ಜಿಲ್ಲೆಯನ್ನು ಕ್ಷಯಮುಕ್ತ ಮಾಡೋಣ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

KannadaprabhaNewsNetwork | Published : Mar 28, 2025 12:32 AM

ಸಾರಾಂಶ

ಕ್ಷಯ ರೋಗ ನಿಯಂತ್ರಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದ್ದು, ಎಲ್ಲರೂ ಜೋಡಿಸಿ ಕ್ಷಯಮುಕ್ತ ಜಿಲ್ಲೆಯನ್ನಾಗಿ ಮಾಡೋಣ

ಕಾರವಾರ: ಕ್ಷಯ ರೋಗ ನಿಯಂತ್ರಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದ್ದು, ಎಲ್ಲರೂ ಜೋಡಿಸಿ ಕ್ಷಯಮುಕ್ತ ಜಿಲ್ಲೆಯನ್ನಾಗಿ ಮಾಡೋಣ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹೇಳಿದರು.

ಇಲ್ಲಿನ ಜಿಪಂ ಸಭಾಭವನದಲ್ಲಿ ನಡೆದ ವಿಶ್ವ ಕ್ಷಯರೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೋವಿಡ್ ಸಮಯದಲ್ಲಿ ಗ್ರಾಪಂಗಳಲ್ಲಿ ಅಧಿಕಾರಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ಹೆಲ್ತ್ ಟಾಸ್ಕ್ ಪೋರ್ಸ್ ಸಮಿತಿ ಮಾಡಲಾಗಿದೆ. ಈ ಟಾಸ್ಕ್ ಫೋರ್ಸ್ ಮೂಲಕ ಎಲ್ಲರೂ ಒಟ್ಟಾಗಿ ಸಾರ್ವಜನಿಕರಿಗೆ ಅರಿವು, ಜಾಗೃತಿ ಮೂಡಿಸಿ ಕೋವಿಡ್ ನಿಯಂತ್ರಣ ಮಾಡಲಾಗಿದೆ ಎಂದರು.ಕ್ಷಯರೋಗದ ನಿರ್ಮೂಲನೆಗಾಗಿ ಸರ್ಕಾರ ಉಚಿತವಾಗಿ ಸಿಗುವಂತಹ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಜಿಲ್ಲೆಯನ್ನು ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡೋಣ. ಕ್ಷಯರೋಗ ಮುಕ್ತ ಭಾರತವನ್ನಾಗಿ ಮಾಡಬೇಕು ಎಂದು ಪಣ ತೊಟ್ಟಿರುವಂತಹ ಕೇಂದ್ರ ಸರ್ಕಾರ, ಇದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಂಡಿದೆ. ಸರ್ಕಾರ, ಜಿಲ್ಲಾಡಳಿತ, ಆರೋಗ್ಯ ಇಲಾಖೆಯು ಕ್ಷಯಮುಕ್ತ ಸಮಾಜವನ್ನು ಮಾಡಲು ಹಳ್ಳಿಗಳಲ್ಲಿ ಹಲವು ಕಾರ್ಯಕ್ರಮ ಮಾಡುವ ಮೂಲಕ ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಕ್ಷಯಮುಕ್ತ ಭಾರತವನ್ನಾಗಿಸಲು 100 ದಿನಗಳ ಕ್ಯಾಂಪ್ ಕೂಡ ಮಾಡಲಾಗಿದೆ ಎಂದರು.

ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಮತ್ತು ಆಶಾ ಕಾರ್ಯಕರ್ತೆಯರ ಸತತ ಪ್ರಯತ್ನದಿಂದ ಉತ್ತರ ಕನ್ನಡ ಜಿಲ್ಲೆಯ 229 ಗ್ರಾಪಂಗಳಲ್ಲಿ 62 ಗ್ರಾಪಂಗಳು ಕ್ಷಯಮುಕ್ತವಾಗಿದೆ. ಉಳಿದ ಗ್ರಾಪಂಗಳು ಮುಂದಿನ ದಿನಗಳಲ್ಲಿ ಕ್ಷಯಮುಕ್ತವನ್ನಾಗಿ ಮಾಡಲು ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ತಾಲೂಕು ಮತ್ತು ಜಿಪಂ ಕ್ಷಯರೋಗಿಗಳಿಗೆ ಕಿಟ್ ನೀಡುವ ಮೂಲಕ ಕ್ಷಯ ಮಿತ್ರರಿಗೆ ಸಹಾಯ ಮಾಡಬೇಕು. ಸಾರ್ವಜನಿಕರು, ಉದ್ಯಮಿಗಳು, ದಾನಿಗಳು, ಎನ್‌ಜಿಒಗಳು, ಕೈಗಾದ ಸಿಎಸ್‌ಆರ್‌ ನಿಧಿಗಳಿಂದ ಮುಂದಿನ ದಿನಗಳಲ್ಲಿ ಸಹಾಯ, ಪ್ರೋತ್ಸಾಹ ಸಿಗುವಂತಾಗಲಿ ಎಂದರು.

ಇದೇ ವೇಳೆ ಮೊಬೈಲ್ ಹ್ಯಾಂಡ್ ಹೆಲ್ಡ್ ಎಕ್ಸ್- ರೇ ಮಶಿನ್ ಉದ್ಘಾಟಿಸಲಾಯಿತು. ಕ್ಷಯಮುಕ್ತ ಗ್ರಾಪಂಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ, ವೈದ್ಯಕೀಯ ಕಾಲೇಜಿನ ಡೀನ್ ಡಾ. ಪೂರ್ಣಿಮಾ, ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತರಕರ್, ಡಿಎಚ್ಒ ಡಾ. ನೀರಜ್ ಬಿ.ವಿ., ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಹರ್ಷ ವೆಂಕಟೇಶ, ಆರ್‌ಸಿಎಚ್ ಅಧಿಕಾರಿ ಡಾ. ನಟರಾಜ್ ಇದ್ದರು.

Share this article