ವಾರವಿಡೀ ಜಿಲ್ಲೆಯಾದ್ಯಂತ ರಸ್ತೆ ಸುರಕ್ಷಾ ಸಪ್ತಾಹ: ಎಸ್‌ಪಿ ಉಮಾ

KannadaprabhaNewsNetwork | Published : Jan 12, 2024 1:45 AM

ಸಾರಾಂಶ

ಸಂಚಾರ ನಿಯಮಗಳ ಪಾಲನೆ ತುಂಬಾ ಅವಶ್ಯಕ. ಆದ್ದರಿಂದ ಸಂಚಾರ ನಿಯಮಗಳ ಉಲಂಘನೆಗೆ ಪೊಲೀಸರು ದಂಡ ವಿಧಿಸುವ ಮೊದಲು ಸಾರ್ವಜನಿಕರಿಗೆ ಈ ಬಗ್ಗೆ ಪ್ರತಿ ವರ್ಷ ಸಂಚಾರ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಶಾಲಾ ಮಕ್ಕಳು ರಸ್ತೆಯಲ್ಲಿ ಸಂಚರಿಸುವಾಗ ರಸ್ತೆಯ ಎಡ ಭಾಗದಲ್ಲಿ ಸಂಚರಿಸಬೇಕು.

ಜಾಥಾಗೆ ಚಾಲನೆ, ಪ್ರತಿಯೊಬ್ಬರೂ ಸಂಚಾರಿ ನಿಯಮಗಳ ತಪ್ಪದೇ ಪಾಲಿಸಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಈ ವಾರ ಪೂರ್ಣ ದಾವಣಗೆರೆ ನಗರ ಹಾಗೂ ಜಿಲ್ಲೆಯಾದ್ಯಂತ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮಗಳ ನಡೆಸಲಾಗುವುದು. ಎಲ್ಲಾ ವಾಹನ ಚಾಲಕರು, ಸಾರ್ವಜನಿಕರು ಕಡ್ಡಾಯವಾಗಿ ಸಂಚಾರ ನಿಯಮಗಳ ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಕರೆ ನೀಡಿದರು.

ನಗರದ ಗುಂಡಿ ಮಹಾದೇವಪ್ಪ ವೃತ್ತದಲ್ಲಿ ಗುರುವಾರ ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದೊಂದಿಗೆ ರಸ್ತೆ ಸುರಕ್ಷಾ ಸಪ್ತಾಹ 2024 ಅಂಗವಾಗಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷಾ ಸಪ್ತಾಹ ಜಾಥಾಗೆ ಚಾಲನೆ ನೀಡಿ ಮಾತನಾಡಿ ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಬಾರದು, ಸೀಟ್ ಬೆಲ್ಟ್, ಹೆಲ್ಮೆಟ್‌ ಧರಿಸಿ, ವೇಗವಾಗಿ ವಾಹನ ಚಾಲನೆ ಮಾಡಬಾರದು ಸಂಚಾರ ನಿಯಮಗಳ ಪಾಲಿಸದಿದ್ದಾಗ ಅಪಘಾತ ಸಂಭವ ಹೆಚ್ಚಿರುತ್ತದೆ. ಆದ್ದರಿಂದ ಕಡ್ಡಾಯವಾಗಿ ಸಂಚಾರ ನಿಯಮಗಳ ಪಾಲನೆ ತುಂಬಾ ಅವಶ್ಯಕ. ಆದ್ದರಿಂದ ಸಂಚಾರ ನಿಯಮಗಳ ಉಲಂಘನೆಗೆ ಪೊಲೀಸರು ದಂಡ ವಿಧಿಸುವ ಮೊದಲು ಸಾರ್ವಜನಿಕರಿಗೆ ಈ ಬಗ್ಗೆ ಪ್ರತಿ ವರ್ಷ ಸಂಚಾರ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಶಾಲಾ ಮಕ್ಕಳು ರಸ್ತೆಯಲ್ಲಿ ಸಂಚರಿಸುವಾಗ ರಸ್ತೆಯ ಎಡ ಭಾಗದಲ್ಲಿ ಸಂಚರಿಸಬೇಕು, ರಸ್ತೆಗಳ ದಾಟುವಾಗ ಅತಿ ಜಾಗರೂಕತೆಯಿಂದ ರಸ್ತೆ ದಾಟಬೇಕು, ಶಾಲಾ ವಾಹನಗಳ ಚಾಲಕರನ್ನು ನೇಮಿಸುವ ಮುನ್ನ ಅವರ ಪೂರ್ವಪರ ಪರಿಶಿಲಿಸಬೇಕಾಗುತ್ತದೆ ಈ ಬಗ್ಗೆ ಆದೇಶ ಕೂಡ ಬಂದಿದೆ, ಈ ಬಗ್ಗೆ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರುಗಳೊಂದಿಗೆ ಸಭೆ ನಡೆಸಿ ತಿಳಿಸಲಾಗುವುದು ಎಂದರು.

ಈ ರಸ್ತೆ ಸುರಕ್ಷಾ ಸಪ್ತಾಹದ ಮುಖ್ಯ ಉದ್ದೇಶ ಜಿಲ್ಲೆಯಲ್ಲಿ ಅಪಘಾತಗಳ ಕಡಿಮೆಗೊಳಿಸುವುದು. ಅಪಘಾತಗಳ ಸಂಖ್ಯೆ 2022 ರಲ್ಲಿ 314 ಇತ್ತು 2023 ರಲ್ಲಿ 282 ಆಗಿದೆ ಇದು ಈ ವರ್ಷ ಇನ್ನೂ ಕಡಿಮೆಯಾಗಬೇಕು ಅದಕ್ಕಾಗಿ ಎಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮಗಳ ಪಾಲನೆ ಮಾಡುವುದು ತುಂಬಾ ಅವಶ್ಯಕ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ ಸಂತೋಷ, ದಾವಣಗೆರೆ ಸ್ಮಾರ್ಟ್ ಸಿಟಿ ಎಂಡಿ ವೀರೇಶ್ ಕುಮಾರ, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ, ಆರ್‌ಟಿಒ ಪ್ರಮುತೇಶ್, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಅಧ್ಯಕ್ಷ ದಿನೇಶ್ ಶೆಟ್ಟಿ, ಪೊಲೀಸ್ ಅಧಿಕಾರಿಗಳಾದ ಗುರುಬಸವರಾಜ, ಮಲ್ಲಮ್ಮ ಚೌಬೆ, ಶೈಲಜಾ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್‌ ಜಿಲ್ಲಾ ಆಯುಕ್ತ ಷಡಾಕ್ಷರಿ ಸೇರಿದಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿ, ನಗರದ ಬಾಪೂಜಿ, ಡಿಆರ್‌ಆರ್, ಸಿದ್ಧಗಂಗಾ ಶಾಲೆ, ಮಾಗನೂರು ಬಸಪ್ಪ, ಎವಿಕೆ, ಪಾಟೀಲ್ ವೀರಪ್ಪ, ಸೆಂಟ್ ಪಾಲ್ಸ್ ಶಾಲೆಯ ಸ್ಕೌಟ್ಸ್, ಗೈಡ್ಸ್ ಮಕ್ಕಳು ಭಾಗವಹಿಸಿದ್ದರು.

Share this article