ಅಭಿವೃದ್ಧಿ ಆಗದೆ ಉಳಿದ ಹಳೇ ತಲಕಾಡು ಮುಖ್ಯರಸ್ತೆ

KannadaprabhaNewsNetwork |  
Published : Feb 26, 2024, 01:36 AM IST
61 | Kannada Prabha

ಸಾರಾಂಶ

ಹಳೇ ತಲಕಾಡು ಪಾರಂಪರಿಕ ಪ್ರವಾಸಿ ಪ್ರಸಿದ್ಧ ಸ್ಥಳ, ನೂರಾರು ವರ್ಷಗಳಿಂದ ಗ್ರಾಮದ ನಿವಾಸಿಗಳು ಈಗ ರಸ್ತೆ ವಿಸ್ತರಣೆಯಾಗುವ ಪುರಾತನ ಆಂಜನೇಯ ದೇಗುಲವಿರುವ ರಾಜಬೀದಿಯ ಸುತ್ತಲಿನ ಬೀದಿಗಳಲ್ಲಿ ನೆಲೆಸಿದ್ದಾರೆ.

ಅಕ್ರಂಪಾಷ ತಲಕಾಡು

ಕನ್ನಡಪ್ರಭ ವಾರ್ತೆ ತಲಕಾಡು

ಪ್ರಸಿದ್ಧ ಪ್ರವಾಸಿ ತಾಣ ಹಳೇತಲಕಾಡು ಊರೊಳಗಡೆ ಮುಖ್ಯರಸ್ತೆ ಅಭಿವೃದ್ದಿ ಕಾಮಗಾರಿ ಹತ್ತು ವರ್ಷದಿಂದ ಸ್ಥಗಿತಗೊಂಡು ನಿವಾಸಿಗಳ‌ನೆಮ್ಮದಿ‌ಹಾಳು ಮಾಡಿದೆ.

ಪಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ರಸ್ತೆ ವಿಸ್ತರಣೆಗೆ ವಾಸದ ಮನೆಗಳನ್ನು ತೆರವಿಗೆ ಸಹಕರಿಸಿದ ರಸ್ತೆ ಬದಿಯ ನಿವಾಸಿಗಳ ಸಂಕಷ್ಟ ಈಗ ಹೇಳತೀರದಾಗಿದೆ. ರಸ್ತೆ ವಿಸ್ತರಣೆಗೆ ವಸತಿ ನಿವೇಶನಗಳ ಬಿಟ್ಟುಕೊಟ್ಟ ಜನರ ಬದುಕು ಅತಂತ್ರವಾಗಿದೆ. ಇತ್ತ ರಸ್ತೆಯೂ ಅಭಿವೃದ್ದಿಯಾಗದೆ ಅತ್ತ ವಾಸದ ಮನೆಗಳನ್ನು ಕಳೆದುಕೊಂಡ ರಸ್ತೆ ಬದಿಯ ನಿವಾಸಿಗಳು ಎರಡು ವರ್ಷದಿಂದ ಸಂಕಟ ಅನುಭವಿಸಿದ್ದಾರೆ.

ಹಳೇ ತಲಕಾಡು ಪಾರಂಪರಿಕ ಪ್ರವಾಸಿ ಪ್ರಸಿದ್ಧ ಸ್ಥಳ, ನೂರಾರು ವರ್ಷಗಳಿಂದ ಗ್ರಾಮದ ನಿವಾಸಿಗಳು ಈಗ ರಸ್ತೆ ವಿಸ್ತರಣೆಯಾಗುವ ಪುರಾತನ ಆಂಜನೇಯ ದೇಗುಲವಿರುವ ರಾಜಬೀದಿಯ ಸುತ್ತಲಿನ ಬೀದಿಗಳಲ್ಲಿ ನೆಲೆಸಿದ್ದಾರೆ.

ಧಾರ್ಮಿಕ ಪ್ರಸಿದ್ಧ ಪಂಚಲಿಂಗ ದೇಗುಲಗಳ ದರ್ಶನಕ್ಕೆ ಮರಳುಗುಡ್ಡ ಹಾಗು ಅರಣ್ಯ ನಿಸರ್ಗಧಾಮ, ಕಾವೇರಿ ನದಿತೀರಕ್ಕೆ ಪ್ರವಾಸಿ ವಾಹನಗಳು ಊರೊಳಗಡೆಯ ಕಿರಿದಾದ ರಸ್ತೆಯಲ್ಲಿ ನಿತ್ಯ ಸಂಚರಿಸುತ್ತಿವೆ. ಇತ್ತಿಚಿನ ವರ್ಷಗಳಲ್ಲಿ ಕಿರಿದಾದ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದರಿಂದ ಸರ್ಕಾರ 2012 ರಲ್ಲಿ ಇಲ್ಲಿಯ ರಸ್ತೆ ವಿಸ್ತರಣೆಗೆ ಮುಂದಾಗಿತ್ತು.

ಇಲ್ಲಿಯ ರಸ್ತೆ ವಿಸ್ತರಣೆಯಿಂದ ಪಾರಂಪರಿಕ ಗ್ರಾಮದಲ್ಲಿ ನೂರಾರು ವರ್ಷದ ಹಳೆಯ ಕಾಲದ ಮನೆಗಳಿಗೆ ಹಾನಿಯಾಗುತ್ತದೆ, ಹೊರವರ್ತುಲ (ಬೈಪಾಸ್) ರಸ್ತೆ ನಿರ್ಮಿಸುವಂತೆ ಇಲ್ಲಿನ ಪ್ರಜ್ಞಾವಂತರು ಸಲಹೆ ನೀಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಪಾರಂಪರಿಕ ಸ್ಥಳದ ಸಂರಕ್ಷಣೆ ದೂರದೃಷ್ಟಿ ಇಲ್ಲದೆ ಊರೊಳಗಡೆ ರಸ್ತೆ ವಿಸ್ತರಣೆಗೆ ಮುಂದಾದ ಲೋಕೋಪಯೋಗಿ ಅಧಿಕಾರಿಗಳು, ಇಲ್ಲಿನ ರಸ್ತೆ ಅಭಿವೃದ್ದಿ ಪೂರ್ಣಗೊಳಿಸಲು ಇದುವರೆಗೂ ಸಫಲವಾಗದೆ ಅವರಿವರ ಮೇಲೆ ದೂರುತ್ತಿದ್ದಾರೆ.

ಕಳೆದ ಹತ್ತು ವರ್ಷದಿಂದ ಊರೊಳಗಿನ ಒಂದು ಕಿಮೀ ರಸ್ತೆ ಅಭಿವೃದ್ದಿ ನನೆಗುದಿಗೆ ಬಿದ್ದಿದ್ದು, ಹಾಲಿ ಇರುವ ಸ್ಥಿತಿಯಲ್ಲೇ ಇಲ್ಲಿನ ರಸ್ತೆ ಅಭಿವೃದ್ದಿಪಡಿಸಿ, ಗ್ರಾಮದ ಹೊರ ಭಾಗದಿಂದ ನಿಸರ್ಗಧಾಮದ ಕಾವೇರಿ ನದಿಯ ನೂತನ ಸೇತುವೆಗೆ ನೇರವಾಗಿ ಬೈಪಾಸ್ ಸಂಪರ್ಕ ರಸ್ತೆ ಕಲ್ಪಿಸಿದ್ದರೆ ತಲಕಾಡಿಗೆ ಭೇಟಿ ನೀಡುವ ಪ್ರವಾಸಿಗರು ಸೇರಿದಂತೆ ಸೇತುವೆ ದಾಟಿ ಚಾಮರಾಜನಗರ ಜಿಲ್ಲೆಗೆ ತೆರಳುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ವಾಗುತಿತ್ತು ಎಂಬುದು ಸಾರ್ವಜನಿಕರ ಅನಿಸಿಕೆ.

ಆದರೆ ಲೋಕೋಪಯೋಗಿ ಇಲಾಖೆ ಊರೊಳಗಡೆ ರಸ್ತೆ ವಿಸ್ತರಣೆ ಸಲುವಾಗಿ ಶೇ. 80ರಷ್ಟು ರಸ್ತೆ ಬದಿಯ ವಸತಿ ನಿವೇಶನ ತೆರವುಗೊಳಿಸಿದ್ದು. ಕೇವಲ 33 ವಸತಿ ನಿವೇಶನಗಳು ಮಾತ್ರ ತೆರವಿಗೆ ಬಾಕಿ ಉಳಿದಿವೆ. ಮನೆ ತೆರವು ಕಾರ್ಯ ಸ್ಥಗಿತಗೊಂಡ ಕಾರಣದಿಂದ ಊರೊಳಗಡೆ ರಸ್ತೆ ಉದ್ದಕ್ಕೂ ತಲಕಾಡಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಮೋಟು ಗೋಡೆಗಳು ವಿರೂಪ ರೀತಿಯ ಸ್ವಾಗತ ನೀಡುತ್ತಿವೆ.

ಬಾಕಿ ವಸತಿಗಳ ತೆರವಿಗೆ ಹೊಸ ಮಾರುಕಟ್ಟೆ ದರದ ಪ್ರಕಾರ ಪರಿಹಾರ ಒದಗಿಸಿಕೊಡಲು ಅಧಿಕಾರಿಗಳು ಮೀನ ಮೇಷ ಎಣಿಸಿದ ಪರಿಣಾಮ, ದಿನೇ ದಿನೇ ಇಲ್ಲಿನ ರಸ್ತೆ ಸಮಸ್ಯೆ ಬಿಡಿಸಲಾಗದ ಕಗ್ಗಂಟಾಗಿ ಮುಂದುವರೆಯಲು ಕಾರಣವಾಗಿದೆ.

ವಸತಿ ಕಳೆದುಕೊಳ್ಳಲು ಇಚ್ಚೆಯಿಲ್ಲದ ಕೆಲವರು ಹಿರಿಯರು ಬಾಳಿ ಬೆಳಗಿದ ಹಳೆಯ ಮನೆಗಳಲ್ಲಿ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದಾರೆ. ಸರ್ಕಾರದ ಯಾವುದೇ ಪರಿಹಾರ ಬೇಡ ನನ್ನ ಪೂರ್ವಿಕರು ವಾಸ ಮಾಡಿದ ಗೀತಾ ಸದನ ನಿವಾಸವನ್ನು ಉಳಿಸಿಕೊಟ್ಟರೆ ಸಾಕೆಂದು ಸ್ವತಂತ್ರ ಹೋರಾಟಗಾರ ರಾಮಸ್ವಾಮಿ ಅಯ್ಯಂಗಾರ್ ಅವರ ಪುತ್ರ ಅರ್ಚಕ ವಾಸು ಮೊರೆಯಿಟ್ಟಿದ್ದಾರೆ.

ಹತ್ತು ವರ್ಷದಿಂದ ಇಲ್ಲಿನ ರಸ್ತೆ ಅಭಿವೃದ್ದಿ ನೆಪದಲ್ಲಿ ತಲತಲಾಂತರದಿಂದ ಭಾವನಾತ್ಮಕ ಸಂಬಂಧ ಹೊಂದಿದ್ದ ರಸ್ತೆ ಬದಿಯ ಮನೆಗಳನ್ನು ಕೆಡವಿದ್ದು ಕೆಲವರಲ್ಲಿ ಅಸಮಾಧಾನ ನೋವಿಗೆ ಕಾರಣವಾಗಿದ್ದರೆ ಮತ್ತೆ ಕೆಲವರಲ್ಲಿ ಹದೆಗಟ್ಟಿರುವ ರಸ್ತೆ ಅಭಿವೃದ್ದಿಯಾಗಲಿ ಎಂಬ ಆಶಯವೂ ವ್ಯಕ್ತವಾಗಿದೆ.

ಲೋಕೋಪಯೋಗಿ ಇಲಾಖೆ ಇಲ್ಲಿನ ರಸ್ತೆ ವಿಸ್ತರಣೆಗೆ 133 ವಸತಿ ನಿವೇಶನಗಳ ತೆರವಿಗೆ ಗುರುತಿಸಿದೆ. ಇದರಲ್ಲಿ ಬಹುಪಾಲು ವಸತಿಗಳನ್ನು ಈಗಾಗಲೆ ಅಧಿಕಾರಿಗಳು ತೆರವು ಗೊಳಿಸಿ ವರ್ಷವಾಗಿದೆ. ಇನ್ನೂ 33 ವಸತಿ ಪ್ರದೇಶ ಮಾತ್ರ ತೆರವಾಗದೆ ಬಾಕಿ ಉಳಿದಿವೆ. ಇದರಿಂದ ಬೇಸಿಗೆಯಲ್ಲಿ ಜನ ನಿತ್ಯ ಧೂಳು ಸೇವನೆಯ ನರಕ ಅನುಭವಿಸುತ್ತಿದ್ದಾರೆ.

ಸದ್ಯದಲ್ಲೇ ಗ್ರಾಮದೇವತೆ ಶ್ರೀಬಂಡರಸಮ್ಮ ದೊಡ್ಡ ಹಬ್ಬ ಚಾಲನೆಗೊಳ್ಳಲಿದ್ದು, ಹಬ್ಬದ ವೇಳೆಗಾದರು ದುಸ್ಥಿತಿಯಲ್ಲಿರುವ ಇಲ್ಲಿನ ರಸ್ತೆ ದುರಸ್ತಿ ಆಗಬಹುದು ಎಂದು ನಿರೀಕ್ಷಿಸಿದ್ದವರಿಗೆ ನಿರಾಸೆಯಾಗಿದೆ. ಎರಡು ವರ್ಷದ ಹಿಂದೆಯೇ ಇಲ್ಲಿನ ರಸ್ತೆ ವಿಸ್ತರಣೆಗೆ ಭೂಮಾಲೀಕರು ಸರ್ಕಾರಕ್ಕೆ ವಸತಿ ನಿವೇಶನ ಬಿಟ್ಟುಕೊಟ್ಟಿದ್ದು ಸ್ಥಳೀಯರ ಸಹಕಾರಕ್ಕೆ ಸಾಕ್ಷಿಯಾಗಿತ್ತು. ಆದರೆ ಇಲ್ಲಿನ ರಸ್ತೆ ಅಭಿವೃದ್ದಿಗೆ ನೂತನ ಮಾರುಕಟ್ಟೆ ದರದ ಪ್ರಕಾರ ಟೆಂಡರ್ ನಿಗದಿಪಡಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಡಮಾಡಿದ್ದು ಮತ್ತಷ್ಟು ಹಿನ್ನಡೆಗೆ ಕಾರಣವಾಗಿದೆ.ಹಳೇ ತಲಕಾಡಿನ ರಸ್ತೆ ಅಭಿವೃದ್ದಿಗೆ 5 ಕೋಟಿ ರೂ. ವೆಚ್ಚದಲ್ಲಿ ಮರು ಟೆಂಡರ್ ಕರೆಯಲಾಗಿದೆ. ಇಲ್ಲಿನ ರಸ್ತೆ ವಿಸ್ತರಣೆಗೆ ವಸತಿ ನಿವೇಶನ ಕಳೆದುಕೊಳ್ಳುವ ಫಲಾನುಭವಿಗಳಿಗೆ ಸೂಕ್ತ ಪರಿಹಾರ ಒದಗಿಸಲು ಸಧ್ಯದಲ್ಲೇ ಹಿರಿಯ ಅಧಿಕಾರಿಗಳು ಸಭೆ ಸೇರಿ ಕ್ರಮ ಕೈಗೊಳ್ಳಲಿದ್ದಾರೆ.

- ಸತೀಶ್‌ಚಂದ್ರ, ಎಇಇ, ಲೋಕೋಪಯೋಗಿ ಇಲಾಖೆ, ಟಿ. ನರಸೀಪುರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಮಂತರು ಗ್ಯಾರಂಟಿಯಿಂದ ದೂರ ಇರಲಿ: ಎಂ.ಬಿ.ಪಾಟೀಲ್‌
ಖಮೇನಿ ಆತ್ಮಕ್ಕೆ ಶಾಂತಿ ದೊರೆಯಲಿ, ಅಮೆರಿಕ ದಾಳಿ ಖಂಡನಾರ್ಹ: ಸಿಎಂ