ಕನ್ನಡಪ್ರಭ ವಾರ್ತೆ ತುಮಕೂರುತುಮಕೂರು ಮಹಾನಗರ ಪಾಲಿಕೆಯ ವಿವಿಧ ಅನುದಾನಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಿರುವ ಸ್ಥಳಗಳನ್ನು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಭಾನುವಾರ ಪರಿಶೀಲಿಸಿದರು.ನಗರದ ಕ್ಯಾತ್ಸಂದ್ರ ಸಾರ್ವಜನಿಕ ಸ್ಮಶಾನದಲ್ಲಿ ಗ್ಯಾಸ್ ಫರ್ನಸ್ ಚಿತಾಗಾರ ನಿರ್ಮಾಣ, ಶಿರಾ ಗೇಟ್ ಎಚ್‌ಎಂಎಸ್ ಶಾಲೆಯ ಬಳಿ ಪಾಲಿಕೆ ನೌಕರರ ಸಮುದಾಯ ಭವನ ಕಾಮಗಾರಿ, ದಿಬ್ಬೂರಿನಲ್ಲಿ ಪಾಲಿಕೆ ನೌಕರರಿಗೆ ವಸತಿ ಸಮುಚ್ಛಯ ನಿರ್ಮಾಣ ಕಾಮಗಾರಿ, ನಗರದ ಪ್ರಮುಖ ರಾಜಗಾಲುವೆಗಳಿಗೆ ಫೆನ್ಸಿಂಗ್ ಅಳವಡಿಸುವ ಕಾಮಗಾರಿಗಳನ್ನು ಪಾಲಿಕೆಯಿಂದ ಕೈಗೊಳ್ಳಲು ಉದ್ದೇಶಿಸಿದ್ದು ಭಾನುವಾರ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದರು.ನಂತರ ಮಹಾನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿ ವಿವಿಧ ಅಭಿವೃದ್ದಿ ಕಾಮಗಾರಿಗಳು ಮತ್ತು ಕಂದಾಯ ಶಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಈ ಹಿಂದೆ ನವೆಂಬರ್ 18ರಂದು ಇ-ಆಸ್ತಿ ಪ್ರಗತಿಯನ್ನು ಪರಿಶೀಲಿಸಲು ಭೇಟಿ ನೀಡಿದ್ದ ಸಂದರ್ಭದಲ್ಲಿ ಇ-ಆಸ್ತಿ ಅನುಮೋದನೆಗಾಗಿ 3100 ಅರ್ಜಿಗಳು ಬಾಕಿ ಇದ್ದುದನ್ನು ಗಮನಿಸಿ ಶೀಘ್ರ ವಿಲೇವಾರಿ ಮಾಡಲು ನಿರ್ದೇಶನ ನೀಡಿದ್ದರಿಂದ 1746 ಅರ್ಜಿಗಳನ್ನು ವಿಲೇಪಡಿಸಿದ್ದು ಪ್ರಸ್ತುತ ಬಾಕಿ ಇರುವ ೧೩೫೪ ಅರ್ಜಿಗಳನ್ನು ತುರ್ತಾಗಿ ವಿಲೇವಾರಿ ಮಾಡಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದರು.ಈ ಸಂದರ್ಭದಲ್ಲಿ ಪಾಲಿಕೆಯ ಆಯುಕ್ತ ಯೋಗಾನಂದ್, ಪಾಲಿಕೆಯ ಕಾರ್ಯಪಾಲಕ ಅಭಿಯಂತರ ವಿನಯ್ ಕುಮಾರ್ ಹಾಗೂ ಪಾಲಿಕೆಯ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.