ಕನ್ನಡಪ್ರಭ ವಾರ್ತೆ ಕುಶಾಲನಗರ
ಪ್ರವಾಹ, ಪ್ರಕೃತಿ ವಿಕೋಪ ಸಂದರ್ಭ ನಾಗರಿಕರನ್ನು ರಕ್ಷಣೆ ಮಾಡುವ ಸಂಬಂಧ ಕೊಡಗು ಜಿಲ್ಲಾ ಪೊಲೀಸ್ ಸನ್ನದ್ಧವಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ತಿಳಿಸಿದ್ದಾರೆ.ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಕುಶಾಲನಗರ ಸಮೀಪ ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಹಲವು ರೀತಿಯ ಅಣಕು ಕಾರ್ಯಕ್ರಮ ಮತ್ತು ಪ್ರಾತ್ಯಕ್ಷಿಕೆಗಳ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಂಬರುವ ಮುಂಗಾರು ಮಳೆಗಾಲದ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಕಡೆ ನೆರೆ ಹಾವಳಿ ಅಥವಾ ಪ್ರಕೃತಿ ವಿಕೋಪಗಳು ಸಂಭವಿಸಿದಲ್ಲಿ ತಕ್ಷಣ ಸಾರ್ವಜನಿಕರ ಸಹಾಯಕ್ಕೆ ಧಾವಿಸಲು ಜಿಲ್ಲಾ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ತಿಳಿಸಿದ್ದಾರೆ.ಜಿಲ್ಲೆಯ ಮೂರು ಉಪ ವಿಭಾಗ ಮತ್ತು ಡಿಎಆರ್ ವಿಭಾಗದಿಂದ ತಲಾ 15 ಸಿಬ್ಬಂದಿ ಒಳಗೊಂಡಂತೆ ನಾಲ್ಕು 20 ನಿರ್ವಹಣಾ ತಂಡವನ್ನು ರಚಿಸಲಾಗಿದೆ. ಸ್ಥಳಕ್ಕೆ ಎನ್ ಡಿ ಆರ್ ಎಫ್ ತಂಡ ತಲಪುವ ಮುನ್ನ ಸ್ಥಳೀಯ ಪೊಲೀಸರು ಎಲ್ಲ ರೀತಿಯಲ್ಲೂ ಸನ್ನದ್ಧರಾಗಿರುತ್ತಾರೆ ಎಂದ ರಾಮರಾಜನ್, ವಿಶೇಷ ಬೋಟ್ , ಅತ್ಯಾಧುನಿಕ ತಂತ್ರಜ್ಞಾನದ ಸಾಮಗ್ರಿಗಳನ್ನು ಈಗಾಗಲೇ ತರಿಸಲಾಗಿದೆ ಎಂದರು.
ಕಳೆದ ಬಾರಿ ಕೂಡ ಹಾರಂಗಿ ಜಲಾಶಯದಲ್ಲಿ ತರಬೇತು ನೀಡಲಾಗಿತ್ತು. ಜಲಾಶಯದಲ್ಲಿ ಸುಮಾರು 50 ರಿಂದ 60 ಅಡಿಗಳಷ್ಟು ನೀರಿನ ಆಳವಿರುವ ಪ್ರದೇಶದಲ್ಲಿ ಪೊಲೀಸರಿಗೆ ಈಜು ತರಬೇತಿ ನೀಡಲಾಗುತ್ತಿದೆ. ಜಿಲ್ಲಾ ಶಶಸ್ತ್ರದಳ ತಂಡದಲ್ಲಿ ಈಗಾಗಲೇ 25-30 ರಷ್ಟು ನುರಿತ ಈಜುಗಾರರು ಇರುವುದಾಗಿ ಅವರು ಎಸ್.ಪಿ. ರಾಮರಾಜನ್ ಹೇಳಿದರು.ಅಪಾಯದಲ್ಲಿರುವವರ ರಕ್ಷಣೆಗೆ ಪೊಲೀಸರು ಸಜ್ಜು: ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಅವರು ಈ ಸಂದರ್ಭ ಮಾತನಾಡಿ, ಯಾವುದೇ ಸಂದರ್ಭದಲ್ಲಿ ಕೊಡಗು ಜಿಲ್ಲಾ ಪೊಲೀಸ್ ತಂಡಗಳು ಮಳೆಗಾಲದ ತುರ್ತುಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿದ್ದಾರೆ. ಸಾರ್ವಜನಿಕರು ಮಾಹಿತಿ ನೀಡಿದ ತಕ್ಷಣ ಅದನ್ನು ಆಧರಿಸಿ ನಾಗರಿಕರ ಸಹಕಾರ ಪಡೆದು ಎಲ್ಲ ರೀತಿಯ ರಕ್ಷಣಾ ಕಾರ್ಯ ಮಾಡಲು ಈ ತರಬೇತು ಕಾರ್ಯಾಚರಣೆ ಸಹಕಾರಿಯಾಗಲಿದೆ ಎಂದರು.
ಧೈರ್ಯ ಆತ್ಮವಿಶ್ವಾಸ ತುಂಬಲು ತಂಡಕ್ಕೆ ನಿರಂತರ ತರಬೇತು ನೀಡಲಾಗಿದೆ ಎಂದು ಹೇಳಿದರು. ಜಿಲ್ಲೆಯ ಮೂರು ಉಪವಿಭಾಗಗಳ ಪೊಲೀಸ್ ಸಿಬ್ಬಂದಿ ತಂಡ ಮತ್ತು ಜಿಲ್ಲಾ ಪೊಲೀಸ್ ಸಶಸ್ತ್ರದಳದ ತಂಡ ದ 60ಕ್ಕೂ ಅಧಿಕ ಸಿಬ್ಬಂದಿಗಳು ತರಬೇತು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಕೆ. ರಾಜೇಶ್ ಕೋಟ್ಯಾನ್ ಮತ್ತು ಪೊಲೀಸ್ ಠಾಣಾಧಿಕಾರಿ, ಸಿಬ್ಬಂದಿ ಇದ್ದರು.