ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳಬಗೆಹರಿಯದ ಮೂಲ ಸಮಸ್ಯೆ

KannadaprabhaNewsNetwork |  
Published : May 16, 2024, 12:50 AM IST
ಗೋಕರ್ಣದಲ್ಲಿ ಟ್ರಾಫಿಕ್ ಜಾಮ್  | Kannada Prabha

ಸಾರಾಂಶ

ಶುಕ್ರವಾರದಿಂದಲೆ ಪ್ರವಾಸಿಗರ ಭರಾಟೆ ಶುರುವಾಗಿದೆ. ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಬೇಸಿಗೆಯ ರಜೆಯಾದರೆ ವಾರಾಂತ್ಯದ ರಜೆಯೂ ಬಂದ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ವಾರಾಂತ್ಯದ ರಜೆ ಮುಗಿದರೂ ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸುತ್ತಲೇ ಇದ್ದಾರೆ.

ಕಾರವಾರ: ಚುನಾವಣೆ ಮುಗಿಯುತ್ತಿದ್ದಂತೆ ಪ್ರವಾಸಿತಾಣಗಳಿಗೆ ಜನತೆ ಮುಗಿಬಿದ್ದಿದ್ದಾರೆ. ಕರಾವಳಿಯ ಬಿಸಿಲಿನ ಝಳ, ಬೆವರು ಹರಿಯುವುದನ್ನೂ ಲೆಕ್ಕಿಸದೆ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಶುಕ್ರವಾರದಿಂದಲೆ ಪ್ರವಾಸಿಗರ ಭರಾಟೆ ಶುರುವಾಗಿದೆ. ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಬೇಸಿಗೆಯ ರಜೆಯಾದರೆ ವಾರಾಂತ್ಯದ ರಜೆಯೂ ಬಂದ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ವಾರಾಂತ್ಯದ ರಜೆ ಮುಗಿದರೂ ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸುತ್ತಲೇ ಇದ್ದಾರೆ.

ಗೋಕರ್ಣದಲ್ಲಿ ಕುಟುಂಬದೊಂದಿಗೆ ಆಗಮಿಸಿದ ಹಲವರು ಅಲ್ಲಿನ ಪ್ರಮುಖ ದೇವಾಲಯ, ಕಡಲತೀರಗಳಿಗೆ ಭೇಟಿ ನೀಡುತ್ತಿದ್ದಾರೆ. ಯುವ ಸಮುದಾಯದ ಉದ್ಯೋಗಿಗಳು, ವಿದ್ಯಾರ್ಥಿಗಳು ಓಂ ಬೀಚ್, ಕುಡ್ಲೆ ಮತ್ತು ಮುಖ್ಯ ಕಡಲತೀರದಲ್ಲಿ ಬೀಡು ಬಿಟ್ಟಿದ್ದಾರೆ. ಸಮುದ್ರದಲ್ಲಿ ಈಜಾಡುತ್ತಾ ಮೋಜು- ಮಸ್ತಿಯಲ್ಲಿ ತೊಡಗಿದ್ದಾರೆ. ಹೆಚ್ಚುತ್ತಿರುವ ಪ್ರವಾಸಿಗರನ್ನು ನಿಯಂತ್ರಿಸಲು ಜೀವರಕ್ಷಕ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ.

ಇದರಂತೆ ಮಹಾಬಲೇಶ್ವರ, ಮಹಾಗಣಪತಿ ಮಂದಿರದಲ್ಲಿ ದೇವರ ದರ್ಶನಕ್ಕೆ ಉದ್ದದ ಸರತಿ ಸಾಲು ಕಂಡುಬರುತ್ತಿದೆ.

ಮುರ್ಡೇಶ್ವರದಲ್ಲಿ ದೇವರ ದರ್ಶನದ ಜತೆಗೆ ಜಲಸಾಹಸ ಕ್ರೀಡೆಗಳು, ಬೋಟಿಂಗ್‌ಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಮುರ್ಡೇಶ್ವರದಲ್ಲೂ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಇದರ ಜತೆಗೆ ಜೋಯಿಡಾ, ದಾಂಡೇಲಿ, ವಿಭೂತಿ ಜಲಪಾತ ಮತ್ತಿತರ ಜಲಪಾತಗಳು ಹಾಗೂ ಅರಣ್ಯ ಪ್ರದೇಶಗಳಿಗೆ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಸೌಕರ್ಯಯದ ಕೊರತೆ: ಗೋಕರ್ಣದಲ್ಲಿ ಪ್ರವಾಸಿಗರಿಗೆ ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ, ಸ್ನಾನಗೃಹಗಳ ಕೊರತೆ ಇದೆ. ಇಲ್ಲಿನ ಮುಖ್ಯ ಕಡಲತೀರದಲ್ಲಿರುವ ಸ್ನಾನ ಮತ್ತು ಶೌಚಗೃಹಕ್ಕೆ ಉಪ್ಪು ನೀರು ಬಳಕೆಯಾಗುತ್ತಿದ್ದು, ಪ್ರವಾಸಿಗರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನೂ ಎಲ್ಲೆಂದರಲ್ಲಿ ವಾಹನ ನಿಲುಗಡೆಗೊಳಿಸುವುದರಿಂದ ವಾಹನ ದಟ್ಟಣೆ ಉಂಟಾಗಿ, ಸಂಚಾರಕ್ಕೆ ತೊಡಕಾಗುತ್ತಿದೆ. ಸರಿಯಾದ ಮಾರ್ಗಸೂಚಿ ಫಲಕವಿಲ್ಲದೆ ಪ್ರವಾಸಿಗರು ದಿಕ್ಕು ತಪ್ಪಿ ಬೇರೆಡೆ ತೆರಳಿ ಪರದಾಡುತ್ತಿದ್ದಾರೆ. ಮೂಲ ಸೌಲಭ್ಯಗಳಿಲ್ಲದೆ ಗೋಕರ್ಣದಲ್ಲಿ ಪ್ರವಾಸಿಗರಿಗೆ ಕಿರಿಕಿರಿಯಾಗುತ್ತಿದೆ. ಇದುವರೆಗೂ ಈ ಬಗ್ಗೆ ಸ್ಥಳೀಯ ಆಡಳಿತ, ಜಿಲ್ಲಾಡಳಿತವಾಗಲಿ ಪ್ರವಾಸೋದ್ಯಮ ಇಲಾಖೆಯಾಗಲಿ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳಲ್ಲೂ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕೆಂದು ಪ್ರವಾಸಿಗರು ಆಗ್ರಹಿಸುತ್ತಿದ್ದಾರೆ.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು