ಬಿಜೆಪಿ, ಕಾಂಗ್ರೆಸ್‌ನಿಂದ ಜಿಲ್ಲಾ ಮರಾಠಾಗರ ಕಡೆಗಣನೆ

KannadaprabhaNewsNetwork | Published : Mar 23, 2024 1:15 AM

ಸಾರಾಂಶ

ಹುಮನಾಬಾದ ಪಟ್ಟಣದ ಪದ್ಮಾಕರ ಪಾಟೀಲ್ರ ನಿವಾಸದಲ್ಲಿ ಮರಾಠಾ ಸಮಾಜದ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಹುಮನಾಬಾದ್

ಜಿಲ್ಲೆಯ ಮಾರಾಠಾ ಸಮುದಾಯಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳು ರಾಜಕೀಯ ಪ್ರಾಶಸ್ತ್ಯ ನೀಡದೇ ಕೇವಲ ವೋಟ್‌ ಬ್ಯಾಂಕ ಆಗಿ ಬಳಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮರಾಠಾ ಸಮುದಾಯದ ಶಕ್ತಿ ಪ್ರದರ್ಶನ ತೋರಿಸುವುದು ಅವಶ್ಯಕವಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪದ್ಮಾಕರ ಪಾಟೀಲ್ ತಿಳಿಸಿದರು.

ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಗುರುವಾರ ಕರೆದ ಕ್ಷತ್ರಿಯ ಮರಾಠಾ ಸಮುದಾಯ ತಾಲೂಕು ಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕಳೆದ ಅನೇಕ ವರ್ಷಗಳಿಂದ ಸಾಮಾಜಿಕವಾಗಿ ನಿಷ್ಠಾವಂತ ಕಾರ್ಯಕರ್ತರಾಗಿ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಪಕ್ಷಕ್ಕಾಗಿ ದುಡಿದವರನ್ನೇ ಗುರುತಿಸದೇ ರಾಜಕೀಯವಾಗಿ ತುಳಿಯಲಾಗುತ್ತಿದೆ.

ಇನ್ನೂ 2016ರಿಂದ ಮರಾಠ ಸಮಾಜವನ್ನು 3ಬಿಯಿಂದ 2ಎಗೆ ಹಿಂದುಳಿದ ವರ್ಗಕ್ಕೆ ಸೇರ್ಪಡೆ ಕುರಿತು ಲೋಕಸಭಾ ಕ್ಷೇತ್ರಗಳಲ್ಲಿ ಮರಾಠಾ ಸಮಾಜದವರಿಗೆ ಟಿಕೆಟ್ ನೀಡುವುದು, ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದ ಅವರು ಮುಂದಿನ ದಿನಗಳಲ್ಲಿ ಸಮಾಜದ ಜನರೆಲ್ಲ ಸಂಘಟಿತರಾಗಿ ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಬೇಕಾಗಿದೆ ಎಂದು ಸಮುದಾಯಕ್ಕೆ ಕರೆ ನೀಡಿದರು.

ಈ ಸಂದರ್ಭದಲ್ಲಿ ನೋಟಾಗೆ ವೋಟ್‌ ನೀಡುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸುವಂತೆ, ತಾಲೂಕು ಮಟ್ಟದಲ್ಲಿ ಒಬ್ಬ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕೆ ನಿಲ್ಲಿಸುವಂತೆ, ಚುನಾವಣೆ ಬಹಿಷ್ಕಾರ ಸೇರಿದಂತೆ ಮುಂಬರುವ ದಿನಗಳಲ್ಲಿ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

ಘಾಟಬೋರಳ ಪಿಕೆಪಿಎಸ್ ಅಧ್ಯಕ್ಷ ಸಂಭಾಜಿ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಮರಾಠಾ ಸಮಾಜದ ಪ್ರಭಾವ ಹೆಚ್ಚಾಗಿದ್ದರೂ ರಾಜಕೀಯವಾಗಿ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸುತ್ತಲೇ ಬಂದಿದ್ದರೂ ಪ್ರಾತಿನಿಧ್ಯ ಸಿಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿ, ಎಲ್ಲರೂ ಒಗ್ಗಟ್ಟಾಗಿ ಪಕ್ಷಾತೀತವಾಗಿ ಹೋರಾಡೋಣ. ಸಮಾಜಕ್ಕೆ ಸಿಗಬೇಕಾಗಿರುವ ನ್ಯಾಯ ದೊರಕುತ್ತದೆ ಎಂದು ತಿಳಿಸಿದರು.

ಜ್ಞಾನೇಶ್ವರ ಭೋಸ್ಲೆ ಮಾತನಾಡಿ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಮಾಜದವರಿಗೆ ಸೂಕ್ತ ಸ್ಥಾನಮಾನ ದೊರೆತಿಲ್ಲ. ಚುನಾವಣೆ ಸಂದರ್ಭದಲ್ಲಿ ಮತ ಹಾಕಲು ಬಳಸಿಕೊಳ್ಳುವ ಪಕ್ಷಗಳು ನಂತರ ಸಮಾಜದವರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.

ರವಿ ಘವಾಳಕರ, ಪರಮೇಶ್ವರ ಪಾಟೀಲ್ ಮಾತನಾಡಿ, ರಾಜಕೀಯ ಪಕ್ಷಗಳ ನಿರ್ಣಾಯಕ ಸ್ಥಾನದಲ್ಲಿರುವ ಜಿಲ್ಲೆಯಲ್ಲಿ ಕ್ಷತ್ರಿಯ ಮರಾಠಾ ಸಮಾಜ ಸಂಘಟಿತರಾದರೆ ಮಾತ್ರ ನಮ್ಮಗೆ ನಮ್ಮ ಹಕ್ಕು ಸಿಗಲಿದೆ ಇದಕ್ಕೆ ಪ್ರತಿ ತಾಲೂಕಿನಲ್ಲಿ ಸಭೆ ನಡೆಸುವ ಮೂಲಕ ಅಂತಿಮ ತಿರ್ಮಾನ ತೆಗೆದುಕೊಳ್ಳುವುದು ಸೂಕ್ತ ಎಂದು ತಮ್ಮ ಸಲಹೆ ನೀಡಿದರು.

ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅನೀಲ ಭೂಸಾರೆ, ಬಾಬುರಾವ ಕಾರಬಾರಿ, ಡಾ.ದಿನಕರ ಮೊರೆ, ದಿಗಂಬರಾವ ಪಾಟೀಲ್ ಚಾಂದೂರಿ, ಅಭಿಮನ್ಯು ನಿರಗುಡೆ, ದೇವಾನಂದ ಘವಾಳಕರ, ರಂಜೀತ ಮಾನಕರೆ, ರಾಮರಾವ ಸೇಡೋಳ, ಗುಂಡೆರಾವ ಸಾಟೆ, ರಾಮರಾವ ಖರೊರೆ ಸೇರಿದಂತೆ ಅನೇಕರಿದ್ದರು.

Share this article