆಯ್ಕೆ ಮಾಡಿಕೊಂಡು ಒಂದು ಉತ್ತಮ ಜಿಲ್ಲಾ ತಂಡವನ್ನು ಕಟ್ಟಿ ಅವರಿಗೆ ತರಬೇತಿ ನೀಡಲಾಗುವುದು ಎಂದರು.

ವಿಶ್ವಕಪ್‌ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಚೈತ್ರಾ ಹಾಗೂ ಗೌತಮ್‌ ಬಹುಮಾನ ನೀಡಿ; ಖೋಖೋ ವಿಶ್ವಕಪ್‌ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಕುರುಬೂರಿನ ಚೈತ್ರಾ ಮತ್ತು ಗೌತಮ್‌ ಅವರಿಗೆ ರಾಜ್ಯ ಸರ್ಕಾರ ಬಹುಮಾನ ನೀಡಲಿ. ಚೈತ್ರಾ ತರಬೇತಿ ಪಡೆದ ಕುರುಬೂರಿನ ಶಾಲಾ ಆವರಣದಲ್ಲಿರುವ ಕ್ರೀಡಾಂಗಣವನ್ನು ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಲು ಮುಂದಾಗಲಿ ಎಂದು ಒತ್ತಾಯ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ನಟರಾಜು, ಜಿಲ್ಲಾ ಕ್ರೀಡಾಂಗಣ ಸಮಿತಿಯ ವಿ.ಶ್ರೀನಿವಾಸಪ್ರಸಾದ್, ಮಾಜಿ ಖೋ ಖೋ ಆಟಗಾರರಾದ ಸತೀಶ್, ಮಣಿಕಂಠ, ಸದಸ್ಯ ರಾಜ್ ಹೊಸೂರು ಇದ್ದರು.

Share this article