ಐದನೇ ಗ್ಯಾರಂಟಿ ಯುವನಿಧಿಗೆ ಜಿಲ್ಲೆಯಲ್ಲಿ ನೋಂದಣಿ ಅಭಿಯಾನ

KannadaprabhaNewsNetwork | Published : Jan 4, 2024 1:45 AM

ಸಾರಾಂಶ

ಇತ್ತೀಚಿನ 6 ತಿಂಗಳಿಗಿಂತ ಮೊದಲು ಪದವಿ ಉತ್ತೀರ್ಣ, ಡಿಪ್ಲೊಮಾ ಉತ್ತೀರ್ಣರಾದ ಯುವ ಪದವೀಧರರಿಗೆ ಮಾಸಿಕ 3 ಸಾವಿರ ಮತ್ತು ಡಿಪ್ಲೊಮಾ ಪಡೆದವರಿಗೆ ಮಾಸಿಕ 1500 ರು.ಗಳ ಯುವನಿಧಿ ನೀಡಲಾಗುತ್ತಿದೆ. ಈ ಯೋಜನೆಗೆ ಈಗಾಗಲೇ ನೊಂದಣಿ ಆರಂಭವಾಗಿದೆ.

ಪದವಿ, ಡಿಪ್ಲೊಮಾ ಉತೀರ್ಣರಾದವರಿಗೆ ಅವಕಾಶ, 12ರಂದು ಶಿವಮೊಗ್ಗದಲ್ಲಿ ಚಾಲನೆ: ಜಿಲ್ಲಾಧಿಕಾರಿ ಡಾ.ವೆಂಕಟೇಶ್

ಕನ್ನಡ ಪ್ರಭ ವಾರ್ತೆ ದಾವಣಗೆರೆ

ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಯುವನಿಧಿ ಯೋಜನೆಗೆ ಜ.12 ರಂದು ಶಿವಮೊಗ್ಗದಲ್ಲಿ ಚಾಲನೆಗೊಳ್ಳಲಿದ್ದು ಜಿಲ್ಲೆಯಲ್ಲಿ ಯುವನಿಧಿ ನೊಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಜಿಲ್ಲೆಯ ಎಲ್ಲಾ ತಾಲೂಕುಗಳ ತಹಸೀಲ್ದಾರರು ಮತ್ತು ಕಾಲೇಜು ಪ್ರಾಂಶುಪಾಲರೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿ ಇತ್ತೀಚಿನ 6 ತಿಂಗಳಿಗಿಂತ ಮೊದಲು ಪದವಿ ಉತ್ತೀರ್ಣ, ಡಿಪ್ಲೊಮಾ ಉತ್ತೀರ್ಣರಾದ ಯುವ ಪದವೀಧರರಿಗೆ ಮಾಸಿಕ 3 ಸಾವಿರ ಮತ್ತು ಡಿಪ್ಲೊಮಾ ಪಡೆದವರಿಗೆ ಮಾಸಿಕ 1500 ರು.ಗಳ ಯುವನಿಧಿ ನೀಡಲಾಗುತ್ತಿದೆ. ಈ ಯೋಜನೆಗೆ ಈಗಾಗಲೇ ನೊಂದಣಿ ಆರಂಭವಾಗಿದೆ. ಈವರೆಗೆ ಜಿಲ್ಲೆಯಲ್ಲಿ 500 ಜನರಿಗಿಂತ ಹೆಚ್ಚು ನೊಂದಣಿಯಾಗಿದ್ದು ಬರುವ ಜ.12 ರೊಳಗಾಗಿ 10 ಸಾವಿರ ಪದವಿ, ಡಿಪ್ಲೊಮಾ ಪಡೆದ ಯುವ ಜನರ ನೋಂದಣಿ ಮಾಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಡಿಬಿಟಿ ಮೂಲಕ ಯೋಜನೆಯ ಲಾಭ ಕಲ್ಪಿಸಲು ನೋಂದಣಿಗೆ ಅಭಿಯಾನ ಮಾಡಲಾಗುತ್ತಿದೆ ಎಂದರು.

ಯುವನಿಧಿ ನೊಂದಣಿಯನ್ನು ಗ್ರಾಮಾ ಒನ್, ಕರ್ನಾಟಕ ಒನ್ ಮತ್ತು ಸೇವಾಸಿಂಧೂ ಪೋರ್ಟಲ್‌ನಲ್ಲಿ ನೋಂದಣಿ ಮಾಡಬಹುದು. ಆದರೂ ಅಭಿಯಾನದ ಮೂಲಕ ಹೆಚ್ಚು ಜನರ ನೊಂದಣಿ ಮಾಡಲು ಹಾಗೂ ಯಾರು ಸಹ ಈ ಯೋಜನೆಯಿಂದ ಹೊರಗುಳಿಯಬಾರದೆಂದು ಎಲ್ಲಾ ತಾಲೂಕುಗಳ ತಹಸೀಲ್ದಾರ ಕಚೇರಿ, ತಾಪಂಚಾಯಿತಿಯಲ್ಲಿ ನೋಂದಣಿ ಅಭಿಯಾನ ಹೆಚ್ಚುವರಿಯಾಗಿ ಮಾಡಲಾಗುತ್ತದೆ. ಮತ್ತು ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ನಿವಾರಣೆಗಾಗಿ ದಾವಣಗೆರೆ ಪಾಲಿಕೆ ನಿಯಂತ್ರಣ ಕೊಠಡಿಯಲ್ಲಿ ಕಾಲ್ ಸೆಂಟರ್ ತೆರೆಯಲಾಗುತ್ತದೆ. ಮತ್ತು ಎಲ್ಲಾ ತಾಲ್ಲೂಕುಗಳಲ್ಲಿನ ತಾಲ್ಲೂಕು ಕಚೇರಿಯಲ್ಲಿ ಕಾಲ್ ಸೆಂಟರ್ ತಾತ್ಕಾಲಿಕವಾಗಿ ತೆರೆಯಲು ತಹಸೀಲ್ದಾರರಿಗೆ ಸೂಚನೆ ನೀಡಿದರು.

ನೋಡಲ್ ಅಧಿಕಾರಿಗಳ ನೇಮಕ :

ಯುವನಿಧಿ ಯೋಜನೆಗೆ ನೊಂದಣಿ ಮಾಡಿಸಲು ಎಲ್ಲಾ ತಾಲೂಕುಗಳಿಗೆ ನೋಡಲ್ ಅಧಿಕಾರಿಗಳ ನೇಮಿಸುತ್ತಿದ್ದು ಎಲ್ಲಾ ಕಾಲೇಜುಗಳಲ್ಲಿಯು ಅಭಿಯಾನ ಮಾಡಿ ಯುವಕರಿಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಶಿವಮೊಗ್ಗಕ್ಕೆ 10 ಸಾವಿರ ಯುವನಿಧಿ ಫಲಾನುಭವಿಗಳು :

ಯುವನಿಧಿ ಯೋಜನೆಗೆ ಜನವರಿ 12 ರಂದು ಶಿವಮೊಗ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ಚಾಲನೆ ನೀಡುವ ಮೂಲಕ ನೊಂದಣಿಯಾದವರಿಗೆ ನೇರವಾಗಿ ಡಿಬಿಟಿ ಮೂಲಕ ಮಾಸಿಕ ಶಿಷ್ಯವೇತನಕ್ಕೆ ಚಾಲನೆ ನೀಡಲಿದ್ದು ದಾವಣಗೆರೆ ಜಿಲ್ಲೆಯಿಂದ 10 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಭಾಗವಹಿಸಲು ಕಳುಹಿಸಿಕೊಡಲಾಗುತ್ತದೆ. ಇದಕ್ಕಾಗಿ ಎಲ್ಲಾ ತಾಲ್ಲೂಕುಗಳಿಂದ ಕರೆದುಕೊಂಡು ಹೋಗಿ ಬರಲು ವಾಹನದ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಅರ್ಜಿ ಹಾಕುವ ವಿಧಾನ :

ಸೇವಾಸಿಂಧೂ ಪೋರ್ಟಲ್‌ಗೆ ಹೋಗಿ ಮೆನುನಲ್ಲಿ ಕ್ಲಿಕ್ ಅಫ್ಲಿಕೇಷನ್ ಸರ್ವೀಸಸ್, ಎಲ್ಲಾ ಸೇವೆಗಳು ತೆರದುಕೊಳ್ಳುತ್ತವೆ, ಇಲ್ಲಿ ಯುವನಿಧಿ ಅರ್ಜಿ ಕ್ಲಿಕ್ ಮಾಡಬೇಕು, ನಂತರ ಅರ್ಜಿ ಪುಟ ತೆರದುಕೊಳ್ಳುತ್ತದೆ. ಇಲ್ಲಿ ವಿದ್ಯಾರ್ಥಿಯ ಸ್ವಯಂ ಘೋಷಣೆ ಯಸ್ ಅಥವಾ ನೋ ಇದರಲ್ಲಿ 6 ಅರ್ಹತೆಗಳ ಹೊಂದಿರಬೇಕು. ನಂತರ ಆಧಾರ್ ದೃಢೀಕರಣ ಮಾಡಬೇಕು, ಆಧಾರ್ ಮಾಹಿತಿ ಬಾಕ್ಸ್ ಚೆಕ್ ಮಾಡಿ, ನಂತರ ಓಟಿಪಿ ಜನರೇಟ್ ಮಾಡಬೇಕು ಶಿಕ್ಷಣದ ವಿವರ ದಾಖಲು ಮಾಡಬೇಕು ಇದು ಅರ್ಜಿ ನೊಂದಣಿಯ ವಿವಿಧ ಹಂತಗಳಾಗಿರುತ್ತವೆ.

ವೀಡಿಯೋ ಕಾನ್ಫರೆನ್ಸ್ನಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿಪಂ ಸಿಇಒ ಸುರೇಶ ಇಟ್ನಾಳ್, ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share this article