ಜೂ.೨೭-೨೮ರಂದು ಜಿಲ್ಲಾ ಲೇಖಕಿಯರ ಸಮ್ಮೇಳನ: ಮೀರಾ

KannadaprabhaNewsNetwork |  
Published : Jun 11, 2026, 12:15 AM IST
೧೦ಕೆಎಂಎನ್‌ಡಿ-೨ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿದರು. | Kannada Prabha

ಸಾರಾಂಶ

ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ಮತ್ತು ಜಿಲ್ಲಾ ಘಟಕದ ಸಹಯೋಗದೊಂದಿಗೆ ಜೂ.೨೭ ಹಾಗೂ ೨೮ರಂದು ಜಿಲ್ಲಾ ಲೇಖಕಿಯರ ಸಮ್ಮೇಳನ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಟಿ.ಸಿ.ಪೂರ್ಣಿಮಾ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ಮತ್ತು ಜಿಲ್ಲಾ ಘಟಕದ ಸಹಯೋಗದೊಂದಿಗೆ ಜೂ.೨೭ ಹಾಗೂ ೨೮ರಂದು ಜಿಲ್ಲಾ ಲೇಖಕಿಯರ ಸಮ್ಮೇಳನ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಟಿ.ಸಿ.ಪೂರ್ಣಿಮಾ ಆಯ್ಕೆಯಾಗಿದ್ದಾರೆ. ಅಧ್ಯಕ್ಷರನ್ನು ರೈತಸಭಾಂಗಣದಿಂದ ಅಂಬೇಡ್ಕರ್ ಭನದವರೆಗೆ ಮೆರವಣಿಗೆಯಲ್ಲಿ ಕರೆತರಲಾಗುವುದು. ಸಮ್ಮೇಳನದ ಉದ್ಘಾಟನೆಯನ್ನು ವಿಶ್ರಾಂತ ಕುಲಪತಿ ಡಾ.ಪದ್ಮಾ ಶೇಖರ್ ನೆರವೇರಿಸುವರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಆರ್.ಸುನಂದಮ್ಮ ಆಶಯ ನುಡಿಗಳನ್ನಾಡುವರು. ಸ್ಮರಣ ಸಂಚಿಕೆಯನ್ನು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಬಿಡುಗಡೆ ಮಾಡುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ಮರಣ ಸಂಚಿಕೆ ಕುರಿತು ಸಂಪಾದಕಿ ಡಾ.ಸಬಿಹಾ ಭೂಮಿಗೌಡ ಮಾತನಾಡುವರು. ಮಹಿಳೆಯರ ಆಶಯ, ಆಲೋಚನೆ, ಪ್ರಸ್ತುತ ಸಮಾಜದಲ್ಲಿ ಮಹಿಳೆಯ ಪಾತ್ರ, ಆಕೆ ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರತಿಧ್ವನಿಸುವ ಪ್ರತಿನಿಧಿಯಾಗಿ ಚಿಂತಿಸುವ ಕುರಿತು ಬೆಳಕು ಚೆಲ್ಲುವಂತಹ ಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದರು.

ಜೂ.೨೭ರಂದು ಕಾವ್ಯ ಸಮಯ ಗೋಷ್ಠಿಯಲ್ಲಿ ಹಲವು ಕವಯಿತ್ರಿಯರು ಭಾಗವಹಿಸುವರು. ಮಹಿಳಾ ಅವಶ್ಯಕತೆಗಳು, ಸಿನಿಮ ರಂಗಭೂಮಿ, ರಾಜಕೀಯ ಮತ್ತು ಸಾಹಿತ್ಯ ಕ್ಷೇತ್ರದ ಮಹಿಳೆಯರ ಆತ್ಮಕತೆಗಳ ಬಗ್ಗೆ ಮಂಥನವಿರುತ್ತದೆ. ಕವಿಗೋಷ್ಠಿಯನ್ನು ಆಯೋಜಿಸಿದ್ದು ಇದರ ಉದ್ಘಾಟನೆಯನ್ನು ವಿಶ್ರಾಂತ ಪ್ರಾಂಶುಪಾಲೆ ಡಾ.ಲೀಲಾ ಅಪ್ಪಾಜಿ ನೆರವೇರಿಸುವರು. ಹಿರಿಯ ಲೇಖಕಿ ಡಾ.ಕೆ.ಷರೀಫಾ ಅಧ್ಯಕ್ಷತೆ ವಹಿಸುವರು. ಈ ಗೋಷ್ಠಿಯಲ್ಲಿ ನಾಡಿನ ಹಲವಾರು ಕವಯಿತ್ರಿಯರು ಭಾಗವಹಿಸುವರು. ಸಂಜೆ ೬.೩೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ನುಡಿದರು.

ಜೂ.೨೮ರಂದು ಸಮಕಾಲೀನ ತಲ್ಲಣಗಳು ವಿಷಯದಡಿ ಹದಿಹರೆಯದ ಹೆಣ್ಣುಮಕ್ಕಳ ಸಮಸ್ಯೆಗಳು ಹಾಗೂ ಸಾಮಾಜಿಕ ಸಮಸ್ಯೆಯಾಗಿ ಭ್ರೂಣಹತ್ಯೆ, ಸಣ್ಣ ಕೈಗಾರಿಕೋದ್ಯಮಗಳಲ್ಲಿ ಮಹಿಳೆಯರ ಸಮಸ್ಯೆಗಳು, ೨೧ನೇ ಶತಮಾನದ ಮಹಿಳಾ ಸಾಹಿತ್ಯ ವಿಷಯದಡಿ ಕಾದಂಬರಿಗಳು, ಸಣ್ಣಕತೆಗಳು, ಪ್ರವಾಸಿ ಸಾಹಿತ್ಯದ ಬಗ್ಗೆ ನಾಡಿನ ಹೆಸರಾಂತ ಲೇಖಕಿಯರು ವಿಷಯ ಮಂಡನೆ ಮಾಡುವರು. ಸಮಾರೋಪ ಭಾಷಣವನ್ನು ಹಿರಿಯ ಸಾಹಿತಿ ಡಾ.ಲತಾ ರಾಜಶೇಖರ್ ಮಾಡುವರು. ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದ ನಾಡಿನ ಮಹಿಳೆಯರನ್ನು ಗೌರಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ಡಾ.ಅನಸೂಯ ಹೊಂಬಾಳೆ, ಡಾ.ಆರ್.ಸುನಂದಮ್ಮ, ಡಾ.ಎಸ್.ಸಿ.ಮಂಗಳಾ, ಡಾ.ಎಂ.ಕೆಂಪಮ್ಮ, ಡಾ.ಸುಮಾರಾಣಿ ಇದ್ದರು.ಡಾ.ಟಿ.ಸಿ.ಪೂರ್ಣಿಮಾ ಪರಿಚಯ

ಮೈಸೂರಿನ ಪ್ರತಿಷ್ಠಿತ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿಯಾಗಿರುವ ಡಾ.ಟಿ.ಸಿ.ಪೂರ್ಣಿಮಾ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದಾರೆ. ಸಾಹಿತಿಯಾಗಿ, ಮಾಧ್ಯಮ ತಜ್ಞರಾಗಿ, ಸಾಂಸ್ಕೃತಿಕ ರಾಯಭಾರಿಯಾಗಿ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರು. ಮೂಲತಃ ಮೈಸೂರಿನವರಾದ ಪೂರ್ಣಿಮಾ ಅವರು ಬಿಎಸ್ಸಿ, ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಸಂವಹನ ಕ್ಷೇತ್ರದಲ್ಲಿ ಪಿಹೆಚ್‌ಡಿ, ಪ್ರದರ್ಶಕ ಕಲೆಗಳ ವಿಷಯದಲ್ಲಿ ಡಿ-ಲಿಟ್‌ಪದವಿ, ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ, ಹಿಂದಿ ಭಾಷಾ ಪರಿಣಿತ ಪದವಿ ರಾಷ್ಟ್ರಭಾಷಾ ವ್ಯಾಸಂಗ ಮಾಡಿದ್ದಾರೆ. ಪಿಟೀಲು ವಿದ್ವಾಂಸ ಪಿಟೀಲು ಚೌಡಯ್ಯನವರ ವಂಶಸ್ಥರು. ಪ್ರಸ್ತುತ ಪಾಂಡವಪುರ ತಾಲೂಕು ಕ್ಯಾತನಹಳ್ಳಿಯಲ್ಲಿ ನೆಲೆಸಿದ್ದಾರೆ. ಕನ್ನಡದ ಮಣ್ಣಿನಿಂದ ಕೇಂದ್ರ ವಾರ್ತಾ ಸೇವೆಗೆ ಯುಪಿಎಸ್ಸಿ ಮೂಲಕ ಆಯ್ಕೆಗೊಂಡ ಮೊದಲ ಮಹಿಳಾ ನಾಗರಿಕ ಸೇವಾ ಅಧಿಕಾರಿ. ಕರ್ನಾಟಕದ ಮೂವರು ಮುಖ್ಯಮಂತ್ರಿಗಳಿಗೆ ಮಾಧ್ಯಮ ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಾಹಿತಿಯಾಗಿ ಕುವೆಂಪು ಸಾಹಿತ್ಯ ಸಂಶೋಧನೆ ದಿಟದ ಮನೆ, ಪಿಟೀಲು ಚೌಡಯ್ಯನವರನ್ನು ಕುರಿತ ನಾದ ನಕ್ಷತ್ರ, ಆಧುನಿಕ ಸಂವಹನ ಮಾಧ್ಯಮಗಳು ಮತ್ತು ಕನ್ನಡದ ಅಭಿವೃದ್ಧಿ ಮೊದಲಾದ ೨೫ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಯಶಸ್ವಿಗೊಳಿಸಿ
ಅಧಿಕಾರಿಗಳ ವರ್ಗಾವಣೆಗೆ ಶಾಸಕ ಚಿಮ್ಮನಕಟ್ಟಿ ಸೂಚನೆ