ಪರಶಿವಮೂರ್ತಿ ಮಾಟಲದಿನ್ನಿ
ಕೃಷಿಯಿಂದ ನಿರೀಕ್ಷಿತ ಆದಾಯ ಬಾರದಿದ್ದರೂ ಸಂಪ್ರದಾಯದ ಹಬ್ಬ ಆಚರಿಸಲೇಬೇಕಾದ ಅನಿವಾರ್ಯತೆಯಿಂದ ರೈತರು ಮಾರುಕಟ್ಟೆಯಲ್ಲಿ ಖರೀದಿಗೆ ಮುಂದಾಗಿದ್ದಾರೆ. ಇದರ ನಡುವೆ ಹೂವು, ಹಣ್ಣು ಹಾಗೂ ಅಲಂಕಾರಿಕ ವಸ್ತುಗಳ ಬೆಲೆ ಏರಿಕೆ ರೈತರ ಜೇಬಿಗೆ ಮತ್ತಷ್ಟು ಕತ್ತರಿ ಹಾಕಿದೆ.
ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಕುಷ್ಟಗಿ ಪಟ್ಟಣದ ಬಸವೇಶ್ವರ ವೃತ್ತ, ಕಾಯಿಪಲ್ಯ ಮಾರುಕಟ್ಟೆ, ಪೊಲೀಸ್ ಠಾಣೆ ಮುಂಭಾಗ, ಬಸ್ ನಿಲ್ದಾಣದ ರಸ್ತೆ ಸೇರಿದಂತೆ ದೋಟಿಹಾಳ, ಹನುಮಸಾಗರ, ಹನುಮನಾಳ, ತಾವರಗೇರಾ ಮತ್ತಿತರ ಗ್ರಾಮಗಳ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ.ವಿಶೇಷವಾಗಿ ಆಕಾಶಬುಟ್ಟಿಗಳು, ಅಲಂಕಾರಿಕ ದೀಪಗಳು, ಬಾಗಿಲಿನ ತೋರಣಗಳು, ಪೂಜಾ ಸಾಮಗ್ರಿಗಳು, ಹೂವು ಹಾಗೂ ಹಣ್ಣುಗಳ ಖರೀದಿ ಹೆಚ್ಚಾಗಿದೆ. ರಟ್ಟು, ಫೈಬರ್, ಪ್ಲಾಸ್ಟಿಕ್ ಹಾಗೂ ಬಟ್ಟೆಗಳಿಂದ ತಯಾರಿಸಿದ ವಿವಿಧ ವಿನ್ಯಾಸದ ಆಕಾಶಬುಟ್ಟಿಗಳು ಗ್ರಾಹಕರ ಗಮನ ಸೆಳೆಯುತ್ತಿವೆ.
ಒಂದೆಡೆ ಮುಂಗಾರು ಬೆಳೆ ನಷ್ಟ, ಮತ್ತೊಂದೆಡೆ ಹಿಂಗಾರು ಮಳೆಯ ಕೊರತೆ. ಇದರಿಂದ ಕೃಷಿ ಆದಾಯವಿಲ್ಲದೆ ಸಂಕಷ್ಟದಲ್ಲಿರುವ ರೈತರಿಗೆ ಹಬ್ಬದ ಖರೀದಿ ಹೆಚ್ಚುವರಿ ಹೊರೆಯಾಗಿದೆ. ಆದರೂ ಲಕ್ಷ್ಮೀ ಪೂಜೆ, ಎತ್ತುಗಳ ಅಲಂಕಾರ ಹಾಗೂ ಮನೆಗಳ ಸಿಂಗಾರಕ್ಕಾಗಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
ದರ ಏರಿದೆ: ದೀಪಾವಳಿ ಹಬ್ಬದ ಖರೀದಿ ಮೂರು ದಿನಗಳ ಕಾಲ ನಡೆಯಲಿದ್ದು, ವ್ಯಾಪಾರ ಉತ್ತಮವಾಗಿ ನಡೆಯುತ್ತಿದೆ. ಮಳೆ ಬಾರದ ಹಿನ್ನೆಲೆಯಲ್ಲಿ ಬೆಳೆ ಕಡಿಮೆಯಾಗಿದ್ದು, ಹೂವು ಹಾಗೂ ಹಣ್ಣುಗಳ ದರವೂ ಏರಿಕೆಯಾಗಿದೆ. ಗ್ರಾಹಕರು ಅನಿವಾರ್ಯವಾಗಿ ಕಡಿಮೆ ಪ್ರಮಾಣದಲ್ಲಿ ಖರೀದಿಸುವ ಮೂಲಕ ಹಬ್ಬ ಆಚರಣೆಗೆ ಮುಂದಾಗಿದ್ದಾರೆ ಎಂದು ಹೂವಿನ ವ್ಯಾಪಾರಿ ಮರಿಯಪ್ಪ ಭಜಂತ್ರಿ ಹೇಳಿದರು.