ಹಿರೇಕೆರೂರು: ಸರ್ವಜ್ಞನ ನಾಡು ಹಿರೇಕೆರೂರಲ್ಲಿ ಹಾವೇರಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಶುರುವಾಗಿದೆ. ಹಿರೇಕೆರೂರು ಪಟ್ಟಣ ಸಮ್ಮೇಳನದ ಆತಿಥ್ಯ ವಹಿಸಿದ್ದು, ಅತಿಥಿ ಸತ್ಕಾರಕ್ಕೆ ಎಲ್ಲ ರೀತಿಯಿಂದಲೂ ಸಜ್ಜಾಗಿದೆ.
ಸಮ್ಮೇಳನಾಧ್ಯಕ್ಷರ ಮೆರವಣಿಗೆ:
ಪಟ್ಟಣದ ಬಿ.ಜಿ. ಶಂಕರರಾವ್ ವೃತ್ತದಿಂದ ಶುಕ್ರವಾರ ಬೆಳಗ್ಗೆ 8.30ಕ್ಕೆ ಸಮ್ಮೇಳನಾಧ್ಯಕ್ಷೆ ಸಂಕಮ್ಮ ಸಂಕಮ್ಮನವರ ಅವರ ಮೆರವಣಿಗೆಯೊಂದಿಗೆ ನುಡಿಹಬ್ಬಕ್ಕೆ ವಿಧ್ಯುಕ್ತ ಚಾಲನೆ ಸಿಗಲಿದೆ. ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ ಸಮ್ಮೇಳನ ಉದ್ಘಾಟಿಸಲಿದ್ದಾರೆ.ಕಲಾವೈಭವ ಅನಾವರಣ: ಮೆರವಣಿಗೆಯಲ್ಲಿ ನಾಡಿನ ಸಾಂಸ್ಕೃತಿಕ ಕಲಾವೈಭವ ಅನಾವರಣಗೊಳ್ಳಲಿದೆ. ವಿವಿಧ ಜಿಲ್ಲೆಗಳಿಂದ ಕಲಾ ತಂಡಗಳು ಆಗಮಿಸಲಿದ್ದು, ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಮಾಜಿ ಸೈನಿಕರು ಸೈನಿಕ ಧರಿಸಿನೊಂದಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆಗೆ ಮೆರುಗು ನೀಡಲಿದ್ದಾರೆ.
ಪುಸ್ತಕ ಮಳಿಗೆ: ಸಮ್ಮೇಳನಕ್ಕೆ ಆಗಮಿಸುವ ಪುಸ್ತಕ, ಸಾಹಿತ್ಯಾಭಿಮಾನಿಗಳಿಗಾಗಿಯೇ ಪುಸ್ತಕ ಮಳಿಗೆಗಳು ತಲೆ ಎತ್ತಿವೆ. ಹುಬ್ಬಳ್ಳಿ, ಬೆಳಗಾವಿ, ವಿಜಯಪುರ ಸಹಿತ ನಾನಾ ಭಾಗದ ಸಾಕಷ್ಟು ಪ್ರಕಾಶಕರು ಮಳಿಗೆಗಳನ್ನು ತೆರೆದಿದ್ದಾರೆ. ಈ ಮಳಿಗೆಗಳಲ್ಲಿ ಸುಪ್ರಸಿದ್ಧ ಸಾಹಿತಿಗಳು, ಖ್ಯಾತನಾಮ ಲೇಖಕರ ಪುಸ್ತಕಗಳು ದೊರೆಯಲಿವೆ. ಜತೆಗೆ ವಸ್ತುಪ್ರದರ್ಶನ ಮಳಿಗೆಗಳು, ವಾಣಿಜ್ಯ ಮಳಿಗೆಗಳು ತೆರೆದುಕೊಂಡಿವೆ. ಪುಸ್ತಕ ಮಾರಾಟಗಾರರು, ಪ್ರಕಾಶಕರು ಗುರುವಾರ ಸಂಜೆ ಸಮ್ಮೇಳನ ಸ್ಥಳಕ್ಕೆ ಆಗಮಿಸಿ ತಮ್ಮ ಮಳಿಗೆಗಳಲ್ಲಿ ಪುಸ್ತಕ ಜೋಡಿಸುತ್ತಿದ್ದ ದೃಶ್ಯ ಕಂಡು ಬಂತು.ಅಲಂಕಾರ: ನಗರದಲ್ಲಿ ದಸರಾ ಮಾದರಿಯಲ್ಲಿ ದೀಪಾಲಂಕಾರ ಮಾಡಲಾಗಿದ್ದು, 2 ದಿನಗಳ ಕಾಲ ಹಿರೇಕೆರೂರು ಪಟ್ಟಣ ಝಗಮಗಿಸಲಿದೆ. ಜತೆಗೆ ಸಮ್ಮೇಳಕ್ಕೆ ಆಗಮಿಸುವ ಅತಿಥಿಗಳ ಸ್ವಾಗತ ಕೋರುವ ಬ್ಯಾನರ್ ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ.
ಅತಿಥಿ ಸತ್ಕಾರಕ್ಕೆ ಸಜ್ಜು:ಸಮ್ಮೇಳನಕ್ಕೆ ಆಗಮಿಸಿದ ಅತಿಥಿಗಳಿಗೆ ಊಟದ ಸಿದ್ಧತೆ ಮಾಡಲಾಗಿದ್ದು, ಜನಸಾಮಾನ್ಯರಿಗಾಗಿ ಊಟದ ಕೌಂಟರ್ ಗಣ್ಯರು, ಅತಿಮುಖ್ಯ ಗಣ್ಯರಿಗೆ ಪ್ರತ್ಯೇಕವಾಗಿ ಊಟ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಮತ್ತು ರಾತ್ರಿ ಭೋಜನವಿರಲಿದೆ. ಸಂಜೆ ಟೀ-ಕಾಫಿ ಜತೆಗೆ ಲಘು ಉಪಾಹಾರ ವ್ಯವಸ್ಥೆ ಸಹ ಮಾಡಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.ಕರ್ನಾಟಕದ ಭಾಷೆ, ಗಡಿ, ಮಾಧ್ಯಮ, ತಂತ್ರಜ್ಞಾನ, ಮಹಿಳೆಯರ, ಸಾಹಿತ್ಯ ಒಳಗೊಂಡ ಹಲವು ವಿಚಾರಗಳ ಕುರಿತು ಚರ್ಚೆ, ಸಂವಾದ, ಹೊಸ ವಿಚಾರಗಳಿಗೆ ಸಮ್ಮೇಳನ ವೇದಿಕೆಯಾಗಲಿದೆ.