ನಾಳೆಯಿಂದ ಜಿಲ್ಲಾಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ

KannadaprabhaNewsNetwork | Published : May 22, 2025 1:25 AM
ಶ್ರೀ ಚಾಮುಂಡೇಶ್ವರಿ ಕ್ರೀಡಾ ಸಮಿತಿಯ ಸುವರ್ಣ ಮಹೋತ್ಸವ ಅಂಗವಾಗಿ ನೀಲಮ್ಮನ ತೋಟದ ಜಿಲ್ಲಾ ಅಮೆಚೂರ್‌ ಕಬಡ್ಡಿ ಸಂಸ್ಥೆ ಸಹಯೋಗದಲ್ಲಿ ನಗರದ ಡಿಸಿಎಂ ಲೇಔಟ್‌ನ ಅನಿಲ್‌ ಕುಂಬ್ಳೆ ಕ್ರೀಡಾಂಗಣದಲ್ಲಿ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಜಿಲ್ಲಾ ಚಾಂಪಿಯನ್ ಶಿಪ್‌-2025 ಮೇ 23ರಿಂದ 25ರವರೆಗೆ ನಡೆಯಲಿದೆ ಎಂದು ಪಂದ್ಯಾವಳಿ ಆಯೋಜಕ ಶಂಕರ ಗಣೇಶ ಹೇಳಿದ್ದಾರೆ.
Follow Us

- ತೀರ್ಪುಗಾರರ ನಿರ್ಧಾರವೇ ಅಂತಿಮ: ಆಯೋಜಕ ಶಂಕರ ಗಣೇಶ

- - -

- ಡಿಸಿಎಂ ಲೇಔಟ್‌ ಅನಿಲ್‌ ಕುಂಬ್ಳೆ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಮೆಂಟ್‌

- ನೀಲಮ್ಮ ತೋಟದ ಶ್ರೀ ಚಾಮುಂಡೇಶ್ವರಿ ಕ್ರೀಡಾ ಸಮಿತಿ ಸುವರ್ಣ ಮಹೋತ್ಸವ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಶ್ರೀ ಚಾಮುಂಡೇಶ್ವರಿ ಕ್ರೀಡಾ ಸಮಿತಿಯ ಸುವರ್ಣ ಮಹೋತ್ಸವ ಅಂಗವಾಗಿ ನೀಲಮ್ಮನ ತೋಟದ ಜಿಲ್ಲಾ ಅಮೆಚೂರ್‌ ಕಬಡ್ಡಿ ಸಂಸ್ಥೆ ಸಹಯೋಗದಲ್ಲಿ ನಗರದ ಡಿಸಿಎಂ ಲೇಔಟ್‌ನ ಅನಿಲ್‌ ಕುಂಬ್ಳೆ ಕ್ರೀಡಾಂಗಣದಲ್ಲಿ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಜಿಲ್ಲಾ ಚಾಂಪಿಯನ್ ಶಿಪ್‌-2025 ಮೇ 23ರಿಂದ 25ರವರೆಗೆ ನಡೆಯಲಿದೆ ಎಂದು ಪಂದ್ಯಾವಳಿ ಆಯೋಜಕ ಶಂಕರ ಗಣೇಶ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 23ರಂದು ಸಂಜೆ 6.30 ಗಂಟೆಗೆ ಹೊನಲು ಬೆಳಕಿನ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿ ಉದ್ಘಾಟನೆಗೊಳ್ಳಲಿದೆ. ಮೇ 25ರಂದು ರಾತ್ರಿ ಉಪಾಂತ್ಯ ಹಾಗೂ ಅಂತಿಮ ಪಂದ್ಯಗಳ ನಂತರ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ ಎಂದರು.

ಪಂದ್ಯಾವಳಿಯಲ್ಲಿ ಜಿಲ್ಲಾ ಚಾಂಪಿಯನ್ ಆಗುವ ತಂಡಕ್ಕೆ ಆಕರ್ಷಕ ಟ್ರೋಫಿ, ತಂಡದ 10 ಆಟಗಾರರಿಗೆ ಏರ್ ಕೂಲರ್‌ಗಳು, ದ್ವಿತೀಯ ಸ್ಥಾನಕ್ಕೆ ತಂಡದ 10 ಸದಸ್ಯರಿಗೆ ಮಿಕ್ಸರ್‌ಗಳು, ತೃತೀಯ ಬಹುಮಾನ 10 ಆಟಗಾರರಿಗೆ ವಾಲ್ ಫ್ಯಾನ್‌ಗಳು, 4ನೇ ಬಹುಮಾನವಾಗಿ 10 ಸದಸ್ಯರಿಗೆ ಕುಕ್ಕರ್‌ಗಳನ್ನು ನೀಡಲಾಗುವುದು ಎಂದು ವಿವರಿಸಿದರು.

ತಂಡಗಳು ಹಾಗೂ ತಂಡದ ಆಟಗಾರರು ದಾವಣಗೆರೆ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯಲ್ಲಿ ನೋಂದಣಿಯಾಗಿರಬೇಕು, ನವೀಕರಣ ಮಾಡಿಸಿರಬೇಕು. ಯಾವುದೇ ತಂಡದ ಆಟಗಾರರಲ್ಲಿ ಹಾಗೂ ತಂಡಗಳಲ್ಲಿ ಸಮಸ್ಯೆಗಳು, ತೊಂದರೆಗಳು ಇದ್ದಲ್ಲಿ ಅದನ್ನು ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯಲ್ಲಿ ಪರಿಹರಿಸಿಕೊಂಡು, ಪಂದ್ಯಾವಳಿಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಯಾವುದೇ ಆಟಗಾರರು ಅಥವಾ ತಂಡದಲ್ಲಿ ಸಮಸ್ಯೆಗಳಿದ್ದರೆ ಪಂದ್ಯಾವಳಿ ಸ್ಥಳದಲ್ಲಿ ಹೇಳತಕ್ಕದ್ದಲ್ಲ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ತಂಡಗಳು ಸಮವಸ್ತ್ರದೊಂದಿಗೆ ಸಮಯಕ್ಕೆ ಸರಿಯಾಗಿ ಭಾಗವಹಿಸಬೇಕು. ಪಂದ್ಯಾವಳಿಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮ. ಪಂದ್ಯಗಳು ನಡೆಯುವಾಗ ಆಟಗಾರರಿಗೆ ಅಥವಾ ತಂಡದವರಿಗೆ ಏನಾದರೂ ತೊಂದರೆಯಾದರೆ ಅದಕ್ಕೆ ವ್ಯವಸ್ಥಾಪಕರು, ಸಂಘಟಕರು ಕಾರಣರಲ್ಲ. ಆಯಾ ತಂಡದವರೇ ಸಮಸ್ಯೆಗಳಿಗೆ ಸಂಪೂರ್ಣ ಹೊಣೆಗಾರರು, ಜವಾಬ್ದಾರರು ಎಂದು ಸ್ಪಷ್ಟಪಡಿಸಿದರು.

ಕಬಡ್ಡಿ ಪಂದ್ಯಾವಳಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರಘು ಮೊ-81974- 49131, ಮಣಿಕಂಠ- 91136-80796, ವಿಷ್ಣು- 80504-11098, ಸಾಯಿ ಶರತ್- 63624-77384ರನ್ನು ಸಂಪರ್ಕಿಸಬೇಕು ಎಂದು ಶಂಕರ ಗಣೇಶ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಬಾಲರಾಜ, ನಾಗರಾಜ, ಕೃಷ್ಣಮೂರ್ತಿ, ರವಿಕುಮಾರ ಇತರರು ಇದ್ದರು.

- - -

-21ಕೆಡಿವಿಜಿ1, 2.ಜೆಪಿಜಿ:

ದಾವಣಗೆರೆಯಲ್ಲಿ ಬುಧವಾರ ನೀಲಮ್ಮನ ತೋಟದ ಶ್ರೀ ಚಾಮುಂಡೇಶ್ವರಿ ಕ್ರೀಡಾ ಸಮಿತಿಯ ಶಂಕರ ಗಣೇಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.