ಪ್ರತಿಯೊಬ್ಬ ಮಾನವನಲ್ಲಿ ದೈವಿಕ ಶಕ್ತಿ: ಸುಚೇತನಾ ಬದರಿನಾಥ

KannadaprabhaNewsNetwork |  
Published : Sep 20, 2025, 01:01 AM IST
19ಎಚ್‌ವಿಆರ್1 | Kannada Prabha

ಸಾರಾಂಶ

ನಮ್ಮ ಪಂಚೇಂದ್ರಿಯಗಳಿಂದ ಗಳಿಸಿದ ಜ್ಞಾನವನ್ನು ಮೆದುಳಿನಲ್ಲಿ ಮನಸ್ಸು ಮತ್ತು ಬುದ್ಧಿಗಳಿಂದ ಸಂಸ್ಕರಿಸಿ ಆನಂತರ ಚಿತ್ತದಲ್ಲಿ ನೆಲೆಯಾಗುತ್ತವೆ. ಆದ್ದರಿಂದ ಯಾರು ಏಕಾಗ್ರತೆಯಿಂದ ಜ್ಞಾನವನ್ನು ಗಳಿಸುತ್ತಾರೊ ಅವರು ಅತ್ಯಂತ ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸುತ್ತಾರೆ.

ಹಾವೇರಿ: ಪ್ರತಿಯೊಬ್ಬ ಮಾನವನಲ್ಲಿ ದೈವಿಕ ಶಕ್ತಿ ಇರುತ್ತದೆ. ಅದನ್ನು ಸಮರ್ಪಕವಾಗಿ ಸತ್ಕಾರ್ಯಕ್ಕೆ ಬಳಸಿಕೊಂಡರೆ ಬದುಕಿನಲ್ಲಿ ಅದ್ಭುತಗಳು ಜರುಗುತ್ತವೆ ಎಂದು ವಿವೇಕ ಜಾಗೃತಿ ಬಳಗದ ಉಪನ್ಯಾಸಕಿ ಸುಚೇತನಾ ಬದರಿನಾಥ ಹೇಳಿದರು.

ನಗರದ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿವೇಕ ಜಾಗೃತಿ ಬಳಗ, ಉಡುಪಿ ಜಿಲ್ಲೆಯ ಸಾಲಿಗ್ರಾಮದ ಡಿವೈನ್ ಪಾರ್ಕ್ ಹಾವೇರಿ ಘಟಕದ ವತಿಯಿಂದ ನಡೆದ ವಿದ್ಯಾರ್ಥಿ ದೀಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶೇಷವಾಗಿ ವಿದ್ಯಾರ್ಥಿನಿಯರು ನಿತ್ಯ ಧ್ಯಾನ, ವ್ಯಾಯಾಮ ಮತ್ತು ಸದ್ಗುಣಗಳನ್ನು ಅಭ್ಯಾಸ ಮಾಡಿಕೊಂಡರೆ ಸಾಧನೆಗೆ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದರು.

ನಮ್ಮ ಪಂಚೇಂದ್ರಿಯಗಳಿಂದ ಗಳಿಸಿದ ಜ್ಞಾನವನ್ನು ಮೆದುಳಿನಲ್ಲಿ ಮನಸ್ಸು ಮತ್ತು ಬುದ್ಧಿಗಳಿಂದ ಸಂಸ್ಕರಿಸಿ ಆನಂತರ ಚಿತ್ತದಲ್ಲಿ ನೆಲೆಯಾಗುತ್ತವೆ. ಆದ್ದರಿಂದ ಯಾರು ಏಕಾಗ್ರತೆಯಿಂದ ಜ್ಞಾನವನ್ನು ಗಳಿಸುತ್ತಾರೊ ಅವರು ಅತ್ಯಂತ ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸುತ್ತಾರೆ. ಪ್ರತಿಯೊಬ್ಬರಿಗೂ ಯಶಸ್ಸನ್ನು ಗಳಿಸಲು ಸಾಧ್ಯವಿದೆ. ನಮ್ಮ ಅಂತರಂಗದ ಸಂಪೂರ್ಣ ಶಕ್ತಿಯ ಪರಿಚಯವಿದ್ದರೆ ಮಾತ್ರ ಸಾಧ್ಯ. ವಿದ್ಯಾರ್ಥಿನಿಯರು ಉತ್ತಮ ವ್ಯಕ್ತಿತ್ವ ಮತ್ತು ಯಶಸ್ಸನ್ನು ಗಳಿಸಬೇಕಾದರೆ ತಮ್ಮ ಅಂತರಂಗದ ವಿಕಾಸಕ್ಕೆ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.

ಇದೇ ವೇಳೆ ವಿದ್ಯಾರ್ಥಿನಿಯರಿಗೆ ಆಹಾರದ ಕ್ರಮ, ದೈಹಿಕ ಧೃಡತೆಯ ಮಹತ್ವ, ವ್ಯಾಯಾಮ ಮತ್ತು ಪ್ರಾಣಾಯಾಮಗಳನ್ನು ತಿಳಿಸಿಕೊಟ್ಟರು.

ಸಾಂಸ್ಕೃತಿಕ ಕಾರ್ಯದರ್ಶಿ ಶೇಖರ ಭಜಂತ್ರಿ ಮಾತನಾಡಿ, ಸ್ವಾಮಿ ವಿವೇಕಾನಂದರು ಎಂದರೆ ನಮ್ಮ ಆಂತರ್ಯದ ಮತ್ತು ದೇಶದ ಅಂತಃಶಕ್ತಿಯ ಪ್ರತೀಕ. ನಮ್ಮೊಳಗಿನ ಚೈತನ್ಯ ಶಕ್ತಿಯನ್ನು ಬಡಿದೆಚ್ಚರಿಸಿ ಸದಾ ಜಾಗೃತವಾಗಿರಿಸುವ ಅಪ್ರತಿಮ ಶಕ್ತಿಯ ವೀರ ಸನ್ಯಾಸಿ. ವ್ಯಕ್ತಿತ್ವ ನಿರ್ಮಾಣದಲ್ಲಿ ಬಾಹ್ಯ ವಿಕಾಸದ ಜತೆಗೆ ಆಂತರಿಕ ವಿಕಾಸಕ್ಕೆ ಹೆಚ್ಚು ಮಹತ್ವ ನೀಡಿದವರು. ಆದ್ದರಿಂದ ವಿದ್ಯಾರ್ಥಿನಿಯರು ವಿವೇಕ ಜಾಗೃತಿ ಬಳಗದ ವತಿಯಿಂದ ನೀಡಲಾಗುವ ಉಪಯುಕ್ತ ಮಾಹಿತಿಗಳನ್ನು ಪಡೆದು ಜಾರಿಗೆ ತರಬೇಕು ಎಂದರು.

ಆರತಿ ಹೆಗಡೆ ಅವರು ಶ್ರೀರಾಮ ಸ್ತೋತ್ರದ ಆನಂತರ ಸಾಲಿಗ್ರಾಮದ ಡಿವೈನ್ ಪಾರ್ಕ್ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮಗಳ ಉಪಯೋಗದ ಮಾಹಿತಿ ಹಂಚಿಕೊಂಡರು. ಆನಂತರ ಬಳಗದ ಹಾವೇರಿ ಘಟಕದ ಅಧ್ಯಕ್ಷೆ ಶಾಂತಲಾ ಶಿವಶೆಟ್ಟರ ಮತ್ತು ಉಪನ್ಯಾಸ ನೀಡಿದ ಸುಚೇತನ ಬದರಿನಾಥ ಅವರನ್ನು ಕಾಲೇಜು ವತಿಯಿಂದ ಗೌರವಿಸಲಾಯಿತು.

ವಿವೇಕ ಬಳಗದ ಸದಸ್ಯರಾದ ಸರ್ವಮಂಗಳಾ ತಳವಾರ, ಶೈಲಾ ಅಡವಿ ಹಾಗೂ ಉಪನ್ಯಾಸಕರಾದ ರಮೇಶ ಲಂಬಾಣಿ, ಎಸ್.ಸಿ. ಮರಡಿ, ರವಿ ಸಾದರ, ವಿ.ಎಸ್. ಪಾಟೀಲ, ವಿ.ಟಿ. ಹೊನ್ನಪ್ಪನವರ, ಮಂಜುನಾಥ ಹತ್ತಿಯವರ, ಈಶ್ವರಗೌಡ ಪಾಟೀಲ, ಎನ್‌ಎಸ್‌ಎಸ್ ಸಂಯೋಜಕಿ ಪುಷ್ಪಲತಾ ಡಿ.ಎಲ್., ಶಿವಾನಂದ ಕೆ., ರೂಪ ಪಾಟೀಲ, ತಹಸಿನ್ ಡಂಬಳ ಇದ್ದರು.

ಸಾಂಸ್ಕೃತಿಕ ಕಾರ್ಯದರ್ಶಿ ಶೇಖರ ಭಜಂತ್ರಿ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5-6 ತಿಂಗಳಿಂದ ನೀರು ಪೋಲು: ಕ್ರಮಕೈಗೊಳ್ಳದ ಅಧಿಕಾರಿಗಳು
ತಮ್ಮ ಮೇಲಿನ ಆರೋಪ ಸುಳ್ಳು, ಆಧಾರ ರಹಿತ : ಮುನೀಶ್‌ ಮೌದ್ಗಿಲ್‌