
ಕನ್ನಡಪ್ರಭ ವಾರ್ತೆ ಕಾರವಾರ
ಜಿಲ್ಲೆಯ ಹಿರಿಯ ಶಾಸಕರಾದ ಆರ್.ವಿ. ದೇಶಪಾಂಡೆ, ಇದುವರೆಗೆ ಸಚಿವರಾಗಿದ್ದ ಮಂಕಾಳ ವೈದ್ಯ ಹಾಗೂ ಸತೀಶ ಸೈಲ್ ಸಚಿವ ಸ್ಥಾನಕ್ಕಾಗಿ ಭಾರಿ ಪೈಪೋಟಿ ನಡೆಸುತ್ತಿದ್ದಾರೆ. ಇವರಲ್ಲಿ ಈ ಹಿಂದಿನ ಸರ್ಕಾರದಲ್ಲಿ ಆರ್.ವಿ. ದೇಶಪಾಂಡೆ ಮಾತ್ರ ಪ್ರಭಾವಿ ಖಾತೆಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಮಂಕಾಳ ವೈದ್ಯ ಮೀನುಗಾರಿಕೆ ಖಾತೆಯನ್ನು ನಿರ್ವಹಿಸಿದ್ದಾರೆ. ಡಿ.ಕೆ. ಶಿವಕುಮಾರ್ ಸಂಪುಟಕ್ಕೆ ಆರ್.ವಿ. ದೇಶಪಾಂಡೆ ಸೇರ್ಪಡೆಯಾಗುವುದಾದರೆ ಮೊದಲ ಹಂತದಲ್ಲೇ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಏಕೆಂದರೆ ಹಿಂದೆಲ್ಲ ಮೊದಲ ಹಂತದ ಸಂಪುಟ ರಚನೆಯಲ್ಲೇ ಆರ್.ವಿ. ದೇಶಪಾಂಡೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದರು. ಆದರೆ ಈ ಬಾರಿ ಮೊದಲ ಹಂತದಲ್ಲಿ ಜಿಲ್ಲೆಯ ಯಾವ ಶಾಸಕರಿಗೂ ಸಚಿವ ಸ್ಥಾನ ಸಿಕ್ಕಿಲ್ಲ.ಈಗ ಎರಡನೇ ಹಂತದಲ್ಲಿ ಅಂದರೆ ಸಂಪುಟ ವಿಸ್ತರಣೆಯಲ್ಲಿ ಸಂಪುಟಕ್ಕೆ ಸೇರಲು ಜಿಲ್ಲೆಯ ಶಾಸಕರು ಚುರುಕಿನ ಪ್ರಯತ್ನ ನಡೆಸುತ್ತಿದ್ದಾರೆ. ಆರ್.ವಿ. ದೇಶಪಾಂಡೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ನೆಚ್ಚಿದ್ದರೆ, ಮಂಕಾಳ ವೈದ್ಯ ಹಾಗೂ ಸತೀಶ ಸೈಲ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅನುಗ್ರಹಕ್ಕಾಗಿ ಕಾದು ಕುಳಿತಿದ್ದಾರೆ. ಇವರಿಬ್ಬರಲ್ಲಿ ಸಮನ್ವಯ ಮೂಡಿಸಲು ಡಿ.ಕೆ. ಶಿವಕುಮಾರ್ ಮಾತುಕತೆ ನಡೆಸಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಈ ಮೂವರೂ ತಮ್ಮ ತಮ್ಮ ನಾಯಕರಷ್ಟೇ ಅಲ್ಲದೆ ಬೇರೆ ಬೇರೆ ಮೂಲಗಳಿಂದ ಹೈಕಮಾಂಡ್ ತನಕ ತಲುಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೊದಲ ಹಂತದ ಸಂಪುಟ ರಚನೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇಲ್ಲ ಎಂದು ಕನ್ನಡಪ್ರಭ ಬುಧವಾರ ವರದಿ ಪ್ರಕಟಿಸಿತ್ತು. ಅದೀಗ ನಿಜವಾಗಿದೆ.ಬಸ್ ನಿಲ್ದಾಣದಲ್ಲಿ ಮುಖ್ಯಮಂತ್ರಿಗಳ ಪ್ರಮಾಣ ವಚನದ ನೇರ ಪ್ರಸಾರಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾರ್ಯಕ್ರಮದ ನೇರ ಪ್ರಸಾರವನ್ನು, ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿ ಎಲ್‌ಇಡಿ ಪರದೆ ಮೇಲೆ ಪ್ರಯಾಣಿಕರು ವೀಕ್ಷಿಸುವ ಮೂಲಕ ಸಂತಸಪಟ್ಟರು.ರಾಜ್ಯದ ಜನತೆಗೆ ಈ ಮಹತ್ವದ ಕಾರ್ಯಕ್ರಮವನ್ನು ತಲುಪಿಸುವ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ‘ವೃತ್ತಿ ಸೊಲ್ಯೂಷನ್ಸ್ ಲಿಮಿಟೆಡ್’ ಸಂಸ್ಥೆಯ ಸಹಯೋಗದಲ್ಲಿ ವಿಶೇಷ ವ್ಯವಸ್ಥೆ ಮಾಡಿದ್ದು, ರಾಜ್ಯಾದ್ಯಂತ ಇರುವ ಪ್ರಮುಖ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ ಡಿಜಿಟಲ್ ಡಿಸ್‌ಪ್ಲೇ ಪರದೆಗಳ ಮೂಲಕ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂಪೂರ್ಣ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಯಿತು.ಕಾರವಾರದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ನೇರ ಪ್ರಸಾರವನ್ನು ವೀಕ್ಷಿಸಿ, ಈ ಕಾರ್ಯಕ್ರಮ ಆಯೋಜನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು ಎಂದು ಕಾರವಾರ ಘಟಕದ ವ್ಯವಸ್ಥಾಪಕಿ ಸೌಮ್ಯ ತಿಳಿಸಿದರು.