ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಹಯೋಗದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಮೇಳದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಉದ್ಯೋಗ ಮೇಳದಲ್ಲಿ ಸುಮಾರು ೧೦೦ ಕಂಪನಿಗಳು ಭಾಗವಹಿಸಲಿದ್ದು, ಒಟ್ಟು ೧೦ ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಮೇಳದಲ್ಲಿ ಪಾಲ್ಗೊಳ್ಳಬಹುದು. ಅಭ್ಯರ್ಥಿಗಳಿಗೆ ನೇರ ಸಂದರ್ಶನದ ಅವಕಾಶ ಕಲ್ಪಿಸಲಾಗಿದ್ದು, ಅರ್ಹತೆಯಾಧಾರಿತವಾಗಿ ಸ್ಥಳದಲ್ಲಿಯೇ ನೇಮಕಾತಿ ಆದೇಶ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತಾ ಅಂಕಪಟ್ಟಿಗಳು, ಆಧಾರ್ ಕಾರ್ಡ್ ಹಾಗೂ ಸ್ವವಿವರಗಳೊಂದಿಗೆ ಮೇಳಕ್ಕೆ ಹಾಜರಾಗಬಹುದು. ಆನ್‌ಲೈನ್ ಮೂಲಕ ಮುಂಚಿತವಾಗಿ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆಯೂ ಕಲ್ಪಿಸಲಾಗಿದೆ. ಬೆಳಗ್ಗೆ ೯ರಿಂದ ಸಂಜೆ ೫ರವರೆಗೆ ನೋಂದಣಿ ಕೌಂಟರ್‌ಗಳು ಕಾರ್ಯನಿರ್ವಹಿಸಲಿವೆ. ಅಕ್ಕಪಕ್ಕದ ಜಿಲ್ಲೆಗಳ ಅಭ್ಯರ್ಥಿಗಳಿಗೂ ಭಾಗವಹಿಸಲು ಅವಕಾಶವಿದೆ. ಮೇಳಕ್ಕೆ ಆಗಮಿಸುವ ಅಭ್ಯರ್ಥಿಗಳಿಗೆ ಊಟ, ಕುಡಿಯುವ ನೀರು ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದರು.ಇದೇ ವೇಳೆ ಕೃಷಿ ವಿಷಯವಾಗಿ ಮಾತನಾಡಿದ ಜಿಲ್ಲಾಧಿಕಾರಿ, ಕಳೆದ ವರ್ಷ ಜಿಲ್ಲೆಯಲ್ಲಿ ಮುಸುಕಿನ ಜೋಳಕ್ಕೆ ಬಿಳಿಸುಳಿ ರೋಗ ಹೆಚ್ಚಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಬಿತ್ತನೆಗೂ ಮುನ್ನ ಏಪ್ರಿಲ್, ಮೇ ತಿಂಗಳಲ್ಲಿ ಆಳವಾದ ಉಳುಮೆ ಮಾಡಬೇಕು. ರೋಗ ಕಂಡುಬಂದ ಜಾಗದಲ್ಲಿ ಮುಸುಕಿನ ಜೋಳದ ಬದಲು ತೊಗರಿ, ಅಲಸಂದೆ, ಉದ್ದು, ಅವರೆ, ನೆಲಗಡಲೆ ಮುಂತಾದ ದ್ವಿದಳ ಧಾನ್ಯಗಳನ್ನು ಬೆಳೆಯುವುದು ಸೂಕ್ತ ಎಂದು ತಿಳಿಸಿದರು.೨೦೨೫-೨೬ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು ೨೬ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರಸ್ತುತ ೨೪ ಕೇಂದ್ರಗಳ ಮೂಲಕ ರಾಗಿ ಖರೀದಿ ನಡೆಯುತ್ತಿದೆ. ಸಕಲೇಶಪುರ ಹಾಗೂ ಆಲೂರು ತಾಲೂಕುಗಳಲ್ಲಿ ರೈತರ ನೋಂದಣಿ ಇನ್ನೂ ಕಡಿಮೆಯಿದೆ ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ೪೬,೨೫೮ ರೈತರು ನೋಂದಾಯಿಸಿಕೊಂಡಿದ್ದು, ೧೦ ಲಕ್ಷ ೮೫ ಸಾವಿರ ಕ್ವಿಂಟಲ್ ರಾಗಿ ಖರೀದಿಗೆ ನೋಂದಣಿ ಮಾಡಲಾಗಿದೆ. ರೈತರಿಗೆ ಅವರ ಜೇಷ್ಟತೆಯ ಆಧಾರದ ಮೇಲೆ ಎರಡು ದಿನ ಮುಂಚಿತವಾಗಿ ಖರೀದಿ ಕೇಂದ್ರಗಳಿಂದ ದೂರವಾಣಿ ಕರೆ ಮೂಲಕ ಮಾಹಿತಿ ನೀಡಲಾಗುತ್ತಿದ್ದು, ಕರೆ ಬಂದ ರೈತರು ಮಾತ್ರ ರಾಗಿ ತರಬೇಕು ಎಂದು ಸೂಚಿಸಿದರು.