ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮೀಣರ ಸಮಸ್ಯೆ ಆಲಿಸಬೇಕು: ಸಚಿವ ಜಾರ್ಜ್ ಸೂಚನೆ

KannadaprabhaNewsNetwork | Published : Nov 3, 2023 12:30 AM

ಸಾರಾಂಶ

ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮೀಣರ ಸಮಸ್ಯೆ ಆಲಿಸಬೇಕು: ಸಚಿವ ಜಾರ್ಜ್ ಸೂಚನೆ
- ಬಿ.ಎಚ್. ಕೈಮರ ನಾರಾಯಣಗುರು ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ಕನ್ನಡ ಪ್ರಭ ವಾರ್ತೆ. ನರಸಿಂಹರಾಜಪುರ ಜಿಲ್ಲಾ ಮಟ್ಟದ ಅಧಿಕಾರಿಗಳು ವಾರದಲ್ಲಿ 3 ದಿನ ಗ್ರಾಮೀಣ ಭಾಗಕ್ಕೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿದರೆ ಶೇ. 90 ರಷ್ಟು ಸಮಸ್ಯೆಗಳು ಪರಹಾರವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್ ತಿಳಿಸಿದರು. ಗುರುವಾರ ಬಿ.ಎಚ್‌.ಕೈಮರದ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಧ ಜಿಲ್ಲಾ ಮಟ್ಟದ ಜನತಾ ದರ್ಶನ ಉದ್ಘಾಟಿಸಿ ಮಾತನಾಡಿದರು. ಕೆಲವು ಅಧಿಕಾರಿಗಳು ಜನರಿಗೆ ಕಿರುಕುಳ ನೀಡುತ್ತಾರೆ ಎಂಬ ದೂರು ಬರುತ್ತಿವೆ. ಜನರ ತೆರಿಗೆಯಿಂದಲೇ ಸರ್ಕಾರಿ ನೌಕರರಿಗೆ ಸಂಬಳ ಸಿಗುತ್ತದೆ. ಅವರ ಕಷ್ಟ ಗಳಿಗೆ ಸ್ಪಂದಿಸಿ ಕೆಲಸ ಮಾಡಿದರೆ ಜನ ತಮ್ಮನ್ನು ನೆನಪಿಸಿಕೊಳ್ಳುತ್ತಾರೆ. ಅಧಿಕಾರ ಇದ್ದಾಗ ಉಪ ಯೋಗಿಸಿಕೊಂಡು ಸೇವೆ ಮಾಡಬೇಕು ಎಂದು ಸಲಹೆ ಮಾಡಿದರು. ಹಿಂದಿನಿಂದಲೂ ಜನರ ಸಮಸ್ಯೆ ಹಾಗೇ ಇದೆ. ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಜನತಾ ದರ್ಶನ ಪ್ರಾರಂಭಿಸಿದ್ದು, ಜನರ ಬಳಿಗೆ ಹೋಗಿ ಸಮಸ್ಯೆ ಅರಿತು ಬಗೆಹರಿಸುವ ಪ್ರಯತ್ನ ಮಾಡುತ್ತೇವೆ. ಸಮಸ್ಯೆಗಳನ್ನು ಸವಾಲೆಂದು ಪರಿಗಣಿಸಿ ಅಧಿಕಾರಿಗಳು, ಜನಪ್ರತಿನಿಧಿಗಳು ಟೀಂ ವರ್ಕ್ ಮಾಡಿ ಪಕ್ಷಾತೀತವಾಗಿ ಪರಿಹಾರಿಸಬೇಕಿದೆ. ಕಾಂಗ್ರೆಸ್‌ 5 ಗ್ಯಾರಂಟಿಗಳಲ್ಲಿ ಯಾವುದೇ ಜಾತಿ, ಪಕ್ಷ ನೋಡದೆ ಎಲ್ಲರಿಗೂ ತಲುಪಿಸಿದ್ದೇವೆ ಎಂದರು. ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಮುಖ್ಯ ಮಂತ್ರಿಗಳ ಸೂಚನೆಯಂತೆ ಪ್ರತಿ ತಿಂಗಳು ಒಂದು ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ಹಮ್ಮಿಕೊಳ್ಳಲಾಗಿದ್ದು, ಇದು 2 ನೇ ಜನತಾ ದರ್ಶನ. ಶೃಂಗೇರಿ ಕ್ಷೇತ್ರದ ನರಸಿಂಹರಾಜಪುರ, ಕೊಪ್ಪ ,ಶೃಂಗೇರಿ ತಾಲೂಕು ಹಾಗೂ ಖಾಂಡ್ಯ ಹೋಬಳಿಗಳಲ್ಲಿ ಅನೇಕ ಸಮಸ್ಯೆಗಳಿವೆ. ಮುತ್ತಿನಕೊಪ್ಪ, ಮಡಬೂರು, ಬಾಳೆ ,ಹೊನ್ನೇಕೊಡಿಗೆ ಭಾಗದಲ್ಲಿ ಕಾಡಾನೆ ಕಾಟ ವಿಪರೀತವಾಗಿದ್ದು ಬೆಳೆ ನಾಶವಾಗುತ್ತಿದೆ. ಆನೆಗಳ ಹತೋಟಿಗೆ ಬಜೆಟ್‌ ನಲ್ಲಿ 120 ಕೋಟಿ ಇಡಲಾಗಿತ್ತು. ಅದರಲ್ಲಿ 67 ಕಿ.ಮೀ.ಉದ್ದದ ಬ್ಯಾರಿಕೇಡ್, ಆನೆ ಕಂದಕ ತೆಗೆಯಲು ಹಣ ಬಿಡುಗಡೆ ಮಾಡಲಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. 1930 ನೇ ಇಸವಿಯವರೆಗಿನ ದಾಖಲೆ ಕೇಳುತ್ತಿದ್ದಾರೆ. ಸೆಕ್ಷನ್ 4 (1) ಅಧಿಸೂಚನೆಯಿಂದ ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಸರ್ಕಾರಿ ಭೂಮಿಗಳೆಲ್ಲಾ ಅರಣ್ಯವಾಗುತ್ತಿವೆ. ಇದು ಅವೈಜ್ಞಾನಿಕ. ಜಂಟಿ ಸರ್ವೆ ಮಾಡಿಲ್ಲ. ಜನವಸತಿ ಪ್ರದೇಶ, ಶಾಲೆಗಳೆಲ್ಲಾ ಅರಣ್ಯ ಎಂದು ಘೋಷಣೆಯಾಗುತ್ತಿದೆ. ಊರಿನ ಅಭಿವೃದ್ಧಿಗೆ ಪ್ರತಿ ಗ್ರಾಮದಲ್ಲಿ ಕನಿಷ್ಠ 10 ಎಕರೆ ಜಾಗ ಬಿಟ್ಟು ನೋಟಿಫಿಕೇಶನ್‌ ಮಾಡಬೇಕು. ಜಿಲ್ಲಾಧಿಕಾರಿ ಹಾಗೂ ಅರಣ್ಯಾಧಿಕಾರಿ ಗಂಭೀರ ಚಿಂತನೆ ಮಾಡಬೇಕು. ಈಗಾಗಲೇ ಕೊಪ್ಪದಲ್ಲಿ ಅರಣ್ಯ ವ್ಯವಸ್ಥಾಪನಾ ಅಧಿಕಾರಿ ಗಳ ಕಚೇರಿ ತೆರೆದು ಅಧಿಕಾರಿ ನೇಮಕ ಮಾಡಲಾಗಿದೆ. ನೀವು ರೈತರ ಸ್ಥಾನದಲ್ಲಿದ್ದರೆ ಏನು ಮಾಡುತ್ತೀರಿ ? ಎಂದು ತಿಳಿದು ಮಾನವೀಯತೆಯಿಂದ ವರ್ತಿಸಿ ಎಂದು ಸೂಚಿಸಿದರು. 3 ಲಕ್ಷ 30 ಸಾವಿರ ಎಕರೆ ಅರಣ್ಯಕ್ಕೆ ಸುಪ್ರೀಂ ಕೋರ್ಟಿಗೆ ಒತ್ತುವರಿ ಭೂಮಿ ಲೆಕ್ಕ ಕೊಡುವ ಭರದಲ್ಲಿ ಹಿಂದೆ ಅಧಿಕಾರಿಯೊಬ್ಬರು 3 ಲಕ್ಷ 30 ಸಾವಿರ ಎಕ್ರೆ ಭೂಮಿಯನ್ನು ಅವೈಜ್ಞಾನಿಕವಾಗಿ ಅರಣ್ಯ ಇಲಾಖೆಗೆ ಸೇರಿಸಿದ್ದಾರೆ.ಇದಲ್ಲಿ ಸಾವಿರಾರು ಎಕ್ರೆ ರೈತರ ಭೂಮಿ ಇದೆ. ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸರ್ಕಾರ ಶಾಸಕರ ಸಮಿತಿ ರಚಿಸಿದೆ. ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆ ತಕರಾರಿನಿಂದ ನೆನೆಗುದಿಗೆ ಬಿದ್ದಿದೆ. ಕೊಪ್ಪ, ನ.ರಾ.ಪುರದಲ್ಲಿ ನಿರ್ಮಿಸಿದ್ದ ಮಿನಿ ವಿಧಾನಸೌಧ ಕಟ್ಟಡ ಹಣದ ಕೊರತೆಯಿಂದ ಅರ್ಧಕ್ಕೆ ನಿಂತಿದೆ. ಇದಕ್ಕೆ ಕನಿಷ್ಟ 1 ಕೋಟಿ ಬಿಡುಗಡೆ ಮಾಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು. ಪಟ್ಟಣದ ಹೊರಗೆ ಇರುವ ನ.ರಾ.ಪುರ ಮಿನಿ ವಿಧಾನ ಸೌಧವನ್ನು ಮತ್ತೆ ಪಟ್ಟಣದ ಒಳಗೆ ತರಬೇಕು ಎಂದು ಒತ್ತಾಯಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್‌, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ, ಪೊಲೀಸ್ ವರಿಷ್ಟಾಧಿಕಾರಿ ಅಮಟೆ ವಿಕ್ರಂ, ವನ್ಯ ಜೀವಿ ವಿಭಾಗದ ಡಿಸಿಎಫ್‌ ಯಶಪಾಲ್‌ ಕ್ಷೀರ ಸಾಗರ್‌, ಕೊಪ್ಪ ಅರಣ್ಯ ವಿಭಾಗದ ಡಿಸಿಎಫ್ ನಂದೀಶ್‌, ಚಿಕ್ಕಮಗಳೂರು ಡಿಸಿಎಫ್‌ ರಮೇಶಬಾಬು, ತರೀಕೆರೆ ಉಪ ವಿಭಾಗಾದಿಕಾರಿ ಕಾಂತರಾಜ್‌, ಕೆ.ಟಿ.ವಿಜಯಕುಮಾರ್‌,ಡಯಾನ, ರಾಘವೇಂದ್ರ ಇದ್ದರು. --ಬಾಕ್ಸ್‌ -- ಅರಣ್ಯ ಇಲಾಖೆ ಬಗ್ಗೆ ಅಸಮಾಧಾನ ಜನತಾ ದರ್ಶನದಲ್ಲಿ ನರಸಿಂಹರಾಜಪುರ, ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳ ರೈತರೇ ಹೆಚ್ಚಾಗಿ ಬಂದಿದ್ದು ಬಹುತೇಕರು ಅರಣ್ಯ ಇಲಾಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. 94 ಸಿ ಅಡಿ ಜಾಗ ಮಂಜೂರಾಗಿದ್ದರೂ ಇಲಾಖೆ ಒಪ್ಪಿಗೆ ನೀಡುತ್ತಿಲ್ಲ. ಸಾಗುವಳಿ ಮಾಡದ ಭೂಮಿ ಈಗ ಅರಣ್ಯ ಇಲಾಖೆ ತಮ್ಮ ಜಾಗ ಎನ್ನುತ್ತಿದ್ದಾರೆ. ಜಮೀನಿನ ಪೋಡಿ ಆಗಿಲ್ಲ. ಜಮೀನಿಗಳಿಗೆ ಹೋಗಲು ದಾರಿ ಇಲ್ಲ ಮುಂತಾದ ಸಮಸ್ಯೆ ಹೇಳಿಕೊಂಡರು. ಸಚಿವ ಜಾರ್ಜ್‌ ಮಾತನಾಡಿ, ಜಂಟಿ ಸರ್ವೆ ಆಗಬೇಕಾಗಿದೆ. ಅರಣ್ಯ- ಕಂದಾಯ ಇಲಾಖೆ ಅಧಿಕಾರಿ ಗಳೊಂದಿಗೆ ಚರ್ಚೆ ನಡೆಸುತ್ತೇನೆ. ಡೀಮ್ಡ್ ಫಾರೆಸ್ಟ್‌ ಜಾಗದ ಸಮಸ್ಯೆ ಬಗೆ ಹರಿಯಬೇಕು. ಜಂಟಿ ಸರ್ವೆ ಆಗುವವರೆಗೆ ಯಾರ ಜಾಗವನ್ನು ಬಿಡಿಸುವುದಿಲ್ಲ ಎಂದು ಭರವಸೆ ನೀಡಿದರು. ---ಬಾಕ್ಸ್‌ --- 255 ಅರ್ಜಿ ಸಲ್ಲಿಕೆ ಜಿಲ್ಲಾ ಜನತಾ ದರ್ಶನದಲ್ಲಿ ನರಸಿಂಹರಾಜಪುರ ತಾಲೂಕಿನಿಂದಲೇ ಒಟ್ಟು 211 ಅರ್ಜಿಗಳು ಬಂದಿದೆ. ಕೊಪ್ಪ 24 , ಶೃಂಗೇರಿ 17,ಚಿಕ್ಕಮಗಳೂರು 1,ತರೀಕೆರೆಯಿಂದ 2 ಅರ್ಜಿ ಮಾತ್ರ ಬಂದಿದೆ.ಮೂಡಿಗೆರೆ,ಕಡೂರು ತಾಲೂಕಿನಿಂದ ಒಂದೂ ಅರ್ಜಿ ಬಂದಿಲ್ಲ. --ಬಾಕ್ಸ್‌ -- ಕಾಡು ಕೋಣ ದಾಳಿ: ಪರಿಹಾರ ಕಾಡು ಕೋಣ ದಾಳಿಗೆ ಗಾಯಗೊಂಡಿದ್ದ ಕೊಪ್ಪದ ಬಲಗಾರಿನ ಮೀನಾಕ್ಷಿ ಅವರಿಗಾಗಿ ಜನತಾ ದರ್ಶನ ದಲ್ಲಿ ಭದ್ರಾ ವೈಡ್‌ ಲೈಪ್‌ ಫೌಂಡೇಷನ್‌ನಿಂದ ಚಿಕಿತ್ಸೆಗಾಗಿ 1 ಲಕ್ಷ ಪರಿಹಾರದ ಚೆಕ್‌ ನ್ನು ಅವರ ಪುತ್ರನಿಗೆ ನೀಡಲಾಯಿತು. ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಶ್ರೀನಿವಾಸ್, ಮೂಡಿಗೆರೆ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮುಂತಾದವರು ಜನರ ಜೊತೆ ಕುಳಿತು ಜನತಾ ದರ್ಶನ ವೀಕ್ಷಿಸಿದರು. ಮೂಡಿಗೆರೆ,ತರೀಕೆರೆ, ಚಿಕ್ಕಮಗಳೂರು ಕ್ಷೇತ್ರದ ಶಾಸಕರು ಗೈರಾಗಿದ್ದರು.

Share this article