ಪಾಲಾಕ್ಷ ಬಿ. ತಿಪ್ಪಳ್ಳಿ ಯಲಬುರ್ಗಾ
ಪಟ್ಟಣ ಸೇರಿದಂತೆ ಸುತ್ತಲಿನ ಹಳ್ಳಿಯ ಮಕ್ಕಳಿಗೆ ಅಂದು ಪ್ರಮುಖ ವಿದ್ಯಾ ಕೇಂದ್ರವಾಗಿದ್ದ ಈ ಶಾಲೆಯಲ್ಲಿ ಓದಿದ ಬಹುತೇಕರು ಉನ್ನತ ಸ್ಥಾನದಲ್ಲಿದ್ದಾರೆ. ಆದರೆ ಈಗ ಕನಿಷ್ಠ ಪಕ್ಷ ಮೂಲ ಸೌಕರ್ಯಗಳಿಲ್ಲದೆ ಅನೇಕ ಸಮಸ್ಯೆ ಎದುರಿಸುತ್ತಿದೆ. ಇದರಿಂದ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಇಲ್ಲದಾಗಿದೆ.ಹೌದು. ಇದು ಪಟ್ಟಣದಲ್ಲಿ ೧೯೫೨ರಲ್ಲಿ ಸ್ಥಾಪನೆಯಾದ ಶಾಸಕರ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ವಾಸ್ತವ ಸ್ಥಿತಿ. ಶಾಲೆ ಒಟ್ಟು ೫೨ ಕೊಠಡಿ ಹೊಂದಿದೆ. ಬಹುತೇಕ ಕೊಠಡಿಗಳು ಮಳೆ ಬಂದರೆ ಸೋರುತ್ತಿವೆ. ೮ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದ್ದು, ಶಾಲಾ ಆಡಳಿತ ಮಂಡಳಿ ಅವುಗಳ ನೆಲಸಮ ಮಾಡಲು ಸಂಬಂಧಿಸಿದ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಐದಾರು ತಿಂಗಳು ಕಳೆದರೂ ಇದುವರೆಗೂ ಅವುಗಳನ್ನು ಕೆಡವಲು ಕಾಲ ಕೂಡಿ ಬಂದಿಲ್ಲ. ದುರಸ್ತಿಯಲ್ಲಿರುವ ಕೊಠಡಿಗಳಿಗೆ ಬೀಗ ಜಡಿಯಲಾಗಿದೆ. ಮಕ್ಕಳು ಆಟೋಟದಲ್ಲಿ ತೊಡಗಿದಾಗ ಶಿಥಿಲ ಕೊಠಡಿ ಹತ್ತಿರ ಹೋದರೆ ಅಪಾಯ ಎದುರಿಸುವಂತಹ ವಾತಾವರಣ ಇದೆ.
೧೯೫೨ರಲ್ಲಿ ನಿರ್ಮಾಣ: ಪಟ್ಟಣದ ಹೃದಯ ಭಾಗದಲ್ಲಿ ಸುಮಾರು ೧೯೫೨ರಲ್ಲಿ ಸ್ಥಾಪನೆಯಾದ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯು ಅಮೃತ ಮಹೋತ್ಸವದ ಹೊಸ್ತಿಲಲ್ಲಿದೆ. ಇತಿಹಾಸದ ಪುಟ ಸೇರಲಿರುವ ಈ ಶಾಲೆಯ ಅಭಿವೃದ್ಧಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಆಸಕ್ತಿ ವಹಿಸದಿರುವುದು ವಿಪರ್ಯಾಸವೇ ಸರಿ. ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನ ಮಾಡುತ್ತಿರುವ ಶಾಸಕ ಬಸವರಾಜ ರಾಯರಡ್ಡಿ ಪಟ್ಟಣದಲ್ಲಿ ಶಾಸಕರ ಹೆಸರಿನಲ್ಲಿರುವ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಒತ್ತು ನೀಡಲಿ ಎನ್ನುವುದು ಶಿಕ್ಷಣಪ್ರೇಮಿಗಳ ಆಶಯವಾಗಿದೆ.ವ್ಯವಸ್ಥೆಯಾಗಲಿ: ೧ರಿಂದ ೮ನೇ ತರಗತಿ ವರೆಗೆ ಇರುವ ಶಾಲೆಯಲ್ಲಿ ೨೭೫ ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿದ್ದಾರೆ. ೧೩ ಶಿಕ್ಷಕರಿದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಾಲೆಯಲ್ಲಿ ಶೌಚಾಲಯ, ಶುದ್ಧ ಕುಡಿಯುವ ನೀರು, ಆಟದ ಮೈದಾನದ ವ್ಯವಸ್ಥೆ ಸೇರಿ ಇನ್ನಿತರ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. ಶಿಥಿಲಗೊಂಡ ಕೊಠಡಿಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಲಾಗುತ್ತಿದೆ. ಬೇರೆ ಬೇರೆ ಶಾಲೆಗಳಿಗೆ ಮಾದರಿಯಾಗಬೇಕಾದ ಶಾಸಕರ ಮಾದರಿಯ ಶಾಲೆಗೆ ಮೂಲ ಸೌಕರ್ಯ ಒದಗಿಸುವ ಜತೆಗೆ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಲಿ ಎನ್ನುವುದು ವಿದ್ಯಾರ್ಥಿಗಳ ಪಾಲಕರ ಒತ್ತಾಯವಾಗಿದೆ.
ಪಟ್ಟಣದಲ್ಲಿ ಒಂದು ಮಾದರಿ ಶಾಲೆ ಇರಬೇಕು ಎನ್ನುವುದು ಎಲ್ಲರ ಅಪೇಕ್ಷೆಯಾಗಿದೆ. ಶಾಸಕರ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿಗೆ ಮುಂಬರುವ ದಿನಗಳಲ್ಲಿ ಅವಶ್ಯ ಮೂಲ ಸೌಕರ್ಯ ಒದಗಿಸುವ ಸಲುವಾಗಿ ಕ್ರಿಯಾಯೋಜನೆ ರೂಪಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಯಲಬುರ್ಗಾ ಪ್ರಭಾರ ಬಿಇಒ ಅಶೋಕ ಗೌಡರ ತಿಳಿಸಿದ್ದಾರೆ.