ಕನ್ನಡಪ್ರಭ ವಾರ್ತೆ ಹಾಸನ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ ೨೭ ಮತ್ತು ೨೮ರಂದು ಜಿಲ್ಲೆಯ ಬಿಜೆಪಿ ಮಂಡಲ ಮಟ್ಟದಲ್ಲಿ ಪ್ರತಿಭಟನೆಗಳು ಆರಂಭವಾಗಲಿದ್ದು, ಡಿಸೆಂಬರ್ ೨ರಂದು ಜಿಲ್ಲೆಯ ಎಲ್ಲಾ ಪ್ರಮುಖ ಕೇಂದ್ರಗಳಲ್ಲಿ ಸಮಗ್ರವಾಗಿ ಹೋರಾಟ ನಡೆಸಲಾಗುತ್ತದೆ. ಬೆಳಗಾವಿ ವಿಧಾನಮಂಡಲ ಅಧಿವೇಶನ ಡಿಸೆಂಬರ್ ೮ರಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಕೈಗೊಳ್ಳುವ ಪ್ರಶ್ನೆಯನ್ನೂ ಪಕ್ಷದ ರೈತ ಘಟಕ ಚರ್ಚೆ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ಅತಿವೃಷ್ಟಿಯಿಂದ ಲಕ್ಷಾಂತರ ಎಕರೆ ಕೃಷಿ ಭೂಮಿ ಹಾನಿಗೊಳಗಾಗಿದ್ದು, ಹಲವು ಬಾರಿ ಮನವಿ ಮಾಡಿದರೂ ಪರಿಹಾರ ವಿತರಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸಿದ್ದೇಶ್ ನಾಗೇಂದ್ರ ಆರೋಪಿಸಿದರು. ಹಾಸನ ಜಿಲ್ಲೆಯಲ್ಲೂ ಬಿಳಿ ಸುಳಿ ರೋಗದಿಂದ ಮೆಕ್ಕೆಜೋಳ ಬೆಳೆ ಹಾನಿಯಾಗಿದ್ದರೂ ಪರಿಹಾರ ವಿತರಣೆ ವಿಳಂಬವಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯದಾದ್ಯಂತ ಕಬ್ಬು ಬೆಳೆಗಾರರು ಬೆಂಬಲ ದರ ಹೆಚ್ಚಳಕ್ಕಾಗಿ ಹೋರಾಟ ಮಾಡಿದ್ದರೂ, ಸಮರ್ಪಕ ದರ ನಿಗದಿಯಲ್ಲಿ ಸರ್ಕಾರ ವಿಫಲವಾಗಿದೆ. ಇದಕ್ಕೂ ವಿರೋಧವಾಗಿ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರಿಗೆ ಯಾವುದೇ ನೇರ ನೆರವು ನೀಡಿಲ್ಲ ಎಂದು ಟೀಕಿಸಿದರು.
ಭಾಗ್ಯ ಯೋಜನೆಗಳ ರಾಜಕಾರಣ ಮಾಡುತ್ತಿರುವ ಸರ್ಕಾರ ರೈತ ಪರ ನೀತಿಗಳನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
ಜೊತೆಗೆ ಯಗಚಿ ಜಲಾಶಯಕ್ಕಾಗಿ ಭೂಮಿ ನೀಡಿದವರಿಗೆ ಇನ್ನೂ ನೀಡಬೇಕಿರುವ ?೩೫೦ ಕೋಟಿ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಲು ಬೇಡಿಕೆ ಇಟ್ಟರು.