ಡಿಕೆಶಿ ವಿಚಾರದಲ್ಲಿ ದಲಿತ ಸಂಘಟನೆಗಳ ಮೌನವೇಕೆ?: ಶರಣ್ ಪಂಪವೇಲ್

KannadaprabhaNewsNetwork | Published : Mar 28, 2025 12:32 AM

ಸಾರಾಂಶ

ಸರ್ಕಾರಿ ಕಾಮಗಾರಿಗಳಲ್ಲಿ ಶೇ.4ರಷ್ಟು ಮೀಸಲಾತಿಯನ್ನು ಮುಸ್ಲೀಮರಿಗೆ ನೀಡಬೇಕೆಂಬ ವಿಧೇಯಕ ಮಂಡಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ವಿರೋಧಿಸುತ್ತದೆ. ಅಲ್ಲದೆ ಮುಸ್ಲೀಮರ ತುಷ್ಟೀಕರಣದ ಈ ನೀತಿಯನ್ನು ಬಲವಾಗಿ ಖಂಡಿಸುತ್ತದೆ .

ಕನ್ನಡಪ್ರಭ ವಾರ್ತೆ ನಾಗಮಂಗಲ

ಮುಸಲ್ಮಾನರಿಗೋಸ್ಕರ ಸಂವಿಧಾನವನ್ನೇ ಬದಲಾಯಿಸುತ್ತೇವೆಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ವಿಶ್ವಹಿಂದೂ ಪರಿಷತ್‌ನ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪವೇಲ್ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿಕೆಶಿ ಹೇಳಿಕೆ ಭಾರತದ ಏಕತೆ ಮತ್ತು ಸಮಗ್ರತೆಗೆ ಕುಂದು ತರುತ್ತದೆ. ಇದನ್ನೂ ನಾವು ಕೂಡ ವಿರೋಧಿಸುತ್ತೇವೆ. ಡಿಕೆಶಿ ಹೇಳಿಕೆ ವಿರುದ್ಧ ಜನರು ರಸ್ತೆಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸರ್ಕಾರಿ ಕಾಮಗಾರಿಗಳಲ್ಲಿ ಶೇ.4ರಷ್ಟು ಮೀಸಲಾತಿಯನ್ನು ಮುಸ್ಲೀಮರಿಗೆ ನೀಡಬೇಕೆಂಬ ವಿಧೇಯಕ ಮಂಡಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ವಿರೋಧಿಸುತ್ತದೆ. ಅಲ್ಲದೆ ಮುಸ್ಲೀಮರ ತುಷ್ಟೀಕರಣದ ಈ ನೀತಿಯನ್ನು ಬಲವಾಗಿ ಖಂಡಿಸುತ್ತದೆ ಎಂದರು.

ರಾಜ್ಯಪಾಲರು ಅಂಕಿತ ಹಾಕಬಾರದು:ಸಂವಿಧಾನದಲ್ಲಿ ಇಂತಹ ವಿಧೇಯಕಗಳಿಗೆ ಅವಕಾಶವಿಲ್ಲ. ಜಾತಿ, ಧರ್ಮದ ಆಧಾರದಲ್ಲಿ ಗುತ್ತಿಗೆ ಕಾಮಗಾರಿಗಳನ್ನು ಮುಸಲ್ಮಾನರಿಗೆ ನೀಡಬೇಕೆಂದು ಸಂವಿಧಾನದಲ್ಲಿ ಇಲ್ಲ. ದೇಶದ ಹಲವೆಡೆ ಇಂತಹ ನಿಲುವನ್ನು ತೆಗೆದುಕೊಂಡಾಗ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಅಲ್ಲಿನ ಸರ್ಕಾರಗಳಿಗೆ ಛೀಮಾರಿ ಹಾಕಿವೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಇದೆಲ್ಲವನ್ನೂ ಬದಿಗೊತ್ತಿ ಕೇವಲ ಮುಸಲ್ಮಾನರ ಓಲೈಕೆಗಾಗಿ ವಿಧೇಯಕವನ್ನು ಮಂಡನೆ ಮಾಡಲಾಗಿದೆ. ಇದು ಆರ್ಥಿಕವಾಗಿ ಹಿಂದುಳಿದ ಮತ್ತು ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ಮಾಡಿರುವ ದ್ರೋಹ. ಇನ್ನೊಬ್ಬರ ಕೈಯಿಂದ ಕೆಲಸ ಕಿತ್ತು ಮುಸಲ್ಮಾನರಿಗೆ ನೀಡಲಾಗುತ್ತಿದೆ. ಹಾಗಾಗಿ ಈ ವಿಧೇಯಕಕ್ಕೆ ರಾಜ್ಯಪಾಲರು ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬಾರದು ಎಂದು ಆಗ್ರಹಿಸಿದರು.

ಡಿಕೆಶಿ ವಿಚಾರದಲ್ಲಿ ದಲಿತರ ಮೌನ:

ಈ ಹಿಂದೆ ವಕ್ಫ್ ವಿಚಾರದಲ್ಲಿ ಪೇಜಾವರಶ್ರೀಗಳ ಹೇಳಿಕೆ ತಿರುಚಿ ನೂರಾರು ದಲಿತ ಸಂಘಟನೆಗಳು ಪ್ರತಿಭಟಿಸಿದ್ದವು. ಪೇಜಾವರ ಶ್ರೀಗಳಿಗೆ ಅಪಮಾನವಾಗುವಂತೆ ಮಾತನಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ಶ್ರೀಗಳನ್ನು ನಿಂದಿಸಲಾಗಿತ್ತು. ಸಂವಿಧಾನದ ಬಗ್ಗೆ ಮಾತನಾಡಿದ ಮಾಜಿ ಎಂಪಿ ಅನಂತಕುಮಾರ್ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಡಿಕೆಶಿ ವಿಚಾರದಲ್ಲಿ ಬಾಯಿಗೆ ಬೀಗಹಾಕಿಕೊಂಡಿರುವುದಾದರೂ ಏಕೆ ಎಂದು ಪ್ರಶ್ನಿಸಿದರು.

ಸಮುದಾಯಕ್ಕೆ ಯಾವುದೇ ತೊಂದರೆಯಾದಾಗ ರಸ್ತೆಗಿಳಿದು ಹೋರಾಟ ನಡೆಸುವ ದಲಿತ ಸಂಘಟನೆಗಳು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಡಾ.ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆಂದು ಹೇಳಿಕೆ ನೀಡಿದರೂ ಕೂಡ ಮೌನವಹಿಸಿರುವ ಗುಟ್ಟೇನು? ದಲಿತ ಸಂಘಟನೆಗಳು ಯಾರ ವಿರುದ್ಧ ಎಂಬ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಈ ವಿಚಾರದಲ್ಲಿ ದೊಡ್ಡ ದೊಡ್ಡ ನಾಯಕರು, ಬುದ್ದಿಜೀವಿಗಳು, ಪ್ರಗತಿಪರರು ಮಾತನಾಡಬೇಕಲ್ಲವೇ? ಸಂವಿಧಾನಕ್ಕೆ ಚ್ಯುತಿ ತಂದರೆ ಅಥವಾ ನಮ್ಮ ಹಕ್ಕಿಗೆ ಧಕ್ಕೆಯಾದರೆ ಯಾರನ್ನೂ ಬಿಡುವುದಿಲ್ಲ ಎನ್ನುವ ದಲಿತ ಸಂಘಟನೆಗಳು ಮೌನಕ್ಕೆ ಶರಣಾಗಿವೆ ಎಂದರೆ ನಿಮ್ಮ ನಾಟಕ ಜನರಿಗೆ ಅರ್ಥವಾಗುತ್ತಿದೆ ಎಂದು ಟೀಕಿಸಿದರು.

ನಾವು ಸಂವಿಧಾನದ ಪರವಾಗಿದ್ದೇವೆಂದರೆ ಡಿಕೆಶಿ ವಿರುದ್ಧವೂ ಪ್ರತಿಭಟನೆ ಮಾಡಿ, ಅವರ ಪ್ರತಿಮೆಗೆ ಚಪ್ಪಲಿಹಾರ ಹಾಕಿ, ನಾವೂ ಕೂಡ ನಿಮ್ಮೊಂದಿಗೆ ಬರುತ್ತೇವೆ ಎಂದು ದಲಿತ ಸಂಘಟನೆಗಳನ್ನು ಆಗ್ರಹಿಸಿದರು.

ಕಾಂಗ್ರೆಸ್‌ಗೆ ಮುಸ್ಲಿಮರೇ ಓಟ್‌ಬ್ಯಾಂಕ್ ಎನ್ನುತ್ತಿದ್ದ ಬಿಜೆಪಿಯವರೂ ಕೂಡ ಅದನ್ನೆ ಮಾಡಲು ಹೊರಟಿದ್ದಾರೆ. ಬಿಜೆಪಿ ಅಲ್ಪ ಸಂಖ್ಯಾತರ ಮೋರ್ಚಾ ವತಿಯಿಂದ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲೀಮರಿಗೆ ರಂಜಾನ್ ಕಿಟ್ ನೀಡುತ್ತಿರುವಂತೆ ಬಿಜೆಪಿ ರೈತ ಮೋರ್ಚಾ ಮತ್ತು ಹಿಂದುಳಿದ ಮೋರ್ಚಾ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಬಡ ಹಿಂದೂಗಳಿಗೂ ಕಿಟ್ ನೀಡಬೇಕು ಎಂದು ಬಿಜೆಪಿ ಪಕ್ಷದ ನಾಯಕರನ್ನು ಒತ್ತಾಯಿಸಿದರು.

ಸುದ್ಧಿಗೋಷ್ಠಿಯಲ್ಲಿ ವಿಹಿಂಪ ಜಿಲ್ಲಾ ಸಂಚಾಲಕ ಪುಣ್ಯಕೋಟಿ ರಾಘವೇಂದ್ರ, ತಾಲೂಕು ಕಾರ್ಯದರ್ಶಿ ಮಹೇಶ್, ನಗರ ಕಾರ್ಯದರ್ಶಿ ಕಾರ್ತಿಕ್ ಇದ್ದರು.

Share this article