ತ್ವರಿತ ನ್ಯಾಯ ಒದಗಿಸಲು ಜಿಲ್ಲಾವಾರು ಸಭೆ: ಟಿ.ಶ್ಯಾಮ್ ಭಟ್

KannadaprabhaNewsNetwork |  
Published : Jul 12, 2024, 01:32 AM IST
11ಎಚ್‌ಪಿಟಿ1- ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ದೂರುಗಳ ವಿಚಾರಣೆ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ರಾಜ್ಯ ಮಾನವಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ. ಶ್ಯಾಮ್ ಭಟ್ ಅವರು ಗುರುವಾರ ಸಭೆ ನಡೆಸಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ 8000ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇದ್ದವು

ಹೊಸಪೇಟೆ: ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ತ್ವರಿತ ನ್ಯಾಯ ಒದಗಿಸಲು ಜಿಲ್ಲಾವಾರು ವಿಚಾರಣಾ ಸಭೆಗಳನ್ನು ನಡೆಸಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುತ್ತಿದೆ. ವಿಜಯನಗರ ಜಿಲ್ಲೆಯ ಒಂಬತ್ತು ಪ್ರಕರಣಗಳನ್ನು ಈ ದಿನ ವಿಚಾರಣೆ ನಡೆಸಲಾಗಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ. ಶ್ಯಾಮ್ ಭಟ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ದೂರುಗಳ ವಿಚಾರಣೆ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 8000ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇದ್ದವು, ಈಗ ಐದು ಸಾವಿರ ಪ್ರಕರಣಗಳನ್ನು 3,300 ಪ್ರಕರಣಗಳು ಬಾಕಿ ಉಳಿದಿವೆ. ಈಗಾಗಲೇ 12 ಜಿಲ್ಲೆಗಳಿಗೆ ತೆರಳಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ. ಆಯೋಗವೇ ಸುಮೊಟೊ ಪ್ರಕರಣಗಳನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಪ್ರತಿದಿನ 30ರಿಂದ 40 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದರು.

ತುಮಕೂರಿನ ಗೊಲ್ಲರಹಟ್ಟಿಯೊಂದರಲ್ಲಿ ಬಾಣಂತಿಯರನ್ನು ಮನೆಯೊಳಗೆ ಸೇರಿಸುತ್ತಿರಲಿಲ್ಲ. ಈ ಅನಿಷ್ಟ ಪದ್ಧತಿ ನಿರ್ಮೂಲನೆಗೆ ಕ್ರಮ ವಹಿಸಲಾಗಿದೆ. ಇದಕ್ಕಾಗಿ ಜಾಗೃತಿ ಕೂಡ ಮೂಡಿಸಲಾಗಿದೆ. ತುಮಕೂರು ಪೊಲೀಸ್‌ ವರಿಷ್ಠಾಧಿಕಾರಿ ಗಮನಕ್ಕೆ ತಂದು, ಆ ಮಹಿಳೆಗೆ ನ್ಯಾಯ ಒದಗಿಸಲಾಗಿದೆ. ಬೆಳಗಾವಿ, ಬಾಗಲಕೋಟಗಳಲ್ಲಿ ಭ್ರೂಣಹತ್ಯೆ ಪ್ರಕರಣಗಳು ಕಂಡು ಬಂದ ಬಳಿಕ ಸುಮೊಟೊ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಬಡವರಿಗೆ ನಿವೇಶನಗಳ ಹಕ್ಕುಪತ್ರ ಒದಗಿಸಲು ಕ್ರಮವಹಿಸಲಾಗಿದೆ.

ನಗರದ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ಸ್ವಚ್ಛತೆ ಮಾಯವಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡಲು ಸಾರಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಸ್‌ ಪಾಸ್‌ ವಿತರಣಾ ಕೌಂಟರ್‌, ಸಹಾಯಕ ಸಂಚಾರ ನಿಯಂತ್ರಣಾಧಿಕಾರಿ ಕೊಠಡಿಗಳಿಗೂ ಭೇಟಿ ನೀಡಿ ಪರಿಶೀಲಿಸಲಾಗಿದೆ. ಎಲ್ಲೆಡೆ ಮೂಲಭೂತ ಸೌಕರ್ಯದ ಕೊರತೆ ಇದೆ. ಹಾಗಾಗಿ ಈ ಲೋಪದೋಷಗಳನ್ನುಸರಿಪಡಿಸಲು ಕೂಡ ಸೂಚಿಸಲಾಗಿದೆ ಎಂದರು.

ನಗರದ ಹಾಸ್ಟೆಲ್, ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಿಗೂ ಭೇಟಿ ನೀಡಲಾಗಿದ್ದು, ಸ್ವಚ್ಛತೆ ಹಾಗೂ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಒಂಬತ್ತು ಪ್ರಕರಣಗಳ ಪೈಕಿ ಎರಡು ಪ್ರಕರಣಗಳು ಪೊಲೀಸ್‌ ಇಲಾಖೆ, ಮೂರು ಸಿಡಿಪಿಒ ಇಲಾಖೆಗೆ ಸಂಬಂಧಿಸಿದ್ದವು. ಉಳಿದ ಪ್ರಕರಣಗಳು ಜಿಲ್ಲಾ ಕಂದಾಯ ಇಲಾಖೆಗೆ ಸಂಬಂಧಿಸಿದೆ. ಈ ಪ್ರಕರಣಗಳ ಕುರಿತು ಅಧಿಕಾರಿಗಳಿಂದ ವಿವರಣೆ ಕೇಳಲಾಗಿದೆ ಎಂದರು.

ಹಂಪಿಯ ತುಂಗಭದ್ರಾ ನದಿ ತೀರದಲ್ಲಿ ಮಹಿಳಾ ಭಕ್ತರಿಗೆ ಅನುಕೂಲವಾಗುವಂತೇ ಬಟ್ಟೆ ಬದಲಿಸಲು ವ್ಯವಸ್ಥೆ ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗುವುದು. ಜಿಲ್ಲೆಯಲ್ಲಿ ಗುಳೆ ಹೋಗುವವರ ಮಕ್ಕಳ ಶಿಕ್ಷಣ ಮೊಟಕುಗೊಳ್ಳಬಾರದು, ಈ ಕುರಿತು ಕೂಡ ಜಿಲ್ಲಾಡಳಿತಕ್ಕೆ ಸೂಚಿಸಲಾಗುವುದು ಎಂದರು.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ