ಜಿಲ್ಲಾ ಮರಳು ಸಮಿತಿಗಳಿಂದಲೇ ಬ್ಲಾಕ್‌ ವಿಲೇಗೆ ಕ್ರಮ: ಗಣಿ ಸಚಿವ

KannadaprabhaNewsNetwork |  
Published : Dec 04, 2024, 12:32 AM IST
3ಕೆಡಿವಿಜಿ1, 2-ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ. | Kannada Prabha

ಸಾರಾಂಶ

ರಾಜ್ಯದಲ್ಲಿ ಮರಳಿನ ಅಭಾವ ತಪ್ಪಿಸಿ, ಜನರಿಗೆ ಸುಲಭವಾಗಿ ಮತ್ತು ಕೈಗೆಟುವ ದರದಲ್ಲಿ ಮರಳು ಸಿಗಲೆಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಮರಳು ನೀತಿ ಜಾರಿಗೊಳಿಸಿದೆ. ಬಜೆಟ್‌ನಲ್ಲಿ ಘೋಷಿಸಿದ್ದಂತೆ ಸಮಗ್ರ ಮರಳು ನೀತಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಷ್ಠಾನಗೊಳಿಸುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದ್ದಾರೆ.

- ಕೈಗೆಟುವ ದರದಲ್ಲಿ ಮರಳು ಪೂರೈಕೆಗೆ ಸರ್ಕಾರ ಬದ್ಧ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ ಮರಳಿನ ಅಭಾವ ತಪ್ಪಿಸಿ, ಜನರಿಗೆ ಸುಲಭವಾಗಿ ಮತ್ತು ಕೈಗೆಟುವ ದರದಲ್ಲಿ ಮರಳು ಸಿಗಲೆಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಮರಳು ನೀತಿ ಜಾರಿಗೊಳಿಸಿದೆ. ಬಜೆಟ್‌ನಲ್ಲಿ ಘೋಷಿಸಿದ್ದಂತೆ ಸಮಗ್ರ ಮರಳು ನೀತಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಷ್ಠಾನಗೊಳಿಸುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಸರ್ಕಾರದ ಮರಳು ನೀತಿಯಂತೆ ಈಗಾಗಲೇ ಸಾರ್ವಜನಿಕ ಹಾಗೂ ಸ್ಥಳೀಯ ಸರ್ಕಾರಿ ಕಾಮಗಾರಿಗಳಿಗೆ ನಿಗದಿತ ಕಡಿಮೆ ಬೆಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮರಳು ಪೂರೈಸಲು 1, 2 ಮತ್ತು 3ನೇ ಶ್ರೇಣಿಯ ಹಳ್ಳಗಳ ಪಾತ್ರಗಳಲ್ಲಿ ಲಭ್ಯವಿರುವ ಮರಳನ್ನು ತೆಗೆದು, ವಿಲೇವಾರಿ ಮಾಡುವ ಜವಾಬ್ದಾರಿ ಆಯಾ ಗ್ರಾಮ ಪಂಚಾಯಿಗಳಿಗೆ ವಹಿಸಿ, ಪ್ರತಿ ಮೆಟ್ರಿಕ್ ಟನ್‌ ಮರಳಿನ ಮಾರಾಟ ಬೆಲೆಯನ್ನು ₹300 ದರ ನಿಗದಿಪಡಿಸಿದೆ. ಈ ವ್ಯವಸ್ಥೆ ಪ್ರಸ್ತುತ ಜಾರಿಯಲ್ಲಿದೆ ಎಂದಿದ್ದಾರೆ.

ಮರಳಿನ ಅಭಾವ ತಪ್ಪಿಸಲು ಸಮಗ್ರ ಮರಳು ನೀತಿ ಜಾರಿಗೆ ತರಲಾಗಿದೆ. ಸುಲಭ ಮತ್ತು ಕೈಗೆಟುವ ದರದಲ್ಲಿ ಜನರಿಗೆ ಮರಳು ಪೂರೈಸಲು ಸರ್ಕಾರ ಬದ್ಧವಾಗಿದೆ. ಆಯಾ ಜಿಲ್ಲಾ ಮರಳು ಸಮಿತಿಗಳಿಂದಲೇ ಬ್ಲಾಕ್‌ ವಿಲೇಗೆ ಕ್ರಮ ಕೈಗೊಳ್ಳಲಾಗಿದೆ. 4, 5 ಹಾಗೂ ಉನ್ನತ ಶ್ರೇಣಿಗಳ ಹಳ್ಳ, ನದಿಗಳ ಪಾತ್ರಗಳಲ್ಲಿ ಲಭ್ಯವಿರುವ ಮರಳು ಬ್ಲಾಕ್‌ಗಳನ್ನು ಸರ್ಕಾರದಿಂದ ಅಧಿಸೂಚಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಸರ್ಕಾರಿ ಇಲಾಖೆಗಳಿಗೆ ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ರೀತಿ ಸಾರ್ವಜನಿಕ, ಖಾಸಗಿ ಸಂಸ್ಥೆಗಳಿಗೆ ಟೆಂಡರ್ ಮೂಲಕ ಮರಳು ಬ್ಲಾಕ್‌ಗಳನ್ನು ವಿಲೇಪಡಿಸುವ ನಿಯಮದಲ್ಲಿ ತಿದ್ದುಪಡಿ ಮಾಡಲಾಗಿದೆ. ನೂತನ ನೀತಿಯಂತೆ ಮರಳು ಬ್ಲಾಕ್‌ಗಳ ಟೆಂಡರನ್ನು ಆಯಾ ಜಿಲ್ಲಾ ಮರಳು ಸಮಿತಿಯಿಂದ ನಡೆಸಲಾಗುವುದು. ಜಿಲ್ಲಾವಾರು ಗುರುತಿಸಲಾಗುವ ಮರಳು ಬ್ಲಾಕ್‌ಗಳಿಗೆ ಪರಿಶಿಷ್ಟ ಜಾತಿ-ಪಂಗಡ, ಅಂಗವಿಕಲ ಹಾಗೂ ಇತರೆ ಸಾಮಾನ್ಯ ವರ್ಗದವರಿಗೆ ರೋಸ್ಟರ್ ಪದ್ಧತಿಯಡಿ ಮೀಸಲಾತಿ ಕಲ್ಪಿಸಲಾಗಿದೆ ಎಂದಿದ್ದಾರೆ.

ರಾಜ್ಯಾದ್ಯಂತ ಪ್ರತಿ ಮೆಟ್ರಿಕ್ ಟನ್ ಮರಳು ಏಕರೂಪದ ಮಾರಾಟ ದರ ₹850 ನಿಗದಿಪಡಿಸಲಾಗಿದೆ. ಸರ್ಕಾರ ನಿಗದಿಪಡಿಸುವ ಮಾರಾಟ ಬೆಲೆಯ ಮೊತ್ತದ ಶೇ.50ರಷ್ಟನ್ನು ಸೀಲಿಂಗ್‌ ಪ್ರೈಸ್ ಆಗಿ, ಸೀಲಿಂಗ್ ಪ್ರೈಸ್‌ನ ಶೇ.60ರಷ್ಟನ್ನು ಕಟ್ ಆಫ್ ಪ್ರೈಸ್ ಅಂತಾ ನಿಗದಿಪಡಿಸಿದೆ. ಸೀಲಿಂಗ್ ಪ್ರೈಸ್ ಮತ್ತು ಕಟ್ ಆಫ್‌ ಪ್ರೈಸ್‌ಗೆ ಸಮನಾದ ಅಥವಾ ನಡುವೆ ಸಲ್ಲಿಸುವ ಕಡಿಮೆ ಟೆಂಡರ್ ಮೊತ್ತವನ್ನು ನಮೂದಿಸಿದವರನ್ನು ಯಶಸ್ವಿ ಬಿಡ್‌ದಾರರೆಂದು ಪರಿಗಣಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಒಂದಕ್ಕಿಂತ ಹೆಚ್ಚು ಟೆಂಡರ್‌ದಾರರು ಏಕರೂಪ ಟೆಂಡರ್‌ ದರ ನಮೂದಿಸಿದ್ದರೆ ಲಾಟರಿ ಮೂಲಕ ಯಶಸ್ವಿ ಬಿಡ್‌ದಾರರನ್ನು ಆಯ್ಕೆ ಮಾಡಲಾಗುವುದು. ಟೆಂಡರ್ ಪ್ರಕ್ರಿಯೆಯನ್ನು ಇ-ಪೋರ್ಟಲ್‌ನಲ್ಲಿ ನಡೆಸಲಾಗುತ್ತಿದೆ. ಇ-ಪೋರ್ಟಲ್ ಮೂಲಕ ಆಸಕ್ತ ವ್ಯಕ್ತಿಗಳು, ಖಾಸಗಿ ಕಂಪನಿಗಳು, ಸಂಸ್ಥೆಯವರು ಅರ್ಜಿ ಸಲ್ಲಿಸಲು ಜಿಲ್ಲಾವಾರು ಅಧಿಸೂಚನೆ ಜಾರಿಗೊಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಇ-ಪೋರ್ಟಲ್‌ನಲ್ಲಿ ಟೆಂಡರ್ ಕರೆಯುವ ಬಗ್ಗೆ ಈಗಾಗಲೇ ಸರ್ಕಾರದಿಂದ ಮಾರ್ಗಸೂಚಿ ಮತ್ತು ಟೆಂಡರ್ ಡಾಕ್ಯುಮೆಂಟ್ ಎಲ್ಲ ಜಿಲ್ಲಾ ಕಚೇರಿಗಳಿಗೆ ನೀಡಲಾಗಿದೆ. ಸರ್ಕಾರ ಜಾರಿ ಮಾಡಿದ ಮರಳು ನೀತಿಯನ್ನು ಪರಿಣಾಮಕಾರಿಯಾಗಿ ಯಸಸ್ವಿಗೊಳಿಸಲು ನಿರ್ದೇಶಿಸಿದೆ. ಹೆಚ್ಚಿನ ಮಾಹಿತಿಗೆ ಆಯಾ ಜಿಲ್ಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿಗೆ ಸಂಪರ್ಕಿಸಲು ಅವರು ಕೋರಿದ್ದಾರೆ.

- - -

-3ಕೆಡಿವಿಜಿ1, 2.ಜೆಪಿಜಿ:

ಎಸ್.ಎಸ್.ಮಲ್ಲಿಕಾರ್ಜುನ, ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!