- ರೋಗ ನಿವಾರಣೆಗೆ ಎಲ್ಲ ಚಟುವಟಿಕೆ ಸಮರ್ಪಕ ಜಾರಿ ಅಗತ್ಯ: ಜಿಲ್ಲಾ ಅಧಿಕಾರಿ ಡಾ.ಗಂಗಾಧರ ಹೇಳಿಕೆ
- - -ಕನ್ನಡಪ್ರಭ ವಾರ್ತೆ, ದಾವಣಗೆರೆ
ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅನ್ವಯ ಹೆಚ್ಚು ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ಧದ ಹೋರಾಟ ತೀವ್ರಗೊಳಿಸುವ ಘೋಷವಾಕ್ಯದೊಂದಿಗೆ ಏ.25ರಂದು ವಿಶ್ವ ಮಲೇರಿಯಾ ದಿನ ಆಚರಿಸಲಾಗುತ್ತಿದೆ. ರಾಜ್ಯ ಹಾಗೂ ಜಿಲ್ಲೆಯನ್ನು ಮಲೇರಿಯಾ ಮುಕ್ತಗೊಳಿಸಬೇಕಾಗಿದೆ ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಗಂಗಾಧರ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಲೇರಿಯಾವನ್ನು ನಿಯಂತ್ರಿಸುವ ಮತ್ತು ಅಂತಿಮವಾಗಿ ನಿರ್ಮೂಲನೆ ಮಾಡುವ ಸದುದ್ದೇಶದಿಂದ ವಿಶ್ವಾದ್ಯಂತ ಏ.25ನ್ನು 2008ರಿಂದ ವಿಶ್ವಾದ್ಯಂತ ಮಲೇರಿಯಾ ದಿನ ಆಚರಿಸಲಾಗುತ್ತಿದೆ ಎಂದರು.
ಕರ್ನಾಟಕ ರಾಜ್ಯವನ್ನು 2024ರ ವೇಳೆಗೆ ಮಲೇರಿಯಾ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ. ಈ ಸಾಧನೆಗೆ ಎಲ್ಲ ಹಂತದಲ್ಲಿ ಮಲೇರಿಯಾ ನಿವಾರಣಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಎಲ್ಲರ ಜವಾಬ್ದಾರಿ. ರಕ್ತಪರೀಕ್ಷೆ, ಜ್ವರ ಸಮೀಕ್ಷೆ, ಡಿಡಿಟಿ ಸಿಂಪಡಣೆ, ಸಮಸ್ಯಾತ್ಮಕ ಪ್ರದೇಶದಲ್ಲಿ ಸೊಳ್ಳೆ ಪರದೆ ವಿತರಣೆ, ವಲಸೆ ಜನರ ಸಮೀಕ್ಷೆ, ಸೊಳ್ಳೆ ನಿಯಂತ್ರಣಕ್ಕಾಗಿ ಲಾರ್ವಾಹಾರಿ ಮೀನು ಬಿಡುಗಡೆ ಸೇರಿದಂತೆ ಹಲವಾರು ನಿಯಂತ್ರಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ದಾವಣಗೆರೆ ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಶ್ರಮಿಸುತ್ತಿದೆ. ಮಲೇರಿಯಾ ರೋಗವು ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗ. ಸೋಂಕಿನ ಅನಾಫಿಲಿಸ್ ಜಾತಿಗೆ ಸೇರಿದ ಹೆಣ್ಣುಸೊಳ್ಳೆಗಳು ಫ್ಲಾಸ್ಮೋಡಿಯಾ ರೋಗಾಣು ಹರಡಿಸುವುದರಿಂದ ಈ ಕಾಯಿಲೆ ಹರಡುತ್ತದೆ. ಅಲ್ಫಾನ್ಸೋ ಲ್ಯಾವರಾನ್ 6.11.1880ರಲ್ಲಿ ಮಲೇರಿಯಾ ರೋಗಾಣು ಕಂಡುಹಿಡಿದರು. ಮಲೇರಿಯಾದಲ್ಲಿ ಪಿವಿ, ಪಿಎಫ್, ಪಿಎಂ, ಪಿಒ ಎಂಬ 4 ಪ್ರಬೇಧಗಳಿವೆ ಎಂದು ತಿಳಿಸಿದರು.
ಸೊಳ್ಳೆಗಳಿಂದ ಮಲೇರಿಯಾ ಹರಡಡುತ್ತದೆಂದು ಸರ್ ಡಾ.ರೋನಾಲ್ಡ್ ರಾಸ್ 20.8.1897ರಲ್ಲಿ ಕಂಡುಹಿಡಿದರು. ದಿನ ಬಿಟ್ಟು ದಿನ ಚಳಿ, ನಡುಕ, ತಲೆನೋವು, ಜ್ವರ, ವಾಕರಿಕೆ, ಬಾಯಾರಿಕೆ, ಬೆವರುವುದು, ಸುಸ್ತು ಇತ್ಯಾದಿ ಲಕ್ಷಣಗಳಾಗಿವೆ. ಮನೆ ಮನೆ ಭೇಟಿ ನೀಡಿ, ಜ್ವರ ಪ್ರಕರಣಗಳಿಂದ ರಕ್ತ ಲೇಪನ, ಸಂಗ್ರಹಿಸಿ, ಪರೀಕ್ಷಿಸುವುದು, ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಜ್ವರ ಪ್ರಕರಣಗಳಿಂದ ರಕ್ತ ಲೇಪನ ಸಂಗ್ರಹಿಸಿ, ಪರೀಕ್ಷಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.ವಿಶೇಷ ಸಮೀಕ್ಷೆ ಮೇಲೆ ವಲಸೆ ಜನರ ಕಣ್ಗಾವಲಿಡಲಾಗಿದೆ. ಹೊರ ರಾಜ್ಯಗಳಿಂದ ಬರವು ಜನರ ರಕ್ತ ಲೇಪನ ಸಂಗ್ರಹಿಸಿ, ಪರೀಕ್ಷೆ ಮಾಡಲಾಗುತ್ತಿದೆ. ಪಿವಿ ಸೋಂಕಿದೆ 14 ದಿನ, ಪಿಎಫ್-4 ದಿನ ಚಿಕಿತ್ಸೆ ನೀಡಲಾಗುತ್ತದೆ. ಮಲೇರಿಯಾ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಸಾಕಷ್ಟು ನಿಯಂತ್ರಣ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 2019ರಿಂದ 2023ರವರೆಗೆ ಮಲೇರಿಯಾ ಪ್ರಕರಣಗಳ ಮೇಲೆ ನಿಗಾ ಇಡಲಾಗಿದೆ ಎಂದು ಡಾ.ಗಂಗಾಧರ ತಿಳಿಸಿದರು.
ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಿ.ಡಿ. ಮುರಳೀಧರ, ಡಾ.ಸುರೇಶ ಇತರರು ಇದ್ದರು.- - - -15ಕೆಡಿವಿಜಿ7, 8:
ದಾವಣಗೆರೆಯಲ್ಲಿ ಬುಧವಾರ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಗಂಗಾಧ, ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಡಿ.ಮುರಳೀಧರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.